Advertisement

ಸಂಕ್ರಾಂತಿಗೆ ಪಾಸ್‌ಪೋರ್ಟ್‌ ಕಚೇರಿ

02:44 PM Jan 11, 2018 | |

ತುಮಕೂರು: ಕೇಂದ್ರ ಸರಕಾರದಿಂದ ಜಿಲ್ಲೆಗೆ ಮಂಜೂರಾಗಿರುವ ಪಾಸ್‌ಪೋರ್ಟ್‌ ಕಚೇರಿ ಯನ್ನು ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿರುವ ಅಂಚೆ ಮತ್ತು ತಂತಿ ಇಲಾಖೆಯ ವಸತಿಗೃಹವಿರುವ ಜಾಗದಲ್ಲಿ ತೆರೆಯಲು ಎಲ್ಲಾ ರೀತಿಯ ಪರಿಶೀಲನೆ ನಡೆಸಲಾಗಿದೆ. ಸಂಕ್ರಾಂತಿ ನಂತರ ಜಿಲ್ಲೆಯ ಜನರಿಗೆಒಳ್ಳೆಯ ಸಂದೇಶ ಸಿಗಲಿದೆ ಎಂದು ಸಂಸದ ಎಸ್‌. 
ಪಿ. ಮುದ್ದಹನುಮೇಗೌಡ ತಿಳಿಸಿದರು.

Advertisement

ನಗರದ ಶೆಟ್ಟಿಹಳ್ಳಿ ಮುಖ್ಯ ರಸ್ತೆಯಲ್ಲಿರುವ ಪಿಎನ್‌ಟಿ ಆವರಣದಲ್ಲಿರುವ ವಸತಿ ಗೃಹವನ್ನು ತುಮಕೂರು ನಗರ ಶಾಸಕ ಡಾ.ಎಸ್‌. ರಫಿಕ್‌ ಅಹಮದ್‌, ಪಾಸ್‌ಪೋರ್ಟ್‌ ಇಲಾಖೆಯ ಕರ್ನಾಟಕ ಅಧಿಕಾರಿ ರವಿನಾಯಕ್‌ ಮತ್ತು ಅಂಚೆ
ಇಲಾಖೆಯ ಅಧೀಕ್ಷಕ ಸ್ವಾಮಿ ಅವರೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ನಿರ್ಧಾರ ಬದಲು: ಈ ಹಿಂದೆ ಗಾಂಧಿನಗರದ ಅಂಚೆ ಕಚೇರಿ ಮತ್ತು ಜಿಲ್ಲಾಧಿಕಾರಿಗಳ ಅಂಚೆ ಕಚೇರಿಯಲ್ಲಿ ಪಾಸ್‌ಪೋರ್ಟ್‌ ಕಚೇರಿ ತೆರೆಯಲು ಸ್ಥಳ ಪರಿಶೀಲನೆ ನಡೆಸಲಾಗಿತ್ತು. ಆದರೆ ಅಂತಿಮವಾಗಿ ಅವುಗಳನ್ನು ಕೈಬಿಟ್ಟು, ರಾಜ್ಯದ ಬೇರೆ ಬೇರೆ ಕಡೆ ಇರುವಂತೆ ಅಂಚೆ ಇಲಾಖೆ ನೌಕರರ ವಸತಿ ಗೃಹದಲ್ಲಿಯೇ ಕಚೇರಿ ತೆರೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಅಂಚೆ ಇಲಾಖೆ ಸಿದ್ಧ: ಈಗಾಗಲೇ ಸ್ಥಳೀಯ ಶಾಸಕರು, ಅಂಚೆ ಇಲಾಖೆ ಮತ್ತು ಪಾಸ್‌ಪೋರ್ಟ್‌ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲಿಸಿ, ಇಲಾಖೆಯ ಗಮನಕ್ಕೆ ತರಲಾಗಿತ್ತು. ಇಲಾಖೆಯವರು ವರದಿ ನೀಡುವಂತೆ ಕೋರಿದ ಹಿನ್ನೆಲೆಯಲ್ಲಿ ಇಂದು ಪರಿಶೀಲನೆ ನಡೆಸಲಾಗಿದೆ. ಈ ಜಾಗದಲ್ಲಿ ಪಾಸ್‌ ಪೋರ್ಟ್‌ ಕಚೇರಿ ತರೆಯಲು ಅನುಮೋದನೆ ದೊರೆತರೆ ಕೂಡಲೇ ಕಟ್ಟಡಕ್ಕೆ ಅಗತ್ಯವಿರುವ ಬದಲಾವಣೆ ಮಾಡಿಕೊಡಲು ಅಂಚೆ ಇಲಾಖೆ ಸಿದ್ಧವಿದೆ. ಒಂದು ವೇಳೆ ಹಣಕಾಸಿನ ಕೊರತೆ ಬಂದರೆ ಸಂಸದರು ಮತ್ತು ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಅನುದಾನ ಒದಗಿಸಲು ಇಬ್ಬರು ಒಪ್ಪಿದ್ದೇವೆ ಎಂದು ತಿಳಿಸಿದರು.  

ಸೌಕರ್ಯ ಕಲ್ಪಿಸಲು ಕ್ರಮ: ಪಿ.ಎನ್‌.ಟಿ. ಕ್ವಾರ್ಟರ್ಸ್‌ನಲ್ಲಿ ನೌಕರರಿಗಾಗಿ ಸುಮಾರು 72 ವಸತಿ ಗೃಹಗಳಿದ್ದು, ಅವುಗಳಲ್ಲಿ ಒಂದನ್ನು ಮಾತ್ರ ಬಳಕೆ ಮಾಡಲಾಗುತ್ತಿದೆ. ಮುಖ್ಯರಸ್ತೆಯಲ್ಲಿರುವ ಕಟ್ಟಡಕ್ಕೆ ಅಗತ್ಯ ಮಾರ್ಪಾಡುಗಳನ್ನು
ಮಾಡುವುದರ ಜೊತೆಗೆ,ಇತರೆ ವಸತಿ ಗೃಹಗಳಿಂದ ಬೇರ್ಪಡಿಸಿ, ಮುಖ್ಯ ರಸ್ತೆಯಿಂದ ಪ್ರತ್ಯೇಕ ಪ್ರವೇಶ ದ್ವಾರ, ವಾಹನ ನಿಲುಗಡೆಗೆ ಸ್ಥಳಾವಕಾಶ ಹಾಗೂ ಶೌಚಾಲಯವನ್ನು ನಿರ್ಮಿಸಿಕೊಡಲಾಗುವುದು. 

Advertisement

ವಸತಿ ಗೃಹಗಳಲ್ಲಿ ವಾಸವಿರುವ ನೌಕರರಿಗೆ ಯಾವುದೇ ತೊಂದರೆಯಾಗದ ರೀತಿ ಪಾಸ್‌ ಪೋರ್ಟ್‌ ಕಚೇರಿಯನ್ನು ವಿಭಾಗಿಸಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಿರ್ಮಿಸಿ ಕೊಡಲಾಗುವುದು. ಒಮ್ಮೆ ಕಚೇರಿ ಆರಂಭ ಗೊಂಡರೆ ತುಮಕೂರು ಸೇರಿದಂತೆ ಸುತ್ತಮುತ್ತಲ ಜನರಿಗೆ, ಅದರಲ್ಲಿಯೂ ಯುವಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ನುಡಿದರು.

ಪಾಸ್‌ ಪೋರ್ಟ್‌ ಇಲಾಖೆ ಸಜ್ಜು: ಕರ್ನಾಟಕ ವಿಭಾಗದ ಪಾಸ್‌ಪೋರ್ಟ್‌ ಅಧಿಕಾರಿ ರವಿನಾಯಕ್‌ ಮಾತನಾಡಿ, ಇಲಾಖೆ ಒಂದು ಪಾಸ್‌ಪೋರ್ಟ್‌ ಕಚೇರಿ ತೆರೆಯಲು ಅಗತ್ಯವಿರುವ ಯಂತ್ರೋಪಕರಣಗಳೊಂದಿಗೆ ತಾಂತ್ರಿಕವಾಗಿ ಸಿದ್ಧವಿದೆ. ಕಟ್ಟಡಕ್ಕೆ ಇಲಾಖೆಯ ಹಿರಿಯ ಅಧಿಕಾರಿ ಗಳು ಅನುಮತಿ ನೀಡಿದ ಕೂಡಲೇ ಪೀಠೊಪಕರಣಗಳಿಗೆ ಆರ್ಡರ್‌ ಮಾಡಲಾಗುವುದು ಎಂದರು.

ಹಿರಿಯ ಅಧಿಕಾರಿಗಳಿಗೆ ವರದಿ: ಶೀಘ್ರವೇ ಈ ಕಟ್ಟಡದಲ್ಲಿ ಪಾಸ್‌ ಪೋರ್ಟ್‌ ಕಚೇರಿ ತೆರೆಯುವ ಕುರಿತು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಿದ್ದೇನೆ. ದಿನಕ್ಕೆ 100-150 ಅರ್ಜಿಗಳ ಪರಿಶೀಲನೆ ನಡೆಯಲಿದೆ. ದಾಖಲೆಗಳ ಪರಿಶೀಲನೆಗೆ ಬರುವ ಸಾರ್ವಜನಿಕರು ಕುಳಿತುಕೊಳ್ಳಲು, ವಿವಿಧ ಪರೀಕ್ಷೆಗೆ ಒಳಪಡಲು ಅಗತ್ಯವಿರುವ ಪ್ರತ್ಯೇಕ ಕೊಠಡಿಗಳಾಗಿ ಮಾರ್ಪಾಡು ಮಾಡುವ ಬಗ್ಗೆ ಅಂಚೆ ಅಧೀಕ್ಷಕರು ಕ್ರಮ ಕೈಗೊಳ್ಳಲಿದ್ದಾರೆ. ಕಚೇರಿಯ ಭದ್ರತೆಗೆ
ಪ್ರತ್ಯೇಕ ಸೆಕ್ಯೂರಿಟಿ ವ್ಯವಸ್ಥೆ ಇರುತ್ತದೆ. ಅಲ್ಲದೆ ಸ್ಥಳೀಯ ಪೊಲೀಸರ ನೆರವನ್ನು ಕೋರಲಾಗುವುದು ಎಂದು ಹೇಳಿದರು.

ಸ್ಥಳೀಯರಿಂದ ಸಂಸದರಿಗೆ ಮನವಿ: ಉದ್ದೇಶಿಸಿತ ಪಾಸ್‌ಪೋರ್ಟ್‌ ಕಚೇರಿಯನ್ನು ತೆರೆಯಲು ಉದ್ದೇಶಿಸಿರುವ ಪಿ.ಎನ್‌.ಟಿ. ಕ್ವಾರ್ಟರ್ಸ್‌ನಲ್ಲಿ ಹಾಲಿ ವಾಸವಿರುವ ಕುಟುಂಬಗಳ ಮಹಿಳೆಯರು, ಇತ್ತೀಚೆ‌ಗೆ ವಸತಿ ಗೃಹದಲ್ಲಿ ಕಳ್ಳತನ ನಡೆದಿದ್ದು, ಹತ್ತಾರು ವರ್ಷಗಳ ನಂತರ ನಡೆದಿರುವ ಏಕೈಕ ಮನೆಕಳವು ಪ್ರಕರಣ. 

ಪಾಸ್‌ಪೋರ್ಟ್‌ ಕಚೇರಿ ತೆರೆದರೆ ಬಂದು ಹೋಗುವವರ ಸಂಖ್ಯೆಯೂ ಹೆಚ್ಚಲಿದೆ. ಕಳ್ಳತನ ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆಂತಕ ವ್ಯಕ್ತಪಡಿಸಿ, ಈ ಸಂಬಂಧ ಮನವಿಯನ್ನು ಸಲ್ಲಿಸಿದ್ದು, ಮನವಿಯಲ್ಲಿ ಮನೆ ಕಳವು ಪ್ರಕರಣದ ತನಿಖೆ ನಡೆಸಿ ಕಳ್ಳರನ್ನು ಪತ್ತೆ ಹೆಚ್ಚಿ, ಮಾಲುಗಳನ್ನು ವಾಪಸ್‌ ಕೊಡಿಸಿಕೊಡುವಂತೆ ಹಾಗೂ ರಾತ್ರಿ ಗಸ್ತು ಹೆಚ್ಚಳ ಮಾಡುವಂತೆ ಕೋರಿದ್ದಾರೆ. 

ಮನವಿ ಸ್ವೀಕರಿಸಿ ಮಾತನಾಡಿದ ಸಂಸದ ಮುದ್ದಹನುಮೇ ಗೌಡ ಅವರು ವಸತಿ ಗೃಹದ ವಾಸಿಗಳಿಗೆ ತೊಂದರೆಯಾಗದ ರೀತಿ ಎಲ್ಲಾ ರೀತಿಯ ರಕ್ಷಣಾ ವ್ಯವಸ್ಥೆ ಕೈಗೊಳ್ಳುವ ಭರವಸೆ ನೀಡಿದರು. 

Advertisement

Udayavani is now on Telegram. Click here to join our channel and stay updated with the latest news.

Next