ಉಪ್ಪಿನಂಗಡಿ : ಇಲ್ಲಿನ ನೇತ್ರಾವತಿ ಆಟೋ ರಿಕ್ಷಾ ಚಾಲಕ- ಮಾಲಕರ ಸಂಘದ ಪದಾಧಿಕಾರಿಗಳು ಕುಮಾರಧಾರಾ ಸೇತುವೆಯ ಮೇಲೆ ಶೇಖರಣೆಗೊಂಡಿದ್ದ ಮಣ್ಣನ್ನು ತೆರವುಗೊಳಿಸಿ, ಸ್ವಚ್ಛಗೊಳಿಸುವ ಮೂಲಕ ಪಾದಚಾರಿಗಳು ಹಾಗೂ ಲಘು ವಾಹನ ಸವಾರರಿಗೆ ಆಗುತ್ತಿದ್ದ ಕೆಸರಿನ ಸ್ನಾನಕ್ಕೆ ಇತಿಶ್ರೀ ಹಾಡಿದ್ದಾರೆ. ಇಲ್ಲಿನ ಕುಮಾರಧಾರಾ ಸೇತುವೆಯ ಮೇಲೆ ನೀರು ಹೋಗಲು ಮಾಡಲಾದ ರಂಧ್ರಗಳು ಮಣ್ಣು, ಕಸಕಡ್ಡಿಗಳು ತುಂಬಿ ಮುಚ್ಚಿ ಹೋಗಿದ್ದು, ನೀರಿನ ಹರಿಯುವಿಕೆಗೆ ತಡೆಯಾಗಿ, ಮಳೆ ಬಂದ ಸಂದರ್ಭ ನೀರು ಸೇತುವೆಯ ಮೇಲೆಯೇ ನಿಂತು ಹಳ್ಳದಂತಾಗುತ್ತಿತ್ತು. ಆಗ ವಾಹನಗಳು ಸಂಚರಿಸಿದರೆ ಬದಿಯಲ್ಲಿ ನಡೆದುಕೊಂಡು ಹೋಗುವವರ, ದ್ವಿಚಕ್ರ ವಾಹನ ಸವಾರರ ಮೇಲೆ ಕೆಸರು ನೀರು ಸಿಡಿಯುತ್ತಿತ್ತು. ಇದರಿಂದ ಪಾದಚಾರಿಗಳು, ಶಾಲಾ ಮಕ್ಕಳು, ದ್ವಿಚಕ್ರ, ಆಟೋ ರಿಕ್ಷಾ ಚಾಲಕರು ಸಮಸ್ಯೆಗೆ ಸಿಲುಕುವಂತಾಗಿತ್ತು. ಮಳೆ ಬರುವಾಗ ಸೇತುವೆಯ ಮೇಲೆ ನಡೆದುಕೊಂಡು ಹೋಗುವವರು ವಾಹನಗಳು ಓಡಾಡುವ ಸಂದರ್ಭ ಕೆಸರಿನ ನೀರಿನಲ್ಲಿ ಸ್ನಾನ ಮಾಡುವಂತಾಗುತ್ತಿತ್ತು.
ಈ ಬಗ್ಗೆ ಪತ್ರಿಕಾ ವರದಿ ಪ್ರಕಟಗೊಂಡಿತ್ತಾದರೂ, ಹೆದ್ದಾರಿ ಪ್ರಾಧಿಕಾರವು ನಿರ್ವಹಣೆಯ ಗೋಜಿಗೆ ಹೋಗಿರಲಿಲ್ಲ. ಪ್ರಾಧಿಕಾರದ ಕಾರ್ಯವೈಖರಿಯಿಂದ ಬೇಸತ್ತ ಉಪ್ಪಿನಂಗಡಿಯ ನೇತ್ರಾವತಿ ಆಟೋರಿಕ್ಷಾ ಚಾಲಕ -ಮಾಲಕ ಸಂಘದವರು ಶ್ರಮದಾನದ ಮೂಲಕ ಸೇತುವೆಯ ಇಕ್ಕೆಲಗಳಲ್ಲಿ ಬೆಳೆದಿರುವ ಹುಲ್ಲು, ಗಿಡಗಳನ್ನು ಹಾಗೂ ಸೇತುವೆ ಯಲ್ಲಿ ಬಿದ್ದಿದ್ದ ಮಣ್ಣನ್ನು ತೆಗೆದು ಸ್ವಚ್ಛಗೊಳಿಸಿದರು. ರಂಧ್ರಗಳಲ್ಲಿ ತುಂಬಿದ್ದ ಮಣ್ಣನ್ನು ತೆಗೆದು ಮಳೆ ನೀರು ಹರಿಯಲು ಅನುಕೂಲ ಮಾಡಿಕೊಟ್ಟರು.
ಶ್ರಮದಾನದಲ್ಲಿ ಉಪ್ಪಿನಂಗಡಿಯ ನೇತ್ರಾವತಿ ಆಟೋರಿಕ್ಷಾ ಚಾಲಕ- ಮಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಲತೀಫ್, ಜತೆ ಕಾರ್ಯದರ್ಶಿಗಳಾದ ಖಲಂದರ್ ಶಾಫಿ, ಬಿ. ಅಬ್ಟಾಸ್ ಕುದ್ಲೂರು, ಉಪಾಧ್ಯಕ್ಷ ವಿಶ್ವನಾಥ ಬಂಗಾರಿ, ಸಂಘಟನ ಕಾರ್ಯದರ್ಶಿ ಫಾರೂಕ್ ಝಿಂದಗಿ, ಸದಸ್ಯರಾದ ಕೆ.ಎಸ್. ಮುಹಮ್ಮದ್, ನರಸಿಂಹ ಶೆಟ್ಟಿ, ರಫೀಕ್ ನೆಕ್ಕಿಲಾಡಿ, ಜೀವನ್, ಸುಲೈಮಾನ್, ದಯಾನಂದ, ವಾಸು ಬೆದ್ರೋಡಿ, ರಾಘವ, ಗಂಗಾಧರ ಗೌಡ, ಹುಸೈನ್ ಕರಾಯ, ಫಯಾಝ್ ನೆಕ್ಕಿಲಾಡಿ, ಇಬ್ರಾಹಿಂ ಶಾಂತಿನಗರ, ಸುಲೈಮಾನ್ ಹಿರೇಬಂಡಾಡಿ ಉಪಸ್ಥಿತರಿದ್ದರು.