Advertisement

ಆ.15ರಿಂದ ಆಟೋ ಮೀಟರ್‌ ಕಡ್ಡಾಯ

11:13 AM Jul 24, 2019 | Suhan S |

ಬೆಳಗಾವಿ: ಸ್ವಾತಂತ್ರ್ಯೋತ್ಸವ ಆಗಸ್ಟ್‌ 15ರಿಂದಲೇ ಆಟೋ ಮೀಟರ್‌ ಕಡ್ಡಾಯವಾಗಿ ಅಳವಡಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಸೂಚನೆ ನೀಡಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿದ ಅವರು, ಕೂಡಲೇ ಆಟೋ ರಿಕ್ಷಾ ಚಾಲಕರ-ಮಾಲೀಕರ ಸಂಘದ ಸಭೆ ಚರ್ಚಿಸಿ ಆಗಸ್ಟ್‌ 15ರಿಂದ ಆಟೋ ಮೀಟರ್‌ ಕಡ್ಡಾಯ ಆಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪೊಲೀಸ್‌ ಆಯುಕ್ತರು, ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಆಟೋ ಚಾಲಕರ ಸಂಘಗಳ ಜತೆ ವಿಸ್ತೃತ ಚರ್ಚೆ ನಡೆಸಿದ ಬಳಿಕ ದರಪಟ್ಟಿಯನ್ನು ಒಂದು ವಾರದಲ್ಲಿಯೇ ಅಂತಿಮ ಗೊಳಿಸಬೇಕು ಎಂದರು.ಆಗಸ್ಟ್‌ 15ರಿಂದ ಪ್ರಿಪೇಡ್‌ ಆಟೋ ಸೇವೆ: ಆಟೋಮಿಟರ್‌ ಕಡ್ಡಾಯಗೊಳಿಸುವುದರ ಜತೆಗೆ ಆ. 15ರಿಂದಲೇ ಬೆಳಗಾವಿ ನಗರದ ರೈಲು ನಿಲ್ದಾಣ ಮತ್ತು ಬಸ್‌ ನಿಲ್ದಾಣಗಳಿಂದ ಪ್ರಿಪೇಡ್‌ ಆಟೋ ವ್ಯವಸ್ಥೆ ಕಲ್ಪಿಸಬೇಕು. ಆಟೋ ಪ್ರಯಾಣಿಕರಿಗೆ ಯಾವುದೇ ಅನಾನುಕೂಲ ಆಗದಂತೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಸೂಕ್ತ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಪೊಲೀಸ್‌ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿ ಡಾ| ಬೊಮ್ಮನಹಳ್ಳಿ, ಆಟೋ ಮೀಟರ್‌ ಕಡ್ಡಾಯಗೊಳಿಸಿದ ಮೇಲೆ ನಿರಂತರವಾಗಿ ನಿಗಾ ವಹಿಸಲು ಅಗತ್ಯ ಸಿಬ್ಬಂದಿ ನಿಯೋಜನೆಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲು ತಿಳಿಸಿದರು.

126 ಆಟೋ ಪರವಾನಿಗೆ ಅಮಾನತು: ನಗರದಲ್ಲಿ ಮಿತಿಗಿಂತ ಜಾಸ್ತಿ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ 126 ಆಟೋಗಳ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತು ಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಮಿತಿಗಿಂತ ಹೆಚ್ಚು ಮಕ್ಕಳನ್ನು ಕರೆದೊಯ್ಯುವುದನ್ನು ನಿಯಂತ್ರಿಸುವುದಕ್ಕಾಗಿ ಅಮಾನತು ನಿರ್ಧಾರ ಮಾಡಲಾಗಿರುತ್ತದೆ. ನಿಯಮ ಪಾಲಿಸದೇ ಇರುವ ಆಟೋಚಾಲಕರ ವಿರುದ್ಧ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಪರ್ಮಿಟ್ ನೀಡುವಾಗ ಕಡ್ಡಾಯವಾಗಿ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳಿಂದ ಅನುಮೋದನೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ತಿಳಿಸಿದರು.

ರಾಮದುರ್ಗದಲ್ಲಿ ಹೊಸದಾಗಿ ಆರಂಭಗೊಂಡಿರುವ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸ್ವತಂತ್ರ ಕರ್ತವ್ಯ ನಿಭಾಯಿಸಲು ವಿವಿಧ ಅಧಿಕಾರಗಳನ್ನು ಪ್ರತ್ಯಾಯೋಜಿಸುವಂತೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ಹದಿನೈದು ವರ್ಷ ಮೀರಿರುವ ಎಲ್ಲ ಬಗೆಯ ಪ್ರಯಾಣಿಕರ ವಾಹನಗಳನ್ನು ಪಟ್ಟಿ ಮಾಡಿ, ಪರಿಶೀಲನೆ ಕೈಗೊಳ್ಳಬೇಕು. ನಿಯಮಾವಳಿ ಪ್ರಕಾರ ಅಂತಹ ವಾಹನಗಳ ಸಂಚಾರ ನಿರ್ಬಂಧಕ್ಕೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಾನಂದ ಮಗದುಮ್‌ ಅವರು ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕೊರತೆ ಕುರಿತು ವಿವರಿಸಿದ ಅವರು, 6000ಕ್ಕೂ ಅಧಿಕ ಆಟೋಗಳು ನಗರದಲ್ಲಿವೆ. ಅದರಲ್ಲಿ ಅಂದಾಜು ನಾಲ್ಕು ಸಾವಿರ ಆಟೋಗಳಿಗೆ ಮೀಟರ್‌ ಜೋಡಣೆ ಮಾಡಲಾಗಿರುತ್ತದೆ ಎಂದರು.

Advertisement

ಕೇಂದ್ರ ಬಸ್‌ ನಿಲ್ದಾಣದಿಂದ 500 ಮೀಟರ್‌ ಸುತ್ತಳತೆಯಲ್ಲಿ ಖಾಸಗಿ ಬಸ್‌, ಟೆಂಪೋಗಳ ನಿಲ್ದಾಣವನ್ನು ತೆರವುಗೊಳಿಸುವಂತೆ ಮಹಾನಗರ ಪೊಲೀಸ್‌ ಆಯುಕ್ತ ಡಾ| ಬಿ.ಎಸ್‌. ಲೋಕೇಶಕುಮಾರ್‌ ಸೂಚನೆ ನೀಡಿದರು.ಆಟೋ ಮೇಲೆ ಪರ್ಮಿಟ್ ನಂಬರ್‌: ರಸ್ತೆ ಸುರಕ್ಷತಾ ಅನುದಾನದಲ್ಲಿ ಪ್ರತಿ ಆಟೋರಿಕ್ಷಾದ ಮೇಲೆ ಪರ್ಮಿಟ್ ಸಂಖ್ಯೆ ಮತ್ತಿತರ ವಿವರಗಳನ್ನು ನಮೂದಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಪ್ರಾದೇಶಿಕ ಸಾರಿಗೆ ಕಚೇರಿಯಿಂದ ನೀಡಲಾಗುತ್ತಿರುವ ಪರವಾನಗಿ ಸಂಖ್ಯೆ ಹಾಗೂ ಮತ್ತಿತರ ವಿವರಗಳನ್ನು ಪ್ರತಿ ಆಟೋದ ಮೇಲೆ ಬರೆಯಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಬೊಮ್ಮನಹಳ್ಳಿ ತಿಳಿಸಿದರು.

ಎಸ್‌ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಪರ್ಮಿಟ್ ಹೊಂದಿರುವ ಪ್ರಯಾಣಿಕರ ವಾಹನಗಳು ತಮ್ಮ ವ್ಯಾಪ್ತಿಯನ್ನು ಮೀರಿ ಸಂಚರಿಸುವುದನ್ನು ಸುಲಭವಾಗಿ ಪತ್ತೆ ಮಾಡಿ ಕ್ರಮ ಕೈಗೊಳ್ಳಲು ಅನುಕೂಲವಾಗುವಂತೆ ವಲಯಗಳನ್ನು ಗುರುತಿಸಬೇಕು. ಪ್ರಾದೇಶಿಕ ಸಾರಿಗೆ ಕಚೇರಿಯಿಂದ ಪರವಾನಗಿ ನೀಡುವಾಗ ಆಯಾ ವಲಯಗಳನ್ನು ನಮೂದಿಸಿದಾಗ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದರು.

ಬುಡಾ ಆಯುಕ್ತ ಪ್ರೀತಂ ನಸಲಾಪುರೆ, ಚಿಕ್ಕೋಡಿ ಪ್ರಾದೇಶಿಕ ಅಧಿಕಾರಿ ಭೀಮನಗೌಡ ಪಾಟೀಲ, ವಾಯವ್ಯ ಸಾರಿಗೆ ಸಂಸ್ಥೆಯ ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಆರ್‌. ಮುಂಜಿ, ಬೈಲಹೊಂಗಲ ಹಾಗೂ ರಾಮದುರ್ಗದ ಸಹಾಯಕ ಪ್ರಾದೇಶಿಕ ಅಧಿಕಾರಿ ಧರ್ಮರಾಜ ಪವಾರ, ಸಂಚಾರ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತ ಆರ್‌.ಆರ್‌. ಕಲ್ಯಾಣಶೆಟ್ಟಿ ಸೇರಿದಂತೆ ಇತರರು ಇದ್ದರು.

ನಗರದಲ್ಲಿ ಹೆಚ್ಚಾಗಿರುವುದರಿಂದ ಆಟೋಗಳ ಸಂಖ್ಯೆ ಆಟೋ ಪರ್ಮಿಟ್ ಬಂದ್‌ ಮಾಡಲು ಆಟೋ ಚಾಲಕರ ಸಂಘದ ಪದಾಧಿಕಾರಿಗಳ ಮನವಿ ಮಾಡಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next