Advertisement

ವಿಕಲಚೇತನರ ಮನೆ ಬಾಗಿಲಿಗೇ ಬರಲಿದೆ ಆಟೋ

06:14 PM Apr 08, 2019 | Lakshmi GovindaRaju |

ಬೆಂಗಳೂರು: ಮತದಾನ ಪ್ರಮಾಣ ಹೆಚ್ಚಿಸುವ ಸಂಬಂಧ ಹಲವು ರೂಪುರೇಷೆ ಸಿದ್ಧಪಡಿಸಿರುವ ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ, ವಿಕಲಚೇತನ ಮತದಾರರನ್ನು ಮತಗಟ್ಟೆಗೆ ಕರೆತರಲು ಆಟೋ ಬಳಸಲು ನಿರ್ಧರಿಸಿದೆ. ಜತೆಗೆ ಗಾಲಿ ಕುರ್ಚಿಗಳ ಸಂಖ್ಯೆಯನ್ನೂ ಹೆಚ್ಚಿಸಿದೆ.

Advertisement

ವಿಕಲಚೇತನ ಮತದಾರರನ್ನು ಮತಗಟ್ಟೆಯತ್ತ ಸೆಳೆಯುವ ಉದ್ದೇಶ ಈ ಕಾರ್ಯದ ಹಿಂದಿದೆ. ಇದಕ್ಕೂ ಮೊದಲು, ನಗರ ಜಿಲ್ಲೆ ವ್ಯಾಪ್ತಿಯಲ್ಲಿ ಎಷ್ಟು ವಿಕಲಚೇತನ ಮತದಾರರಿದ್ದಾರೆ ಎಂಬ ಮಾಹಿತಿ ಕಲೆಹಾಕಿದೆ. ಅದರಂತೆ ಬೆಂಗಳೂರು ನಗರ ಜಿಲ್ಲೆಯಲ್ಲಿ 4,104 ವಿಕಲಚೇತನ ಮತದಾರರಿದ್ದಾರೆ.

ಆ ಪೈಕಿ ಯಲಹಂಕ ವ್ಯಾಪ್ತಿಯಲ್ಲಿ 1,051, ಬ್ಯಾಟರಾಯನಪುರ ವ್ಯಾಪ್ತಿಯಲ್ಲಿ 486, ಯಶವಂತಪುರ ಕ್ಷೇತ್ರದಲ್ಲಿ 1,818, ದಾಸರಹಳ್ಳಿ ವಿಧಾನಸಭೆ ಕ್ಷೇತ್ರದಲ್ಲಿ 135, ಮಹಾದೇವಪುರದಲ್ಲಿ 184, ಬೆಂಗಳೂರ ದಕ್ಷಿಣ ವಿಧಾನಸಭೆಯಲ್ಲಿ 221 ಮತ್ತು ಆನೇಕಲ್‌ ತಾಲೂಕಿನಲ್ಲಿ 209 ವಿಕಲಚೇತನ ಮತದಾರರಿದ್ದಾರೆ.

ಗಾಲಿ ಕುರ್ಚಿ ಸಂಖ್ಯೆಯಲ್ಲಿ ಹೆಚ್ಚಳ: 2018ರ ವಿಧಾನಸಭೆ ಚುನಾವಣೆಯಲ್ಲೂ ಬೆಂಗಳೂರು ನಗರ ಜಿಲ್ಲಾಡಳಿತ ವಿಕಲಚೇತನರ ಬಗ್ಗೆ ವಿಶೇಷ ಆಸಕ್ತಿ ತೋರಿತ್ತು. ಆ ಚುನಾವಣೆಯಲ್ಲಿ ಜಿಲ್ಲಾಡಳಿತ ಎಂಟುನೂರು ಗಾಲಿ ಕುರ್ಚಿಗಳನ್ನು ಬಳಸಿಕೊಂಡಿತ್ತು. ಇದಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 1,122 ಗಾಲಿ ಕುರ್ಚಿಗಳನ್ನು ಬಳಸುತ್ತಿದೆ.

ವಿಕಲಚೇತನರು ಕೂಡ ಮತ ಚಲಾವಣೆಗೆ ಆಸಕ್ತಿ ಹೊಂದಿರುತ್ತಾರೆ. ಅವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಈ ಬಾರಿ ವೀಲ್‌ಚೇರ್‌ ಸಂಖ್ಯೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಹಿರಿಯ ಅಧಿಕಾರಿ “ಉದಯವಾಣಿ’ಗೆ ತಿಳಿಸಿದ್ದಾರೆ.

Advertisement

ಆಟೋ ವ್ಯವಸ್ಥೆ: ಕೆಲವೊಮ್ಮೆ ವಾಹನ ವ್ಯವಸ್ಥೆಯಿಲ್ಲದೆ ವಿಕಲಚೇತನರು ಮತಗಟ್ಟೆಗೆ ಬರುವುದಿಲ್ಲ. ಈ ಸಮಸ್ಯೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿದ್ದು, ವಾಹನದ ಅಗತ್ಯ ಇರುವವರ ಮನೆ ಬಾಗಿಲಿಗೆ ಆಟೋ ಕಳುಹಿಸಲು ಮುಂದಾಗಿದೆ.

ಇದಕ್ಕೆ ಚುನಾವಣಾ ಆಯೋಗದ ಅನುಮತಿ ಪಡೆಯುವುದಾಗಿ ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ವಾಹನದ ಅಗತ್ಯ ಇರುವವರು ಸ್ಥಳೀಯ ಮಟಗಟ್ಟೆ ಅಧಿಕಾರಿಗಳನ್ನು ಸಂಪರ್ಕಿಸಿ ಹೆಸರು ನೋಂದಣಿ ಮಾಡಿಕೊಳ್ಳಬಹುದು.

ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಬೆಂಗಳೂರು ನಗರ ಜಿಲ್ಲಾಡಳಿತ, ವಿಕಲಚೇತನರನ್ನು ಮತದಾನ ಕೇಂದ್ರದತ್ತ ಕರೆತರಲು ಆಟೋಗಳ ವ್ಯವಸ್ಥೆ ಮಾಡಲಿದೆ.
-ಆರ್ಚನಾ, ಬೆಂಗಳೂರು ನಗರ ಜಿ.ಪಂ ಸಿಇಒ

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next