ಮುಂಬಯಿ : ಮುಂಬಯಿ ಮಹಾ ನಗರಿಯ ಸುಮಾರು 2 ಲಕ್ಷಕ್ಕೂ ಅಧಿಕ ಆಟೋಗಳು ನಾಳೆ ಮಂಗಳವಾರ ರಸ್ತೆಗಿಳಿಯುವುದಿಲ್ಲ.
ಆಟೋ ಚಾಲಕರು ಹೆಚ್ಚಿನ ಮಟ್ಟದ ಪ್ರಯಾಣ ಶುಲ್ಕ ಮತ್ತು ಇತರ ಬೇಡಿಕೆಗಳನ್ನು ಮುಂದಿಟ್ಟು ನಾಳೆ ಮಂಗಳವಾರ ಮುಷ್ಕರ ನಡೆಸಲು ತೀರ್ಮಾನಿಸಿದ್ದಾರೆ. ಹಾಗಾಗಿ ಮಹಾ ನಗರದ ಜನರು ಆಟೋ ಸೇವೆ ಇಲ್ಲದೆ ತೀವ್ರ ಪರದಾಟಕ್ಕೆ ಗುರಿಯಾಗಲಿದ್ದಾರೆ.
ಇಂದು ಸೋಮವಾರ ಮಧ್ಯರಾತ್ರಿ 12 ಗಂಟೆಯಿಂದ ನಾಳೆ ಮಂಗಳವಾರ ಮಧ್ಯ ರಾತ್ರಿ12 ಗಂಟೆಯ ವರೆಗೆ ಮುಷ್ಕರ ಹೂಡಲು ಆಟೋ ಚಾಲಕರ ಯೂನಿಯನ್‌ಗಳು ನಿರ್ಧರಿಸಿರುವುದಾಗಿ ವರದಿಗಳು ತಿಳಿಸಿವೆ.
ಪ್ರಯಾಣ ದರ ಏರಿಸಬೇಕು; ಹೊಸ ಆಟೋಗಳಿಗೆ ಪರ್ಮಿಟ್ ನೀಡುವುದನ್ನು ನಿಲ್ಲಿಸಬೇಕು ಎಂಬುದು ಸರಕಾರದಲ್ಲಿ ಆಟೋ ಚಾಲಕರ ಮುಖ್ಯ ಬೇಡಿಕೆಯಾಗಿದೆ.
ಕಳೆದ ಒಂದೇ ವರ್ಷದಲ್ಲಿ ಮಹಾ ನಗರಿಯಲ್ಲಿನ ಆಟೋ ಸಂಖ್ಯೆ ದುಪ್ಪಟ್ಟಾಗಿದೆ ಎಂಬುದು ಅವರ ಅವರ ಅಳಲಾಗಿದೆ.
ಮುಂಬಯಿ ಆಟೋ ಚಾಲಕರ ಮುಷ್ಕರ ಮಹಾರಾಷ್ಟ್ರದ ಇತರ ನಗರಗಳಿಗೂ ಹರಡುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.