Advertisement
ಒಂದೂವರೆ ವರ್ಷದ ಹಿಂದೆ ಮಿತಿಮೀರಿದ ಸಂಖ್ಯೆಯಲ್ಲಿ ಶಾಲೆಗೆ ಮಕ್ಕಳನ್ನು ಕರೆದೊಯ್ಯುವ ಸಂದರ್ಭದಲ್ಲಿ ಆಟೋರಿಕ್ಷಾ ಅಪಘಾತ ಸಂಭವಿಸಿ, ಮಗುವೊಂದು ಸಾವನ್ನಪ್ಪಿದ ಘಟನೆ ಇನ್ನೂ ಪಿ.ಜೆ. ಬಡಾವಣೆ ನಿವಾಸಿಗಳ ಮನದಲ್ಲಿ ಮಾಸಿಲ್ಲ. ಈ ರೀತಿ ಘಟನೆ ಸಂಭವಿಸಿದ ಕೆಲ ದಿನಗಳವರೆಗೆ ಮಾತ್ರ ಕಾನೂನು, ನಿಯಮ ಬಿಗಿಭದ್ರಗೊಳಿಸುವ ಸಂಬಂಧಪಟ್ಟ ಅಧಿಕಾರಿಗಳು ನಂತರ ಮತ್ಯಾವ ಕ್ರಮಕ್ಕೂ ಮುಂದಾಗುವುದೇ ಇಲ್ಲ. ಇಂದಿಗೂಸಂಬಂಧಪಟ್ಟ ಅಧಿಕಾರಿವರ್ಗ ಜಾಣಕುರುಡು ಪ್ರದರ್ಶಿಸುತ್ತಿದ್ದಾರೆ. ಸ್ಮಾರ್ಟ್ ಸಿಟಿಯಾಗುತ್ತಿರುವ ದಾವಣಗೆರೆ ಯಲ್ಲಿ ಈಗ ಎಲ್ಲೆಂದರಲ್ಲಿ ಕಾನ್ವೆಂಟ್‌ಗಳು, ಖಾಸಗಿ ಶಾಲೆಗಳು, ಶಿಕ್ಷಣ ಸಂಸ್ಥೆಗಳು ಹುಟ್ಟಿ ಕೊಳ್ಳುತ್ತಿವೆ. ಪ್ರತಿನಿತ್ಯ ಸಾವಿರಾರು ಮಕ್ಕಳು ಬಸ್, ಸ್ಕೂಲ್ ವ್ಯಾನ್‌ಗಳಲ್ಲಿ ತೆರಳುತ್ತಾರೆ. ಅದೇ ರೀತಿ ಶಾಲಾ ವಾಹನಗಳ ಪೈಪೋಟಿಗನುಗುಣವಾಗಿ ಪ್ರಯಾಣಿಕರ ಆಟೋಗಳು ಸ್ಪರ್ಧೆಗೆ ಇಳಿದಿವೆ.
ಆಟೋಗಳಲ್ಲಿ ಪ್ರತಿನಿತ್ಯ ನಿಗದಿತ ಸೀಟಿಗಿಂತ ಹೆಚ್ಚು ಮಕ್ಕಳನ್ನು ಕರೆದುಕೊಂಡು ಹೋಗುತ್ತಿರುವ ಬಗ್ಗೆ ಸಂಪೂರ್ಣ ಮಾಹಿತಿ ಪೋಷಕರಿಗೆ ಇದ್ದರೂ ಸಹ ಮಕ್ಕಳ ಬಗ್ಗೆ ಜಾಗ್ರತೆ ವಹಿಸುತ್ತಿಲ್ಲ. ಆಟೋರಿಕ್ಷಾ ಸೀಟ್ ಕ್ಯಾಪಾಸಿಟಿಗೆ ತಕ್ಕಷ್ಟು ಮಕ್ಕಳನ್ನು ಮಾತ್ರ ಕರೆದೊಯ್ಯಿರಿ ಎಂದು ಹೇಳುವುದಿಲ್ಲ. ಬದಲಾಗಿ ಮಕ್ಕಳು ಆಟೋದಲ್ಲಿ ಕೂರಲು ಜಾಗವಿಲ್ಲದೇ ಅಳುತ್ತಾ ಹೊರಟರೂ, ಮಕ್ಕಳಿಗೆ ಹಾಯ್….ಬಾಯ್…. ಟಾಟಾ… ಹೇಳಿ ಕಳಿಸುವವರೇ ಹೆಚ್ಚು. ಆಟೋಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ಮಕ್ಕಳನ್ನು ತುಂಬಿಕೊಂಡು ಬಂದರೂ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ವ್ಯವಸ್ಥಾಪಕರು, ಅಧ್ಯಕ್ಷರು ಕನಿಷ್ಠ ಪಕ್ಷ ಸೌಜನ್ಯಕ್ಕಾದರೂ ಆಟೋ ಚಾಲಕರನ್ನು ಕರೆದು ಬುದ್ಧಿ ಮಾತು ಹೇಳುತ್ತಿಲ್ಲ. ಬದಲಾಗಿ ನಮಗೇಕೆ ಎಂಬ ನಿರ್ಲಕ್ಷ್ಯಭಾವನೆ ತೋರುತ್ತಿರುವುದು ನಿಜಕ್ಕೂ ದುರಂತ.
ಬಹುತೇಕ ಪ್ರತಿಷ್ಠಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಕರೆದೊಯ್ಯುವ ಬಡಾವಣೆಗಳಲ್ಲಿ ರಸ್ತೆ ಅಗಲೀಕರಣ ಆಗದೇ ಕಿರಿದಾದ ರಸ್ತೆ ಇವೆ. ಅಲ್ಲದೇ ಎಲ್ಲೆಂದರಲ್ಲಿ ಗುಂಡಿಗಳು, ಅವೈಜ್ಞಾನಿಕ ಹಂಪ್ಸ್‌ಗಳು ಮಿತಿಮೀರಿವೆ. ಇಂತಹ ರಸ್ತೆಗಳಲ್ಲಿ ಚಾಲಕರು ಹೆಚ್ಚೆಚ್ಚು ಮಕ್ಕಳನ್ನು ತುಂಬಿಕೊಂಡು ಮನಬಂದಂತೆ ಆಟೋ ಚಾಲನೆ ಮಾಡಿಕೊಂಡು ಹೋಗುವುದು ಸಾಮಾನ್ಯವಾಗಿದೆ. ಆದರೂ ಇಂತಹ ಸಂಚಾರಕ್ಕೆ ಸೂಕ್ತ ಕಡಿವಾಣದ ಪ್ರತಿಕ್ರಿಯೆ ಸಂಬಂಧಪಟ್ಟ ಅಧಿಕಾರಿಗಳಿಂದ ದೊರೆಯುತ್ತಿಲ್ಲ.
Related Articles
Advertisement
ಸೂಕ್ತ ಕಾನೂನು ಕ್ರಮ3+1 ಪ್ರಯಾಣಿಕರ ಆಟೋದಲ್ಲಿ ಹೆಚ್ಚೆಂದರೆ ಐದಾರು ಮಕ್ಕಳನ್ನು ಕರೆದೊಯ್ಯಬಹುದು. ಆದರೆ, 10 ರಿಂದ 12 ಮಕ್ಕಳನ್ನು ಕಣ್‌ತಪ್ಪಿಸಿ ಕರೆದೊಯ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ನಮ್ಮ ಗಮನಕ್ಕೆ ಬಂದಂತಹ ಎಲ್ಲಾ ಕಡೆ ಸಾಕಷ್ಟು ಕೇಸ್‌ಗಳನ್ನು ದಾಖಲು ಮಾಡಿ ಕ್ರಮ ಕೈಗೊಂಡಿದ್ದೇವೆ. ಜೊತೆಗೆ ರಸ್ತೆ ಸುರಕ್ಷತಾ ಸಪ್ತಾಹದಂತ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಶಾಲಾ ಪ್ರಾಂಶುಪಾಲರು, ಆಟೋ ಚಾಲಕರಿಗೆ ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಇಲಾಖೆ ಜೊತೆಗೆ ಪೋಷಕರು ಕೂಡ ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು. ಸದ್ಯಕ್ಕೆ ನಮ್ಮಲ್ಲಿ ಆಟೋಗಳ ತಪಾಸಣೆ ಮಾಡಲು ಸಿಬ್ಬಂದಿ ಕೊರತೆ ಇದೆ. ಇರುವ ಸಿಬ್ಬಂದಿಯೂ ರೂಟ್ ಸರ್ವೇಯಲ್ಲಿ ಬ್ಯುಸಿ ಇದ್ದಾರೆ. ಹಾಗಾಗಿ ಇನ್ನೊಂದು ವಾರದಲ್ಲಿ ಸೂಕ್ತ ತಪಾಸಣೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು.
ಲಕ್ಷ್ಮೀಕಾಂತ್ ಡಿ. ನಾಲವಾರ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಪೋಷಕರು ಎಚ್ಚರ ವಹಿಸಲಿ ಪ್ರಯಾಣಿಕರ ಆಟೋಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದೊಯ್ಯದಂತೆ ಈಗಾಗಾಲೇ ಆಟೋ ಚಾಲಕರಿಗೆ ಜಾಗೃತಿ ಮೂಡಿಸಿದ್ದೇವೆ. ಜೊತೆಗೆ ಕೇಸ್‌ಗಳನ್ನು ಕೂಡ ದಾಖಲು ಮಾಡಿ ದಂಡ ವಿಧಿಸಿದ್ದೇವೆ. ಈ ಬಗ್ಗೆ ಪ್ರತಿಯೊಬ್ಬ ಪೋಷಕರು ಜಾಗೃತರಾಗಬೇಕು. ಪ್ರಯಾಣಿಕರ ಆಟೋಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗದಂತೆ ಎಚ್ಚರ ವಹಿಸಬೇಕು. ಮಕ್ಕಳು ಶಾಲೆಗಳಿಗೆ ಸುಸ್ಥಿತಿಯಲ್ಲಿ ಹೋಗಿಬರುವ ವ್ಯವಸ್ಥೆ ಕಲ್ಪಿಸಬೇಕು.
ಆರ್. ಚೇತನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ. ವಿಜಯ್ ಕೆಂಗಲಹಳ್ಳಿ