ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮ್ಯೂಸಿಕ್ ಥೆರಪಿಗೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದ್ದು, ಮಾನಸಿಕ ಚಿಕಿತ್ಸೆ ಜತೆಗೆ ಆಟೀಸಂ ಸಮಸ್ಯೆಯನ್ನೂ ಗುಣಪಡಿಸುವ ಶಕ್ತಿಯಿದೆ ಎಂದು ಹೃದ್ರೋಗ ತಜ್ಞ ಡಾ.ವಿ.ಪರಮೇಶ್ವರ ಅಭಿಪ್ರಾಯಪಟ್ಟರು.
ಭಾರತೀಯ ವಿದ್ಯಾಭವನದಲ್ಲಿ ಭಾನುವಾರ ಹಂಸಕುಟೀರ ಫೌಂಡೇಶನ್ ಮತ್ತು ಮೀರಾ ಸೆಂಟರ್ ಫಾರ್ ಮ್ಯೂಸಿಕ್ ಥೆರಪಿ ಆ್ಯಂಡ್ ರೀಸರ್ಚ್ ಹಮ್ಮಿಕೊಂಡಿದ್ದ ಕಮ್ಮಟದಲ್ಲಿ ಮಾತನಾಡಿದ ಅವರು, ಮ್ಯೂಸಿಕ್ ಥೆರಪಿಗೆ ಭವ್ಯ ಇತಿಹಾಸವಿದ್ದು, ಪ್ಲೇಟೋ, ಅರಿಸ್ಟಾಟಲ್ ಕೂಡ ಈ ಥೆರಪಿ ಬಗ್ಗೆ ಪ್ರಸ್ತಾಪಿಸಿದ್ದಾರೆ ಎಂದರು.
ಸಂಗೀತಕ್ಕೂ, ಮಿದುಳಿಗೂ ಅಂತರ್ ಸಂಬಂಧವಿದೆ. ಸಂಗೀತದ ಬೀಟ್‌ಗಳು ಮಿದುಳಿನ ಅಲೆಗಳನ್ನು ಉತ್ತೇಜಿಸುತ್ತವೆ. ಬಲವಾದ ಬೀಟ್‌ಗಳು ಯೋಚನಾ ಲಹರಿಯನ್ನು ಚುರುಕುಗೊಳಿಸುತ್ತವೆ.
ನಿಧಾನವಾದ ಬೀಟ್‌ಗಳು ಮನಸನ್ನು ಶಾಂತ, ಧ್ಯಾನ್ಯದ ಸ್ಥಿತಿಗೆ ಕೊಂಡೊಯ್ಯುತ್ತವೆ. ಮಿದುಳಿನ ಅಲೆಗಳಲ್ಲಾಗುವ ಮಾರ್ಪಾಡುಗಳು ದೇಹದ ಇತರೆ ಭಾಗಗಳ ಕಾರ್ಯಾಚರಣೆಯಲ್ಲಿ ಬದಲಾವಣೆ ತರುತ್ತವೆ ಎಂದು ಹೇಳಿದರು.
ಇಂದಿರಾಗಾಂಧಿ ನ್ಯಾಷನಲ್ ಸೆಂಟರ್ ಫಾರ್ ಆರ್ಟ್ಸ್ನ ಪ್ರಾದೇಶಿಕ ನಿರ್ದೇಶಕಿ ಡಾ.ದೀಪ್ತಿ ನವರತ್ನ ಮಾತನಾಡಿ, ಭರತನ ನಾಟ್ಯಶಾಸ್ತ್ರದಲ್ಲೂ ಸಂಗೀತದ ಬಗ್ಗೆ ಹೇಳಲಾಗಿದೆ ಎಂದರು. ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್.ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.