ಬೆಂಗಳೂರು: ಆಟಿಸಂ (ನರಮಂಡಲದ ಬೆಳವಣಿಗೆಯಲ್ಲಿ ನ್ಯೂನತೆ) ನಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಕೆಲವರಲ್ಲಿ ಅಸಡ್ಡೆ ಭಾವನೆ ಇದೆ. ಇದನ್ನು ಹೋಗಲಾಡಿಸಿ ಆಟಿಸಂ ನ್ಯೂನತೆಯಿಂದ ಬಳಲುತ್ತಿರುವ ಪುಟಾಣಿಗಳಿಗೆ ಮಾನಸಿಕ ಸ್ಥೈರ್ಯ ತುಂಬುವ ಸಂಬಂಧ ಹೆರಿಟೇಜ್ ಫೌಂಡೇಶನ್ ಆಫ್ ಆರ್ಟ್ ಅಂಡ್ ಕಲ್ಚರ್, “ಚೇತನ’ ಶೀರ್ಷಿಕೆಯಲ್ಲಿ ವಿಡಿಯೋ ಅಲ್ಬಂ ಅನ್ನು ಹೊರತಂದಿದ್ದು, ಮಂಗಳವಾರ ನಗರದಲ್ಲಿ ಬಿಡುಗಡೆಗೊಳಿಸಲಾಯಿತು.
ನಗರದ ವೆಂಕಟಪ್ಪ ಆರ್ಟ ಗ್ಯಾಲರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೆರಿಟೇಜ್ ಫೌಂಡೇಶನ್ ಆಫ್ ಆರ್ಟ್ ಅಂಡ್ ಕಲ್ಚರ್ ನ ಅಧ್ಯಕ್ಷೆ ಚಂದ್ರಿಕಾ ಬಿಡುಗಡೆಗೊಳಿಸಿದರು. ಈ ವಿನೂತನ ವಿಡಿಯೋ ಅಲ್ಬಂ ಅನ್ನು ಹೊರತರಲು ಸಂಸ್ಥೆ ಒಂದು ವರ್ಷ ಪರಿಶ್ರಮ ಪಟ್ಟಿದೆ. ಕನ್ನಡದಲ್ಲಿ ಮೂರು ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಾಲ್ಕು ಹಾಡುಗಳು ಸೇರಿದಂತೆ ಒಟ್ಟು 7 ಸಾಂಗ್‌ಗಳು ಇದರಲ್ಲಿವೆ.
ನಗರದ ಸಮೃದ್ಧಿ ಮೌಂಟ್ ಲಿಟೆರಾ ಝೀ ಸ್ಕೂಲ್‌ನ ಶಿಕ್ಷಕಿ ಪ್ರಮೀಳಾ ಮಂಜುನಾಥ್ ಕನ್ನಡ ಭಾಷೆಯಲ್ಲಿ ಮೂಡಿ ಬಂದ ಹಾಡುಗಳಿಗೆ ಸಾಹಿತ್ಯ ರಚನೆ ಮಾಡಿದ್ದಾರೆ. ಹಾಗೆಯೇ ಹಿಂದಿ ಭಾಷೆಯಲ್ಲಿ ಮೂಡಿ ಬಂದಿರುವ ಗೀತೆಗಳನ್ನು ಕುಂಕುಮ್ ಸಕ್ಸೆನಾ ರಚಿಸಿದ್ದಾರೆ. ಸುದೀಪ್ತಾ ರಾಯ್ ಎಲ್ಲಾ ಹಾಡುಗಳಿಗೂ ಸಂಗೀತ ಸಂಯೋಜನೆ ಮಾಡಿದ್ದಾರೆ.
ಹೆರಿಟೇಜ್ ಫೌಂಡೇಶನ್ ಆಫ್ ಆರ್ಟ್ ಅಂಡ್ ಕಲ್ಚರ್ ಅಧ್ಯಕ್ಷೆ ಚಂದ್ರಿಕಾ ಮಾತನಾಡಿ, ಆಟಿಸಂ ಮಕ್ಕಳ ಬಗ್ಗೆ ಅರಿವು ಮೂಡಿಸುವ ಸಂಬಂಧ ಈ ಅಲ್ಬಂ ಹೊರ ತರಲಾಗಿದೆ. ಸಂಗೀತಕ್ಕೆ ಎಲ್ಲರನ್ನೂ ಸೆಳೆಯುವ ಶಕ್ತಿಯಿದೆ. ಆ ಹಿನ್ನೆಲೆಯಲ್ಲಿ ಆಟಿಸಂ ಬಗ್ಗೆ ಸಂಗೀತದ ಮೂಲಕ ಅರಿವು ಮೂಡಿಸುವ ಕಾರ್ಯಕ್ಕೆ ಕೈ ಹಾಕಲಾಗಿದೆ.
350 ಅಲ್ಬಂಗಳನ್ನು ಹೊರತರಲಾಗಿದ್ದು, ಯು ಟೂಬ್‌ನಲ್ಲೂ ಹಾಡುಗಳನ್ನು ಅಪ್‌ಲೋಡ್ ಮಾಡಲಾಗುವುದು ಎಂದು ತಿಳಿಸಿದರು. ಆಟಿಸಂ ನಿಂದ ಬಳಲುತ್ತಿರುವ ಸುಮಾರು 30 ಕ್ಕೂ ಹೆಚ್ಚು ಮಕ್ಕಳು ಮತ್ತವರ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.