Advertisement

ಸಾಹಿತಿ ಪ್ರೊ.ಶಿವರಾಮು ಕಾಡನಕುಪ್ಪೆ ನಿಧನ

12:35 PM Jul 27, 2018 | |

ಮೈಸೂರು: ಅನಾರೋಗ್ಯದಿಂದ ಬಳಲುತ್ತಿದ್ದ ಸಾಹಿತಿ ಪ್ರೊ.ಶಿವರಾಮು ಕಾಡನಕುಪ್ಪೆ (65) ಗುರುವಾರ ಬೆಳಗ್ಗೆ ಮೈಸೂರಿನ ಕುವೆಂಪುನಗರದಲ್ಲಿರುವ ತಮ್ಮ ಮನೆಯಲ್ಲಿ ಕೊನೆಯುಸಿರೆಳೆದರು. 

Advertisement

ಅವರ ಇಚ್ಚೆಯಂತೆ ದೇಹವನ್ನು ಜೆಎಸ್‌ಎಸ್‌ ವೈದ್ಯಕೀಯ ಕಾಲೇಜಿಗೆ ದಾನ ಮಾಡಲಾಯಿತು. ಪುತ್ರಿ ಡಾ.ಸುಶಿ ಕಾಡನಕುಪ್ಪೆ, ಪುತ್ರ ನೇಸರ ಕಾಡನಕುಪ್ಪೆ, ಸೊಸೆ ಮೇಘಾ ಕಾಡನಕುಪ್ಪೆ, ಮೊಮ್ಮಗ ಅಕ್ಷರ ಕಾಡನಕುಪ್ಪೆ ಅವರನ್ನು ಅಗಲಿದ್ದಾರೆ.

ಕವಿ, ಕಾದಂಬರಿಕಾರ, ವಿಮರ್ಶಕರಾಗಿ ಹೆಸರು ಮಾಡಿದ್ದ ಪ್ರೊ.ಶಿವರಾಮು ಕಾಡನಕುಪ್ಪೆ, ರಾಮನಗರ ಜಿಲ್ಲೆ ಕಾಡನಕುಪ್ಪೆ ಗ್ರಾಮದ ಶಿವಮ್ಮ-ಶಿವಲಿಂಗೇಗೌಡ ದಂಪತಿಯ ಮೊದಲ ಪುತ್ರನಾಗಿ 1953 ಆಗಸ್ಟ್‌ 9ರಂದು ಜನಿಸಿದರು. 36 ವರ್ಷಗಳ ಕಾಲ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಮೈಸೂರಿನ ವಿದ್ಯಾವರ್ಧಕ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾಗಿದ್ದರು.

2003ರಲ್ಲಿ ಮೈಸೂರು ವಿವಿ ಶಿಕ್ಷಣ ಮಂಡಳಿ ಸದಸ್ಯರಾಗಿ, 2006-09ರ ಅವಧಿಯಲ್ಲಿ ಸಿಂಡಿಕೇಟ್‌ ಸದಸ್ಯರಾಗಿ, 2003-05ರವರೆಗೆ ಮೈಸೂರು ವಿವಿ ಪರೀಕ್ಷಾ ಅಕ್ರಮ ಮತ್ತು ಲೋಪಗಳ ವಿಚಾರಣಾ ಸಮಿತಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ವಸುಂಧರೆಗೆ ಸಿಂಗಾರಿಗೌಡ ಪ್ರಶಸ್ತಿ: 1976ರಲ್ಲಿ ಇವರ ಮೊದಲ ಕೃತಿ ಸಮನ್ವಯ-ವಿಮಶಾì ಪ್ರಬಂಧಗಳ ಸಂಗ್ರಹ ಪ್ರಕಟಗೊಂಡಿದೆ. ಇವರ ಸಮನ್ವಯ, ಸಾಮಾಜಿಕ ನೆಲೆ, ಕುವೆಂಪು ಸಾಹಿತ್ಯ ಮತ್ತು ವಿಚಾರ-ವಿಮಶಾìಕೃತಿಗಳು, ಕುಕ್ಕರಹಳ್ಳಿ-ಸಾಮಾಜಿಕ ಅಧ್ಯಯನ, ವಸುಂಧರೆ ಕಾದಂಬರಿ, ನೀಲಿ ಸಂದ್ರಮ ಕವನ ಸಂಕಲನಗಳು ಪ್ರಸಿದ್ಧಿಪಡೆದಿವೆ.

Advertisement

ವಸುಂಧರೆ ಕಾದಂಬರಿಗೆ ಮಂಡ್ಯದ ಕರ್ನಾಟಕ ಸಂಘದ ಸಿಂಗಾರಿಗೌಡ ಪ್ರಶಸ್ತಿ ದೊರೆತಿದೆ. ಮಂಡ್ಯ ಕರ್ನಾಟಕ ಸಂಘದ ಸಾಹಿತ್ಯ ಮಾಸಿಕ ಅಭಿವ್ಯಕ್ತಿಯಲ್ಲಿ ಅಂಕಣಕಾರರಾಗಿರುವ ಇವರು ತಮ್ಮ ಆಸ್ಪತ್ರೆಯ ಅನುಭವಗಳ ಕುರಿತು 2015ರಲ್ಲಿ ಆಸ್ಪತ್ರೆಯಲ್ಲಿ ಐವತ್ತನಾಲ್ಕು ದಿನಗಳು ಕೃತಿ ಬರೆದಿದ್ದಾರೆ.

ಆಧುನಿಕ ಕನ್ನಡ ಕಥೆಗಳು, ಶಿವರಾಮ ಕಾರಂತ ಹತ್ತು ಅಧ್ಯಯನಗಳು, ವಿನಾಯಕ ಒಂದು ಅಧ್ಯಯನ, ಕನ್ನಡ ಪ್ರಬಂಧಗಳು, ಹಾಮಾನ ಸಾಹಿತ್ಯ ಪರಿಚಯ, ಆಧುನಿಕ ಕನ್ನಡ ಕಾವ್ಯ ಇತ್ಯಾದಿ 8 ಸಾಹಿತ್ಯ ಕೃತಿಗಳನ್ನು ಸಂಪಾದಿಸಿದ್ದಾರೆ.

2001ರಿಂದ 03ರವರೆಗೆ ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಆಯ್ಕೆ ಮಂಡಳಿ ಸದಸ್ಯ, ಪಂಪ ಪ್ರಶಸ್ತಿ ಆಯ್ಕೆ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 1977-78ರಲ್ಲಿ ತುರ್ತು ಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಭಾಗಿ, ಕನ್ನಡ ಭಾಷಾ ಚಳವಳಿ, ರೈತ ಚಳವಳಿ, ದಲಿತ ಚಳವಳಿಗಳನ್ನು ರೂಪಿಸಿದವರಲ್ಲಿ ಒಬ್ಬರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next