Advertisement

ಆತ್ಮಕತೆ ಮತ್ತು ಇತರ ಕತೆಗಳು

10:00 AM Jan 06, 2020 | mahesh |

 

Advertisement

ಈ ವರ್ಷದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಡಾ. ವಿಜಯಾ ಅವರ ಕುದಿ ಎಸರು ಎಂಬ ಆತ್ಮಕಥೆಗೆ ಲಭಿಸಿದೆ. ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಹೇಳ್ಳೋಣ. ಇದರ ಎರಡನೆಯ ಭಾಗದ ಬರವಣಿಗೆಯ ಕೊನೆಯ ಹಂತದಲ್ಲಿದೆ ಎಂದು ಕೇಳಿದ್ದೇನೆ. ಬೇಗ ಪ್ರಕಟವಾಗಲಿ ಎಂದು ಹಾರೈಕೆ.

ನನಗೆ ಚಿಕ್ಕಂದಿನಿಂದ ಆತ್ಮಕಥೆಗಳನ್ನು ಓದುವ ಚಟ ಜಾಸ್ತಿ. ನನ್ನ ಕಿಲಾಡಿ ಲೇಖಕ ಗೆಳೆಯನೊಬ್ಬ ಆತ್ಮಕಥೆ ಓದುವುದೆಂದರೆ ಇನ್ನೊಬ್ಬರ ಬೆಡ್‌ರೂಮಿನಲ್ಲಿ ಇಣುಕಿ ನೋಡುವ ಕೆಟ್ಟ ಕುತೂಹಲದಂತೆ ಎಂದು ಲೇವಡಿ ಮಾಡಿದ್ದ. ಇನ್ನೊಬ್ಬರ ಸ್ವಂತ ವಿಷಯಗಳಲ್ಲಿ ನಾವು ಕೈ ಹಾಕಬಾರದು, ಇನ್ನೊಬ್ಬರಿಗೆ ಬಂದ ಪತ್ರಗಳನ್ನು ಓದಬಾರದು ಎಂದು ನಮಗೆ ಸಣ್ಣವರಿರುವಾಗ ಹಿರಿಯರು ಬುದ್ಧಿ ಹೇಳಿದ್ದರು. ಬಹುಶಃ ಬುದ್ಧಿಯ ರೂಪದಲ್ಲಿ ನಮಗೆ ಹೇಳಿಕೊಟ್ಟ ಎಷ್ಟೋ ವಿಚಾರಗಳನ್ನು ನಾವು ಬೆಳೆದ ಮೇಲೆ ಉಲ್ಲಂ ಸಿದ್ದೇವೆ. ಅದು ಹೇಗೇ ಇರಲಿ, ನಾನು ಮಾತ್ರ ಯಾವುದೇ ಆತ್ಮಕಥೆ ಕಣ್ಣಿಗೆ ಬಿದ್ದರೆ ಓದದೇ ಮುಂದೆ ಹೋಗುವುದಿಲ್ಲ. ನಾನು ಮೊತ್ತಮೊದಲು ಓದಿದ ಆತ್ಮಕಥೆ ಎಂದರೆ ಶಿವರಾಮ ಕಾರಂತರ ಹುಚ್ಚು ಮನಸ್ಸಿನ ಹತ್ತು ಮುಖಗಳು ಎಂದು ನನ್ನ ನೆನಪು. ಆಗ ಅದಕ್ಕೆ ಅವರು ಅಳಿದುಳಿದ ನೆನಪುಗಳೊಂದಿಗೆ ಎಂಬ ಇನ್ನೊಂದು tagline ಸೇರಿಸಿದ್ದರು. ಮುಂದೆ ಅದು “ಸ್ಮತಿಪಟಲ’ದಿಂದ ಎಂಬ ಹಲವಾರು ಸಂಪುಟಗಳಲ್ಲಿ ಪ್ರಕಟವಾಯಿತು. ಆ ಮೇಲೆ ನಾನು ಡಿವಿಜಿಯವರ ಜ್ಞಾಪಕ ಚಿತ್ರಶಾಲೆ, ಮೂರ್ತಿರಾಯರ ಸಂಜೆಗಣ್ಣಿನ ಹಿನ್ನೋಟ, ಲಂಕೇಶರ ಹುಳಿಮಾವಿನ ಮರ, ಭೈರಪ್ಪನವರ ಭಿತ್ತಿ, ಕುಂವೀಯವರ ಗಾಂಧೀಕ್ಲಾಸ್‌, ಅನಂತಮೂರ್ತಿಯವರ ಸುರಗಿ, ಗಿರೀಶ ಕಾರ್ನಾಡರ ಆಡಾಡ್ತ ಆಯುಷ್ಯ - ಹೀಗೆ ಓದುತ್ತ ಸಾಗಿದ್ದೆ. ಕುಂವೀಯವರ ಗಾಂಧಿಕ್ಲಾಸ್‌ ಅಂತೂ ಒಂದು ಅದ್ಭುತ ಕೃತಿ.

ಯಾವುದೇ ಆತ್ಮಕಥೆ ಸಂಪೂರ್ಣವಲ್ಲ, ಒಬ್ಬ ವ್ಯಕ್ತಿ ಎಷ್ಟೋ ವಿಚಾರಗಳನ್ನು ಹೇಳದೆ ಮುಚ್ಚಿಟ್ಟಿರುತ್ತಾನೆ ಎಂದು ವಿವೃತ್ತ ಕಾಲೇಜು ಅಧ್ಯಾಪಕರೊಬ್ಬರು ನನಗೊಮ್ಮೆ ಹೇಳಿದ್ದರು. ಒಬ್ಬ ಲೇಖಕನಂತೂ ತಾನು ಎಲ್ಲವನ್ನೂ ಹೇಳಿದರೆ ಬದುಕಿರುವ ಅನೇಕ ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಂಡಾರು ಎಂದು ಹೇಳಿ ಕಣ್ಣು ಮಿಟುಕಿಸಿದ್ದ. ನನಗೆ ಆತ್ಮಕಥೆಗಳನ್ನು ಓದುವಾಗ ಅಂಥ ವಿಷಯಗಳ ಮೇಲೆ ಆಸಕ್ತಿಯಿಲ್ಲ. ಅವರು ತಮ್ಮ ಜೀವನವನ್ನು ಹೇಗೆ ಬಾಳಿದರು, ಹೇಗೆ ಎಂತೆೆಂಥ ಸಾಧನೆಗಳನ್ನು ಮಾಡಿದರು, ಆ ಕಾಲಘಟ್ಟದ ಬದುಕು ಹೇಗಿತ್ತು, ಎಂತೆಂಥ ಸವಾಲುಗಳನ್ನು ಅವರು ಹೇಗೆ ಎದುರಿಸಿದರು ಇವೆಲ್ಲ ನನ್ನ ಕುತೂಹಲದ ವಲಯಗಳು. ನನಗೂ ಅದೇ ರೀತಿಯ ಸವಾಲುಗಳು ಎದುರಾಗಿದ್ದುವು ಮತ್ತು ನಾನು ಅವುಗಳನ್ನೆದುರಿಸುವಲ್ಲಿ ಸೋತೆನಾದುದರಿಂದ ಯಾವ ಸಾಧನೆಯನ್ನೂ ಮಾಡಲಿಲ್ಲವಲ್ಲ ಎಂದು ಕೊರಗನ್ನು ಹಚ್ಚಿಕೊಂಡಿರುತ್ತಿದ್ದೆ.

ಎ. ಕೆ. ರಾಮಾನುಜನ್‌ ಅವರು ಇನ್ನೊಬ್ಬನ ಆತ್ಮಚರಿತ್ರೆ ಎಂಬ ಲಘುದಾಟಿಯ ಕೃತಿಯನ್ನು ರಚಿಸಿದ್ದಾರೆ. ಅದೇ ರೀತಿ ಸುಮಾರು ಹದಿನೈದು ವರ್ಷಗಳ ಹಿಂದೆ ನಾನು ಮಗದೊಬ್ಬನ ಆತ್ಮಚರಿತ್ರೆ ಎಂಬ ಕಾದಂಬರಿಯೊಂದನ್ನು ಬರೆಯಲು ಪ್ರಾರಂಭಿಸಿದ್ದೆ. ಆದರೆ, ಅದು ಇಪ್ಪತ್ತು ಪುಟಗಳಾಗುವಾಗ ನಿಂತುಹೋಯಿತು. ಇತ್ತೀಚೆಗೆ ನನ್ನ ಟಿಪ್ಪಣಿ ಪುಸ್ತಕವನ್ನು ಹೊರತೆಗೆದು ನೋಡಿದಾಗ ಅದನ್ನು ಈ ವಾಕ್ಯಗಳಿಂದ ಪ್ರಾರಂಭಿಸಿದ್ದೆ- “ಆತ್ಮಚರಿತ್ರೆಯನ್ನು ಜನಪ್ರಿಯರು ಅಥವಾ ಸಾಧಕರು ಮಾತ್ರ ಬರೆಯಬೇಕೆ? ಅನಾಮಧೇಯನೊಬ್ಬ ಬರೆದರೂ ಅದನ್ನು ಓದುವ ಮಂದಿ ಇರಲಾರರೆ? ಕತೆಯಂತೆ ಬರೆದರೆ ಮತ್ತು ಅದಕ್ಕೆ ತನ್ನ ಬದುಕಿನ ಘಟನೆಗಳನ್ನೇ ಸೇರಿಸಿದರೆ ಇಷ್ಟವಾದೀತೆಂಬ ನಂಬಿಕೆ ಅವನದು’.

Advertisement

ಅಷ್ಟೇನೂ ಜನರ ಬಾಯಿಯಲ್ಲಿ ಬಾರದ ಕೆಲವು ಆತ್ಮಚರಿತ್ರೆಗಳನ್ನೂ ನಾನು ಓದಿದ್ದೇನೆ. ಶೇಣಿ ಗೋಪಾಲಕೃಷ್ಣಭಟ್ಟರ ಅತ್ಮಚರಿತ್ರೆ (ಹೆಸರು ನೆನಪಿಲ್ಲ), ಪುತ್ತೂರಿನ ವಕೀಲರಾದ ಉರಿಮಜಲು ರಾಮಭಟ್ಟರ ಸತ್ವರಜ, ನನ್ನ ಹಿರಿಯ ಸರೀಕರೂ ಅಂಕಣಕಾರರೂ ಆದ ವಿ. ಬಿ. ಅರ್ತಿಕಜೆಯವರ ನೂರೆಂಟು ನೆನಪುಗಳು, ನನ್ನ ಕನ್ನಡ ಪ್ರಾಧ್ಯಾಪಕರಾಗಿದ್ದ ಉಡುಪಿಯ ರಾಮದಾಸ್‌ ಅವರ ಎಳೆನಿಂಬೆ, ಹೆಚ್‌.ಜಿ. ಸೋಮಶೇಖರರಾಯರ ಸೋಮಣ್ಣನ ಸ್ಟಾಕ್‌ನಿಂದ, ಇತ್ತೀಚೆಗೆ ಬಂದ ವಿದ್ಯಾಭೂಷಣರ ನೆನಪೇ ಸಂಗೀತ – ಇವೆಲ್ಲ ನನ್ನ ತಕ್ಷಣದ ನೆನಪಿಗೆ ಬರುವ ಇನ್ನು ಕೆಲವು ಕೃತಿಗಳು.

ನನಗೆ ಇಂಗ್ಲಿಷು ಓದಲು ತಕ್ಕಮಟ್ಟಿಗೆ ಸಾಧ್ಯವಾದ ಮೇಲೆ ಮೂಲ್ಕಿಯ ಕಾಲೇಜಿನಲ್ಲಿ ಇಂಗ್ಲಿಷು ಪ್ರಾಧ್ಯಾಪಕರಾಗಿದ್ದ ಎಸ್‌.ಎನ್‌. ಮೂರ್ತಿಯವರು ನನಗೆ ಆತ್ಮಚರಿತ್ರೆ ಓದುವ ಹುಚ್ಚನ್ನೇ ಹಿಡಿಸಿಬಿಟ್ಟರು. ನಾನಿನ್ನೂ ನೆಹರೂ ಅವರ ಆ್ಯನ್‌ ಆಟೋಬಯಾಗ್ರಫಿ ಓದುತ್ತಿದ್ದೆ. ಆಗ ತಾನೇ ಮಾನಸ ಗಂಗೋತ್ರಿಯಲ್ಲಿ ಸಿಡಿಎನ್‌ ಅವರ ಶಿಷ್ಯನಾಗಿ ಸ್ನಾತಕೋತ್ತರ ಪದವಿ ಪಡೆದು ಹೊರಬಿದ್ದ ಮೂರ್ತಿಯವರು ನನಗೆ ಕಹಿನಾಲಗೆಯ ನೀರದ ಚೌಧುರಿ (1897-1999)ಯವರ ಆ್ಯನ್‌ ಆಟೋಬಯಾಗ್ರಫಿ ಆಫ್ ಎನ್‌ ಅನ್‌ನೋನ್‌ ಇಂಡಿಯನ್‌ (1951) ಎಂಬ ಕುತೂಹಲಕಾರಿ ಆತ್ಮಚರಿತ್ರೆಯನ್ನು ಪುಕ್ಕಟೆಯಾಗಿ ಕೊಟ್ಟರು. ತಮ್ಮ ಐವತ್ತನೆಯ ವಯಸ್ಸಿನಲ್ಲಿ ಬರೆದ ಅದಂತೂ ಆಗ ನನ್ನ ಸರ್ವಾಂಗವನ್ನೂ ವ್ಯಾಪಿಸಿಕೊಂಡ ಕೃತಿ. ಬಂಗಾಲದ ಒಂದು ಸಣ್ಣ ಹಳ್ಳಿಯಲ್ಲಿ ಹುಟ್ಟಿದ ನೀರದಬಾಬು ಬ್ರಿಟಿಷರಂತೆ ಬದುಕಬೇಕೆಂಬ ಹಠದಿಂದ ಇಂಗ್ಲಿಷ್‌ ಕಲಿತು ಆ ಮೇಲೆ ಇಂಗ್ಲೆಂಡಿಗೇ ಹೋಗಿ ನೆಲೆಸಿ ತಮ್ಮ ಎಂಬತ್ತೇಳನೆಯ ವಯಸ್ಸಿನಲ್ಲಿ ದೈ ಹ್ಯಾಂಡ್‌, ಗ್ರೇಟ್‌ ಅನಾರ್ಕಿ ಎಂಬ ಆತ್ಮಚರಿತ್ರೆಯ ಎರಡನೆಯ ಭಾಗವನ್ನು ಪ್ರಕಟಿಸಿದರು.

ಪ್ರೊ. ಮೂರ್ತಿಯವರು ನನಗೆ ಬಟ್ರಾಂಡ್‌ ರಸ್ಸೆಲ್‌ನ ಎರಡು ಸಂಪುಟಗಳ ಆತ್ಮಚರಿತ್ರೆ ಓದಲು ಪ್ರೇರೇಪಿಸಿದರೂ ನನ್ನ ಪ್ರಯತ್ನ ಸಫ‌ಲವಾಗದೆ ಇರಲು ಕಾರಣ ಅಲ್ಲಿಯ ಕ್ಲಿಷ್ಟವಾದ ಇಂಗ್ಲಿಷ್‌. ಆದರೂ ಅಲ್ಲಿಯ ಒಂದು ವಾಕ್ಯ ನನ್ನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ- I loved the humanity but hated every individual.

ಈ ಲೇಖನ ಬರೆಯುವಾಗ ನನ್ನ ಸುದೀರ್ಘ‌ ಬದುಕಿನಲ್ಲಿ ನಾನು ಎಷ್ಟು ಆತ್ಮಚರಿತ್ರೆಗಳನ್ನು ಓದಿರಬಹುದು ಎಂದು ಯೋಚಿಸುತ್ತಿದ್ದೆ. ಆತ್ಮಚರಿತ್ರೆಯಂತೆ ಜೀವನ ಚರಿತ್ರೆಗಳಲ್ಲೂ ನನ್ನ ಕೆಟ್ಟ ಕುತೂಹಲ ಅಷ್ಟೇ ನಿಚ್ಚಳವಾಗಿದೆ. ಅವುಗಳ ನಡುವೆ ನಾನು ಭೇದವನ್ನೆಣಿಸುವುದಿಲ್ಲ. 1791ರಲ್ಲಿ ಪ್ರಕಟವಾದ ಬಾಸ್ವೆಲ್‌ನ ಲೈಫ್ ಆಫ್ ಸಾಮ್ಯುವೆಲ್‌ ಜಾನ್‌ಸನ್‌ನಿಂದ ಹಿಡಿದು ಇತ್ತೀಚೆಗೆ ಪ್ರಕಟವಾದ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾದ ಮಾಜಿ ಗವರ್ನರ್‌ ರಘುರಾಮರಾಜನ್‌ ಅವರ ಐ ಡು ವಾಟ್‌ ಐ ಡು ತನಕ ಸಾವಿರಕ್ಕಿಂತಲೂ ಹೆಚ್ಚಿರಬಹುದು ಎಂದು ನನ್ನ ಅನಿಸಿಕೆ. ಇವೆಲ್ಲ ನನ್ನ ಬದುಕನ್ನು ರೂಪಿಸಿದ್ದು ನಿಜ. ಹೀಗಾಗಬಹುದಿತ್ತು, ನಾನು ಹೀಗೆ ನಡೆಯಬಹುದಾಗಿತ್ತು, ಈ ದಾರಿ ಹಿಡಿಯುವ ಬದಲು ಇನ್ನೊಂದು ದಾರಿ ಹಿಡಿಯಬಹುದಿತ್ತು ಎಂದು ಅವು ತೋರಿಸಿದುವು. ಪ್ರತಿಯೊಬ್ಬರ ಆತ್ಮಚರಿತ್ರೆ ಓದಿದಾಗ ಅವರು ಎದುರಿಸಿದ ಸವಾಲುಗಳು ನನ್ನ ಜೀವನದಲ್ಲೂ ಬಂದಾಗ ನಾನು ಏನು ಮಾಡಿದೆ, ಎಲ್ಲಿ ಸೋತೆ ಎನ್ನುವುದನ್ನು ಅವು ಎಚ್ಚರಿಸುತ್ತ ಬಂದುವು. ಬಹುಶಃ ಆತ್ಮಚರಿತ್ರೆಗಳು ನಮಗೆ ಮಾಡುವ ಹಲವು ಉಪಕಾರಗಳಲ್ಲಿ ಇದು ಒಂದು ಎಂದು ನನಗೆ ಅನ್ನಿಸುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಆ ಓದುವ ಸಂತೋಷವಿದೆಯಲ್ಲ, ಅದಂತೂ ಮರೆಯಲಾಗದ್ದು.

ನಾನು ಬರೇ ಸಾಹಿತಿಗಳ ಆತ್ಮಚರಿತ್ರೆ, ಜೀವನ ಚರಿತ್ರೆಗಳನ್ನಷ್ಟೇ ಓದುವುದಿಲ್ಲ. ಮಹಾತ್ಮಾ ಗಾಂಧಿಯವರ ಸತ್ಯಶೋಧನ ಅಥವಾ ನನ್ನ ಆತ್ಮಚರಿತ್ರೆ (ಗೊರೂರರ ಕನ್ನಡ ಅನುವಾದ), ಅಬ್ದುಲ್‌ ಕಲಾಂ ಅವರ ವಿಂಗ್ಸ್‌ ಆಫ್ ಫ‚ೈರ್‌ ನಾನು ಓದಿದ ಅತ್ಯಂತ ಶ್ರೇಷ್ಠ ಆತ್ಮಚರಿತ್ರೆಗಳು. ಗವಾಸ್ಕರ್‌ ಅವರ ಸನ್ನಿಡೇಸ್‌, ಕುರಸೋವಾನ ಸಂಥಿಂಗ್‌ ಲೈಕ್‌ ಅನ್‌ ಆಟೊಬಯಾಗ್ರಫಿ ನಾನು ಮೆಚ್ಚಿದ ಜೀವನಚರಿತ್ರೆಗಳು.

ರಾಜಕಾರಣಿಗಳ ಜೀವನಚರಿತ್ರೆಗಳೂ ನನ್ನನ್ನಾಕರ್ಷಿಸುತ್ತವೆ. ದುರ್ಗಾದಾಸ್‌ ಅವರ ಇಂಡಿಯಾ : ಪ್ರಮ್ ಕರ್ಜನ್‌ ಟು ನೆಹರು ಅಂಡ್‌ ಆಫ್ಟರ್‌, ಅನುಜ್‌ ಧರ್‌ ಅವರ ಯುವರ್‌ ಪ್ರಮ್ ಮಿನಿಸ್ಟರ್‌ ಈಸ್‌ ಡೆಡ್‌, ಅಮೆರಿಕೆಯ ಎಫ್ಬಿಐನ ಡೈರೆಕ್ಟರ್‌ ಆಗಿ ಬರಾಕ್‌ಒಬಾಮಾನಿಂದ ನೇಮಕಗೊಂಡು ಡೊನಾಲ್ಡ್‌ಟ್ರಂಪ್‌ನಿಂದ ಉಚ್ಛಾಟನೆಗೊಂಡ ಜೇಮ್ಸ್‌ ಕೋಮಿ ಅವರ ಅ ಹೈಯರ್‌ ಲಾಯಲ್ಟಿ (ಇದನ್ನು ಓದಿ ನಾನು ಎಷ್ಟು ಖುಷಿಪಟ್ಟೆನೆಂದರೆ ನಾನು ಗೌರವಿಸುವ ಓರ್ವ ಹಿರಿಯರಿಗೆ ಅದನ್ನು ಓದಲು ತಕ್ಷಣ ಕಳಿಸಿಕೊಟ್ಟೆ) ಮುಂತಾದುವು ನನ್ನ ಕುತೂಹಲವನ್ನು ಹೆಚ್ಚಿಸಿದ ಅಂಥ ಜೀವನಚರಿತ್ರೆಗಳು. ವಾರದ ಹಿಂದೆ ನಟವರ್‌ ಸಿಂಗ್‌ ಅವರ ವನ್‌ ಲೈಫ್ ಈಸ್‌ ನಾಟ್‌ ಇನಫ್ ಎಂಬ 2014ರಲ್ಲಿ ಪ್ರಕಟವಾದ ಆತ್ಮಚರಿತ್ರೆ ಓದಿ ಮುಗಿಸಿದ್ದೇನೆ. ಕನ್ನಡದ ಸಂದರ್ಭದಲ್ಲಿ ಹೇಳುವುದಾದರೆ ಕಡಿದಾಳ್‌ ಮಂಜಪ್ಪನವರ ಆತ್ಮಚರಿತ್ರೆ ನನಸಾಗದ ಕನಸು ಹಾಗೂ ನಿಜಲಿಂಗಪ್ಪನವರ ಜೀವನಚರಿತ್ರೆ ಓದಲೇಬೇಕಾದ ಕೃತಿಗಳು. ನಿನ್ನೆಯಷ್ಟೇ ಎಸ್‌. ಎಂ. ಕೃಷ್ಣ ಅವರ ಜೀವನಚರಿತ್ರೆ ಪ್ರಕಟವಾಗಿದೆ. ದೇವೇಗೌಡರು ತಮ್ಮ ಜೀವನಚರಿತ್ರೆಯನ್ನು ಬರೆಯುತ್ತಿದ್ದಾರೆಂಬ ಸುದ್ದಿಯಿದೆ.

ವಾಟ್ಸಾಪ್‌, ಫೇಸ್‌ಬುಕ್‌, ಟಿವಿ ಸೀರಿಯಲ್‌ಗ‌ಳ ಮಧ್ಯೆ ಕಳೆದುಹೋದ ನಮ್ಮ ಯುವಜನರು ಪುಸ್ತಕಗಳನ್ನು ಓದುತ್ತಿಲ್ಲ ಎಂಬ ದೂರು ಇದೆ. (ಅದರಿಂದಾಗಿ ಅನೇಕ ಪ್ರಕಾಶನ ಸಂಸ್ಥೆಗಳು ಮುಚ್ಚುವ ಸ್ಥಿತಿಗೆ ಬಂದಿವೆ ಎಂದು ಸುದ್ದಿ. ಇಲ್ಲದಿದ್ದರೆ ಪ್ರಕಟವಾಗುವಾಗ ಐದಾರು ಸಾವಿರದಿಂದ ಹದಿನೈದು ಸಾವಿರದ ತನಕ ಬೆಲೆ ಇರುತ್ತಿದ್ದ ಕೃತಿಗಳು ಈಗ ಬರೇ ನೂರಿಪ್ಪತ್ತರಿಂದ ಐದುನೂರು ರೂಪಾಯಿಗಳ ಒಳಗೆ ಲಭ್ಯವಿವೆ. ನನ್ನ ಬಳಿ ಹೆಚ್ಚು ಹಣವಿಲ್ಲದೆ ಪುಸ್ತಕ ಖರೀದಿ ಸಾಧ್ಯವಿಲ್ಲದಾಗ ಗ್ರಂಥಾಲಯಗಳಿಗೆ ಹೋಗಿಯೇ ಓದಬೇಕಿತ್ತು. ಈಗ ಹಾಗಲ್ಲ.) ಅವರಿಗೆ ಒಮ್ಮೆ ಆತ್ಮಚರಿತ್ರೆಗಳ ರುಚಿ ಹತ್ತಿಸಿ ನೋಡಿ, ಆಮೇಲೆ ಓದುವ ಹವ್ಯಾಸ ತನ್ನಿಂದ ತಾನೇ ಹೆಚ್ಚಾಗುತ್ತದೆ ಎನ್ನುವುದು ನನ್ನ ಅನುಭವಜನ್ಯ ನಂಬಿಕೆ, ವಿಶ್ವಾಸ.

ಗೋಪಾಲಕೃಷ್ಣ ಪೈ

Advertisement

Udayavani is now on Telegram. Click here to join our channel and stay updated with the latest news.

Next