Advertisement

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌: ಒಸಾಕಾ, ಬಾರ್ಟಿ, ಸೆರೆನಾ ಮುನ್ನಡೆ

10:11 AM Jan 24, 2020 | sudhir |

ಮೆಲ್ಬರ್ನ್: ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಕೂಟದ ವನಿತೆಯರ ಸಿಂಗಲ್ಸ್‌ನಲ್ಲಿ ಅಗ್ರ ರ್‍ಯಾಂಕಿನ ಹೆಚ್ಚಿನ ಆಟಗಾರ್ತಿಯರು ಗೆಲುವಿ ನೊಂದಿಗೆ ಮೂರನೇ ಸುತ್ತು ತಲುಪಿದ್ದಾರೆ. ಗೆಲುವು ಸಾಧಿಸಿದವರಲ್ಲಿ ಹಾಲಿ ಚಾಂಪಿಯನ್‌ ನವೋಮಿ ಒಸಾಕಾ, ವಿಶ್ವದ ನಂಬರ ವನ್‌ ಆ್ಯಶ್‌ ಬಾರ್ಟಿ, ಸೆರೆನಾ ವಿಲಿಯಮ್ಸ್‌ ಸೇರಿದ್ದಾರೆ.

Advertisement

ಒಸಾಕಾಗೆ ಜಯ
ಚೀನದ ಝೆಂಗ್‌ ಸೈಸೈ ಅವರನ್ನು 6-2, 6-4 ಸೆಟ್‌ಗಳಿಂದ ಕೆಡಹಿದ ನವೋಮಿ ಒಸಾಕಾ ಅವರು ಸುಲಭವಾಗಿ ಮೂರನೇ ಸುತ್ತಿಗೇರಿದ್ದಾರೆ. ದ್ವಿತೀಯ ಸೆಟ್‌ನಲ್ಲಿ 4-2 ಹಿನ್ನಡೆಯಲ್ಲಿದ್ದರೂ ವಿಚಲಿತರಾಗದೇ ಆಡಿದ ಒಸಾಕಾ ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾದರು. ಎದುರಾಳಿ ಝೆಂಗ್‌ ಪಂದ್ಯ ಅಂಕದ ವೇಳೆ ಡಬಲ್‌ ಫಾಲ್ಟ್ ಮಾಡಿದ್ದರಿಂದ ಒಸಾಕಾ ಜಯ ಸಾಧಿಸಿದರು. ಒಸಾಕಾ ಮುಂದಿನ ಪಂದ್ಯದಲ್ಲಿ ಕೊಕೊ ಗಾಫ್ ಅಥವಾ ಸೊರಾನಾ ಸಿಸ್ಟಿìಯಾ ಅವರ ನಡುವಣ ಪಂದ್ಯದ ವಿಜೇತರನ್ನು ಎದುರಿಸಲಿದ್ದಾರೆ.

ದ್ವಿತೀಯ ಸೆಟ್‌ನ ಆರಂಭದಲ್ಲಿ ಹಿನ್ನಡೆ ಅನುಭವಿ ಸಿದಾಗ ಒಸಾಕಾ ಸಿಟ್ಟಿನಿಂದ ರ್ಯಾಕೆಟ್‌ ಎಸೆದರಲ್ಲದೇ ಚೆಂಡನ್ನು ಬಲವಾಗಿ ನೆಲಕ್ಕೆ ಎಸೆದಿದ್ದರು. ಸರ್ವ್‌ ಮಾಡುವಾಗ ಕೆಲವೊಮ್ಮೆ ಅವರು ಒತ್ತಡದಲ್ಲಿ ಸಿಲುಕಿದವರಂತೆ ಕಂಡು ಬಂದರು.

ಬಾರ್ಟಿ ಮುನ್ನಡೆ
ಆತಿಥೇಯ ಆಸ್ಟ್ರೇಲಿಯದ ವಿಶ್ವದ ನಂಬರ್‌ ವನ್‌ ಆ್ಯಶ್‌ ಬಾರ್ಟಿ ಬಿರುಸಿನ ಆಟವಾಡಿ ಮೂರನೇ ಸುತ್ತಿಗೇರಿದ್ದಾರೆ. ಪೊಲೊನಾ ಹೆರ್ಕಾಗ್‌ ಅವರನ್ನು 6-1, 6-4 ಸೆಟ್‌ಗಳಿಂದ ಕೆಡಹಿದ ಬಾರ್ಟಿ ಪ್ರಶಸ್ತಿ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ 1978ರಲ್ಲಿ ತವರಿನ ಆಟಗಾರ್ತಿಯೊಬ್ಬರು ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಜಯಿಸಿದ್ದರು.

ಸೋಮವಾರ ಮೊದಲ ಸುತ್ತಿನ ಆಟದಲ್ಲಿ ಬಾರ್ಟಿ ಮೊದಲ ಸೆಟ್‌ ಕಳೆದುಕೊಂಡಾಗ ತವರಿನ ಅಭಿಮಾನಿಗಳಿಗೆ ಆಘಾತವಾಗಿತ್ತು. ಆದರೆ ಕೂಟದ ಮೂರನೇ ದಿನ ಬಾರ್ಟಿ ಅಂತಹ ಯಾವುದೇ ತಪ್ಪು ಮಾಡಲಿಲ್ಲ. ಕೇವಲ 24 ನಿಮಿಷಗಳಲ್ಲಿ ಮೊದಲ ಸೆಟ್‌ ಗೆದ್ದು ತನ್ನ ಸಾಮರ್ಥ್ಯ ಪ್ರದರ್ಶಿಸಿದ್ದರು.
ಆದರೆ ದ್ವಿತೀಯ ಸೆಟ್‌ನಲ್ಲಿ ಬಾರ್ಟಿ ಅವರು ಹೆರ್ಕಾಗ್‌ ಅವರಿಂದ ಪ್ರತಿರೋಧ ಎದುರಿಸಿದರು. ಆದರೆ ಬಾರ್ಟಿ ಎದುರಿಸಿದ ಆರು ಬ್ರೇಕ್‌ ಪಾಯಿಂಟ್‌ಗಳನ್ನು ರಕ್ಷಿಸಲು ಯಶಸ್ವಿಯಾಗಿ ಅಪಾಯದಿಂದ ಪಾರಾದರು.

Advertisement

ನಿವೃತ್ತಿ ಸದ್ಯಕ್ಕಿಲ್ಲ
ಮಾಜಿ ನಂಬರ್‌ ವನ್‌ ಕ್ಯಾರೋಲಿನ್‌ ವೊಜ್ನಿಯಾಕಿ ಅವರು ಕಠಿನ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸದ್ಯಕ್ಕೆ ನಿವೃತ್ತಿಯಾಗುವುದಿಲ್ಲ ಎಂದು ಸಾರಿದ್ದಾರೆ.

ಮೊದಲ ಸೆಟ್‌ನಲ್ಲಿ 1-5 ಹಿನ್ನಡೆ ಅನುಭವಿಸಿದ ಬಳಿಕ ಅದ್ಭುತ ಹೋರಾಟ ಸಂಘಟಿಸಿದ ವೊಜ್ನಿಯಾಕಿ 7-5, 7-5 ಸೆಟ್‌ಗಳಿಂದ ಉಕ್ರೈನಿನ ಡಯಾನಾ ಯಾತ್ರೆಂಸ್ಕ ಅವರನ್ನು ಕೆಡಹಿದರು.

2018ರಲ್ಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದ ವೊಜ್ನಿಯಾಕಿ ಮೆಲ್ಬರ್ನ್ ಪಾರ್ಕ್‌ನಲ್ಲಿ ಬೇಗನೇ ನಿರ್ಗಮಿ ಸುವವರಿದ್ದರು. ಆದರೆ ಸತತ ಆರು ಗೇಮ್‌ ಗೆಲ್ಲುವ ಮೂಲಕ ಮೊದಲ ಸೆಟ್‌ ತನ್ನದಾಗಿಸಿಕೊಂಡ ಅವರು ಪಂದ್ಯದಲ್ಲಿ ಹಿಡಿತ ಸಾಧಿಸಿ ಮುನ್ನಡೆದರು.

ವೊಜ್ನಿಯಾಕಿ ಮುಂದಿನ ಸುತ್ತಿನಲ್ಲಿ ಒನಸ್‌ ಜಬಿಯುರ್‌ ಅವರನ್ನು ಎದುರಿಸಲಿದ್ದಾರೆ. ಅವರು ಇನ್ನೊಂದು ಪಂದ್ಯದಲ್ಲಿ ಟ್ಯುನಿಶಿಯಾದ ಕ್ಯಾರೋಲಿನ್‌ ಗಾರ್ಸಿಯಾ ಅವರನ್ನು 1-6, 6-2, 6-3 ಸೆಟ್‌ಗಳಿಂದ ಕೆಡಹಿದ್ದರು.

ಸೆರೆನಾಗೆ ಕಠಿನ ಜಯ
ಸ್ಲೋವಾನಿಯದ ತಮರಾ ಜಿದಾನ್ಸೆಕ್‌ ಅವರ ಸವಾಲನ್ನು ಮೆಟ್ಟಿ ನಿಂತ ಹಿರಿಯ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಮೂರನೇ ಸುತ್ತು ಪ್ರವೇಶಿಸಲು ಯಶಸ್ವಿಯಾಗಿದ್ದಾರೆ. ದಾಖಲೆ 24ನೇ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿರುವ 38ರ ಹರೆಯದ ಸೆರೆನಾ ಅವರು ಜಿದಾನ್ಸೆಕ್‌ ಅವರನ್ನು 6-2, 6-4 ಸೆಟ್‌ಗಳಿಂದ ಉರುಳಿಸಿದರು. ಮುಂದಿನ ಸುತ್ತಿನಲ್ಲಿ ಅವರು ಚೀನದ ವಾಂಗ್‌ ಕಿಯಾಂಗ್‌ ಅವರನ್ನು ಎದುರಿಸಲಿದ್ದಾರೆ.

70ನೇ ರ್‍ಯಾಂಕಿನ ಜಿದಾನ್ಸೆಕ್‌ ದ್ವಿತೀಯ ಸೆಟ್‌ನಲ್ಲಿ ಸೆರೆನಾಗೆ ತಿರುಗೇಟು ನೀಡಲು ಪ್ರಯತ್ನಿಸಿದ್ದರು. ಏಳು ಬ್ರೇಕ್‌ ಪಾಯಿಂಟ್‌ ರಕ್ಷಿಸಿದ ಜಿದಾನ್ಸೆಕ್‌ ಮುನ್ನಡೆ ಸಾಧಿಸಲು ಶತಪ್ರಯತ್ನ ನಡೆಸಿದರು. ಇದರಿಂದ ತೀವ್ರ ಒತ್ತಡಕ್ಕೆ ಒಳಗಾದ ಸೆರೆನಾ ಹಲವು ಬಾರಿ ಅನಗತ್ಯ ತಪ್ಪುಗಳನ್ನು ಎಸೆಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next