Advertisement

ಆಸ್ಟ್ರೇಲಿಯದ ಹ್ಯಾಟ್ರಿಕ್‌ ಯುಗ ಆರಂಭ

12:49 AM May 23, 2019 | Sriram |

1983ರ ಬಳಿಕ ಅನೇಕ ದೇಶಗಳಲ್ಲಿ ಆತಿಥ್ಯ ಕಂಡ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿ 1999ರಲ್ಲಿ ಇಂಗ್ಲೆಂಡಿಗೆ ಮರಳಿತ್ತು. ಆದರೆ ಇದಕ್ಕೆ ಪ್ರಧಾನ ಪ್ರಾಯೋಜಕರ್ಯಾರೂ ಇರಲಿಲ್ಲ. ಐಸಿಸಿಯೇ ಮುಂದೆ ನಿಂತು ಕೂಟವನ್ನು ಆಯೋಜಿಸಿತು. ಹೀಗಾಗಿ “ಐಸಿಸಿ ವಿಶ್ವಕಪ್‌’ ಎಂದೇ ಕರೆಯಲ್ಪಟ್ಟಿತು.

Advertisement

ಇದಕ್ಕೂ ಒಂದು ಕಾರಣವಿದೆ. 1997ರಲ್ಲಿ ಐಸಿಸಿ ಅಧ್ಯಕ್ಷರಾಗಿ ಭಾರತದ ಜಗ್‌ಮೋಹನ್‌ ದಾಲಿ¾ಯ ನೇಮಕಗೊಂಡಿದ್ದರು. ಅವರು ಪಕ್ಕಾ ವ್ಯಾವಹಾರಿಕ ಬುದ್ಧಿ. ಕೂಟದ ಲಾಭವನ್ನೆಲ್ಲ ಐಸಿಸಿಯೇ ಗಳಿಸಬೇಕೆಂದು ದಾಲಿ¾ಯ ಬಯಸಿದ್ದರು. ಇದರಲ್ಲಿ ಅವರು ಯಶಸ್ವಿಯೂ ಆದರು. ಇಂದಿಗೂ ವಿಶ್ವಕಪ್‌ ಸಂಘಟನೆ ಐಸಿಸಿಯಿಂದಲೇ ಆಗುತ್ತಿರುವುದು ಇದಕ್ಕೆ ಸಾಕ್ಷಿ!

12 ತಂಡ, 42 ಪಂದ್ಯ
7ನೇ ಆವೃತ್ತಿಯ ಈ ವಿಶ್ವಕಪ್‌ನಲ್ಲೂ 12 ತಂಡಗಳು ಪಾಲ್ಗೊಂಡಿದ್ದವು. ಟೆಸ್ಟ್‌ ಮಾನ್ಯತೆ ಪಡೆದ 9 ತಂಡಗಳ ಜತೆಗೆ ಕೀನ್ಯಾ, ಬಾಂಗ್ಲಾದೇಶ ಮತ್ತು ಸ್ಕಾಟ್ಲೆಂಡ್‌ ಅವಕಾಶ ಪಡೆದವು. ಬಾಂಗ್ಲಾ ಮತ್ತು ಸ್ಕಾಟ್ಲೆಂಡ್‌ ಪಾಲಿಗೆ ಇದು ಮೊದಲ ವಿಶ್ವಕಪ್‌ ಸಂಭ್ರಮವಾಗಿತ್ತು. ಒಟ್ಟು 42 ಪಂದ್ಯಗಳನ್ನು ಆಡಲಾಯಿತು.

ಏಕಪಕ್ಷೀಯ ಫೈನಲ್‌ನಲ್ಲಿ ಪಾಕಿಸ್ಥಾನವನ್ನು 8 ವಿಕೆಟ್‌ಗಳಿಂದ ಬಗ್ಗುಬಡಿದ ಸ್ಟೀವ್‌ ವೋ ಸಾರಥ್ಯದ ಆಸ್ಟ್ರೇಲಿಯ 2ನೇ ಸಲ ಕಪ್‌ ಎತ್ತಿತು. ಅಷ್ಟೇ ಅಲ್ಲ, ತನ್ನ ಹ್ಯಾಟ್ರಿಕ್‌ ಸಾಧನೆಗೆ ಈ ಕೂಟವನ್ನೇ ಮೆಟ್ಟಿಲನ್ನಾಗಿ ಮಾಡಿಕೊಂಡಿತು. ಮುಂದಿನೆರಡೂ ಕೂಟಗಳಲ್ಲಿ ಆಸ್ಟ್ರೇಲಿಯವೇ ಚಾಂಪಿಯನ್‌ ಆಗುವ ಮೂಲಕ ತನ್ನ ಹ್ಯಾಟ್ರಿಕ್‌ ಅಭಿಯಾನವನ್ನು ಪೂರ್ತಿಗೊಳಿಸಿತು.

ಭಾರತಕ್ಕೆ ಅವಳಿ ಸೋಲಿನ ಆಘಾತ
ಈ ಕೂಟದಲ್ಲಿ ಭಾರತದ ಪ್ರದರ್ಶನ ಶೋಚನೀಯವಾಗಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಆರಂಭ ಪಡೆದ ಅಜರ್‌ ಪಡೆ, ಜಿಂಬಾಬ್ವೆ ವಿರುದ್ಧವೂ 3 ರನ್ನುಗಳಿಂದ ಎಡವಿ ಮುಖಭಂಗ ಅನುಭವಿಸಿತು. ಭಾರತದ ಗೆಲುವಿನ ಖಾತೆ ತೆರೆಯಲು ಕೀನ್ಯಾ ಎದುರಾಗಬೇಕಾಯಿತು. ಆಗ ತಂದೆಯ ನಿಧನದ ದುಃಖದಲ್ಲಿದ್ದ ಸಚಿನ್‌ ತೆಂಡುಲ್ಕರ್‌ ಈ ಪಂದ್ಯದಲ್ಲಿ 140 ರನ್‌ ಬಾರಿಸಿ ಕ್ರೀಡಾಸ್ಪೂರ್ತಿ ಮೆರೆದರು. ರಾಹುಲ್‌ ದ್ರಾವಿಡ್‌ 104 ರನ್‌ ಹೊಡೆದರು. ಗೆಲುವಿನ ಅಂತರ 94 ರನ್‌.

Advertisement

ಶ್ರೀಲಂಕಾ ವಿರುದ್ಧ ಸೌರವ್‌ ಗಂಗೂಲಿ (183) ಮತ್ತು ರಾಹುಲ್‌ ದ್ರಾವಿಡ್‌ (145) ಅಮೋಘ ಶತಕ ಸಿಡಿಸಿ 157 ರನ್‌ ಗೆಲುವನ್ನು ತಂದಿತ್ತರು. ಬಳಿಕ ಆತಿಥೇಯ ಇಂಗ್ಲೆಂಡಿಗೂ 63 ರನ್ನುಗಳ ಸೋಲುಣಿಸಿ ಸೂಪರ್‌ ಸಿಕ್ಸ್‌ ಪ್ರವೇಶವನ್ನು ಖಾತ್ರಿಪಡಿಸಿತು.

ಸೂಪರ್‌ ಸಿಕ್ಸ್‌ನಲ್ಲಿ ಭಾರತಕ್ಕೆ ಸೋಲಿಸಲು ಸಾಧ್ಯವಾದದ್ದು ಪಾಕಿಸ್ಥಾನಕ್ಕೆ ಮಾತ್ರ. ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‌ ವಿರುದ್ಧ ಎಡವಿ ಕೂಟವನ್ನು ಮುಗಿಸಿತು.

ಏಕಪಕ್ಷೀಯ ಫೈನಲ್‌
ಆಸ್ಟ್ರೇಲಿಯ-ಪಾಕಿಸ್ಥಾನ ನಡುವಿನ ಲಾರ್ಡ್ಸ್‌ ಫೈನಲ್‌ ಏಕಪಕ್ಷೀಯ ಪಂದ್ಯಕ್ಕೆ ಸಾಕ್ಷಿಯಾಯಿತು. ಇಲ್ಲಿ ಪ್ರಶಸ್ತಿ ಸಮರದ ಜೋಶ್‌ ಕಾಣಿಸಲೇ ಇಲ್ಲ. ಮೊದಲು ಬ್ಯಾಟಿಂಗ್‌ ನಡೆಸಿದ ಪಾಕಿಸ್ಥಾನ ಕಾಂಗರೂ ದಾಳಿಗೆ ತತ್ತರಿಸಿ 39 ಓವರ್‌ಗಳಲ್ಲಿ ಕೇವಲ 132 ರನ್ನಿಗೆ ಕುಸಿಯಿತು. ಇದು ವಿಶ್ವಕಪ್‌ ಫೈನಲ್‌ ಇತಿಹಾಸದ ಕನಿಷ್ಠ ಮೊತ್ತವಾಗಿದೆ.
ಶೇನ್‌ ವಾರ್ನ್, ಮೆಕ್‌ಗ್ರಾತ್‌ ಘಾತಕ ದಾಳಿ ಸಂಘಟಿಸಿ ಪಾಕಿಸ್ಥಾನವನ್ನು ಉರುಳಿಸಿದರು. ಆಸ್ಟ್ರೇಲಿಯಕ್ಕೆ ಇದನ್ನು ಟಿ20 ಫೈನಲ್‌ ರೀತಿಯಲ್ಲಿ ಚೇಸ್‌ ಮಾಡಿತು. ಕೇವಲ 20.1 ಓವರ್‌ಗಳಲ್ಲಿ 2 ವಿಕೆಟಿಗೆ 133 ರನ್‌ ಬಾರಿಸಿ ಕಪ್‌ ಎತ್ತಿತು.

1999 ವಿಶ್ವಕಪ್‌ ಫೈನಲ್‌
ಜೂ. 20, ಲಾರ್ಡ್ಸ್‌, ಲಂಡನ್‌

ಪಾಕಿಸ್ಥಾನ
ಸಯೀದ್‌ ಅನ್ವರ್‌ ಬಿ ಫ್ಲೆಮಿಂಗ್‌ 15
ವಜಹತುಲ್ಲ ವಸ್ತಿ ಸಿ ಎಂ. ವೋ ಬಿ ಮೆಕ್‌ಗ್ರಾತ್‌ 1
ಅಬ್ದುಲ್‌ ರಜಾಕ್‌ ಸಿ ಎಸ್‌. ವೋ ಬಿ ಮೂಡಿ 17
ಇಜಾಜ್‌ ಅಹ್ಮದ್‌ ಬಿ ವಾರ್ನ್ 22
ಇಂಝಮಾಮ್‌ ಉಲ್‌ ಹಕ್‌ ಸಿ ಗಿಲ್‌ಕ್ರಿಸ್ಟ್‌ ಬಿ ರೀಫೆಲ್‌ 15
ಮೊಯಿನ್‌ ಖಾನ್‌ ಸಿ ಗಿಲ್‌ಕ್ರಿಸ್ಟ್‌ ಬಿ ವಾರ್ನ್ 6
ಶಾಹಿದ್‌ ಅಫ್ರಿದಿ ಎಲ್‌ಬಿಡಬ್ಲ್ಯು ವಾರ್ನ್ 13
ಅಜರ್‌ ಮಹಮೂದ್‌ ಸಿ ಮತ್ತು ಬಿ ಮೂಡಿ 8
ವಾಸಿಮ್‌ ಅಕ್ರಮ್‌ ಸಿ ಎಸ್‌. ವೋ ಬಿ ವಾರ್ನ್ 8
ಸಕ್ಲೇನ್‌ ಮುಷ್ತಾಕ್‌ ಸಿ ಪಾಂಟಿಂಗ್‌ ಬಿ ಮೆಕ್‌ಗ್ರಾತ್‌ 0
ಶೋಯಿಬ್‌ ಅಖ್ತರ್‌ ಔಟಾಗದೆ 2
ಇತರ 25
ಒಟ್ಟು (39 ಓವರ್‌ಗಳಲ್ಲಿ ಆಲೌಟ್‌) 132
ವಿಕೆಟ್‌ ಪತನ: 1-21, 2-21, 3-68, 4-77, 5-91, 6-104, 7-113, 8-129, 9-129.
ಬೌಲಿಂಗ್‌:
ಗ್ಲೆನ್‌ ಮೆಕ್‌ಗ್ರಾತ್‌ 9-3-13-2
ಡೆಮೀನ್‌ ಫ್ಲೆಮಿಂಗ್‌ 6-0-30-1
ಪಾಲ್‌ ರೀಫೆಲ್‌ 10-1-29-1
ಟಾಮ್‌ ಮೂಡಿ 5-0-17-2
ಶೇನ್‌ ವಾರ್ನ್ 9-1-33-4
ಆಸ್ಟ್ರೇಲಿಯ
ಮಾರ್ಕ್‌ ವೋ ಔಟಾಗದೆ 37
ಆ್ಯಡಂ ಗಿಲ್‌ಕ್ರಿಸ್ಟ್‌ ಸಿ ಹಕ್‌ ಬಿ ಸಕ್ಲೇನ್‌ 54
ರಿಕಿ ಪಾಂಟಿಂಗ್‌ ಸಿ ಮೊಯಿನ್‌ ಬಿ ಅಕ್ರಮ್‌ 24
ಡ್ಯಾರನ್‌ ಲೇಹ್ಮನ್‌ ಔಟಾಗದೆ 13
ಇತರ 5
ಒಟ್ಟು (20.1 ಓವರ್‌ಗಳಲ್ಲಿ 2 ವಿಕೆಟಿಗೆ) 133
ವಿಕೆಟ್‌ ಪತನ: 1-75, 2-112.
ಬೌಲಿಂಗ್‌:
ವಾಸಿಮ್‌ ಅಕ್ರಮ್‌ 8-1-41-1
ಶೋಯಿಬ್‌ ಅಖ್ತರ್‌ 4-0-37-0
ಅಬ್ದುಲ್‌ ರಜಾಕ್‌ 2-0-13-0
ಅಜರ್‌ ಮಹಮೂದ್‌ 2-0-20-0
ಸಕ್ಲೇನ್‌ ಮುಷ್ತಾಕ್‌ 4.1-0-21-1
ಪಂದ್ಯಶ್ರೇಷ್ಠ: ಶೇನ್‌ ವಾರ್ನ್

Advertisement

Udayavani is now on Telegram. Click here to join our channel and stay updated with the latest news.

Next