ಮೆಲ್ಬರ್ನ್: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗೆ ಆಸ್ಟ್ರೇಲಿಯ ತಂಡ ಅಂತಿಮಗೊಂಡಿದೆ. ಆ್ಯಶಸ್ ಸರಣಿಗೆಂದು ಆರಿಸಲಾಗಿದ್ದ 17 ಸದಸ್ಯರ ತಂಡವನ್ನೇ ಕಿರಿದುಗೊಳಿಸಲಾಗಿದೆ. ಈ ತಂಡದಲ್ಲಿದ್ದ ಮಿಚೆಲ್ ಮಾರ್ಷ್ ಮತ್ತು ಮ್ಯಾಟ್ ರೆನ್‌ಶಾ ಅವರನ್ನು ಕೈಬಿಡಲಾಗಿದ್ದು, ಉಳಿದ 15 ಸದಸ್ಯರು “ಟೆಸ್ಟ್ ಫೈನಲ್’ ತಂಡದ ಭಾಗವಾಗಿದ್ದಾರೆ.
ಅಷ್ಟೇನೂ ಫಾರ್ಮ್ನಲ್ಲಿಲ್ಲದ ಎಡಗೈ ಆರಂಭಕಾರ ಡೇವಿಡ್ ವಾರ್ನರ್ ಸ್ಥಾನ ಉಳಿಸಿ ಕೊಂಡಿದ್ದಾರೆ. ಇಂಗ್ಲೆಂಡ್‌ನಲ್ಲಿ ವಾರ್ನರ್ ದಾಖಲೆ ಉತ್ತಮವಾಗಿರುವುದೇ ಇದಕ್ಕೆ ಕಾರಣ. ಅಲ್ಲದೇ ಕೋಚ್ ಆ್ಯಂಡ್ರೂ ಮೆಕ್‌ಡೊನಾಲ್ಡ್ ಅವರ ಬೆಂಬಲವೂ ವಾರ್ನರ್ ನೆರವಿಗೆ ಬಂತು.
ವೇಗಿ ಜೋಶ್ ಹೇಝಲ್‌ವುಡ್ ಸಂಪೂರ್ಣ ಫಿಟ್ ಆಗಿ ಮರಳಿದ್ದು, ಆಸೀಸ್ ಪಾಲಿಗೆ ಲಾಭವಾಗಿ ಪರಿಣಮಿಸುವುದರಲ್ಲಿ ಅನುಮಾನವಿಲ್ಲ. ದಕ್ಷಿಣ ಆಫ್ರಿಕಾ ಸರಣಿಯ ವೇಳೆ ಗಾಯಾಳಾಗಿದ್ದ ಹೇಝಲ್‌ವುಡ್, ಅನಂತರ ಚೇತರಿಸಿಕೊಂಡು ಆರ್‌ಸಿಬಿ ಪರ ಕೆಲವು ಪಂದ್ಯವಾಡಿದ್ದರು. ಆದರೆ ಸಂಪೂರ್ಣ ಫಿಟ್‌ನೆಸ್ ಕೊರತೆಯನ್ನು ಮನಗಂಡು ನಡುವಲ್ಲೇ ತವರಿಗೆ ವಾಪಸಾಗಿದ್ದರು.
ಆಸ್ಟ್ರೇಲಿಯ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರಾನ್ ಗ್ರೀನ್, ಮಾರ್ಕಸ್ ಹ್ಯಾರಿಸ್, ಜೋಶ್ ಹೇಝಲ್‌ವುಡ್, ಟ್ರ್ಯಾವಿಸ್ ಹೆಡ್, ಜೋಶ್ ಇಂಗ್ಲಿಸ್, ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ನಥನ್ ಲಿಯಾನ್, ಟಾಡ್ ಮರ್ಫಿ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಡೇವಿಡ್ ವಾರ್ನರ್.