ನವದೆಹಲಿ: ಭಾರತ-ಆಸ್ಟ್ರೇಲಿಯ ನಡುವೆ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ಭಾರತ ಅಭೂತ ಗೆಲುವಿನೊಂದಿಗೆ ಮುಗಿಸಿದೆ. ಹಲವು ದಾಖಲೆಗಳಿಗೆ ವೇದಿಕೆಯಾದ ಈ ಪಂದ್ಯದಲ್ಲಿ ಚೇತೇಶ್ವರ ಪೂಜಾರ ಅವರೂ ನೂತನ ದಾಖಲೆ ಬರೆದಿದ್ದಾರೆ.
ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಭಾರತ-ಆಸ್ಟ್ರೇಲಿಯ ನಡುವಿನ ಟೆಸ್ಟ್ ಪಂದ್ಯ ಚೇತೇಶ್ರ ಪೂಜಾರ ಅವರ 100ನೇ ಟೆಸ್ಟ್ ಪಂದ್ಯ ಅನ್ನುವುದು ವಿಶೇಷ. ಈ ದಾಖಲೆ ಬರೆದ 13ನೇ ಭಾರತೀಯ ಎಂಬ ಕೀರ್ತಿಗೂ ಪೂಜಾರ ಭಾಜನರಾಗಿದ್ಧಾರೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತ ಪಂದ್ಯವನ್ನು ತನ್ನ ಕೈವಶ ಮಾಡಿಕೊಂಡ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ನಡೆದ ಅಪರೂಪದ ಘಟನೆಗೆ ಕ್ರೀಡಾ ಪ್ರಿಯರು ತಲೆಬಾಗಿದ್ದಾರೆ. 100ನೇ ಟೆಸ್ಟ್ ಪಂದ್ಯ ಆಡಿದ ಚೇತೇಶ್ವರ ಪೂಜಾರ ಅವರಿಗೆ ಕಾಂಗಾರೂ ಪಡೆ ವಿಶೇಷ ಉಡುಗೊರೆಯೊಂದನ್ನು ನೀಡಿದೆ.
ಪಂದ್ಯದ ಬಳಿಕ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ಅವರು ಆಸ್ಟ್ರೇಲಿಯಾದ ಎಲ್ಲಾ ಆಟಗಾರರ ಸಹಿ ಹೊಂದಿರುವ ಆಸ್ಟ್ರೇಲಿಯಾದ ಜರ್ಸಿಯೊಂದನ್ನು ಚೇತೇಶ್ವರ ಪೂಜಾರ ಅವರಿಗೆ ನೀಡಿದ್ದಾರೆ. ಇದು ಕ್ರೀಡಾ ವಲಯದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಗಿದ್ದು, ಆಸ್ಟ್ರೇಲಿಯಾ ಕ್ರಿಕೆಟಿಗರ ಕ್ರೀಡಾ ಸ್ಪೂರ್ತಿಗೆ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ:ತೆಂಡುಲ್ಕರ್ ದಾಖಲೆ ಪುಡಿಗಟ್ಟಿದ ವಿರಾಟ್ ಕೊಹ್ಲಿ: ನೂತನ ಮೈಲಿಗಲ್ಲು