Advertisement

ಒಸಾಕಾಗೆ ಒಲಿಯಿತು ಆಸ್ಟ್ರೇಲಿಯನ್‌ ಓಪನ್‌

12:30 AM Jan 27, 2019 | |

ಮೆಲ್ಬರ್ನ್: ಯುಎಸ್‌ ಓಪನ್‌ ಪ್ರಶಸ್ತಿ ಬಳಿಕ ಮತ್ತೂಂದು ಪ್ರತಿಷ್ಠಿತ “ಆಸ್ಟ್ರೇಲಿಯನ್‌ ಓಪನ್‌’ ಪ್ರಶಸ್ತಿಯೂ ಜಪಾನಿನ ಯುವ ತಾರೆ ನವೊಮಿ ಒಸಾಕಾ ಪಾಲಾಗಿದೆ.

Advertisement

ಶನಿವಾರ ನಡೆದ ವನಿತಾ ಸಿಂಗಲ್ಸ್‌ ವಿಭಾಗದ ರೋಚಕ ಫೈನಲ್‌ನಲ್ಲಿ ಒಸಾಕಾ ಜೆಕ್‌ ಗಣರಾಜ್ಯದ ಪೆಟ್ರಾ ಕ್ವಿಟೋವಾ ವಿರುದ್ಧ 2 ಗಂಟೆ 27 ನಿಮಿಷಗಳ ಹೋರಾಟದಲ್ಲಿ 7-6 (7-2), 5-7, 6-4 ಸೆಟ್‌ಗಳಿಂದ ಜಯಿಸಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಇದರೊಂದಿಗೆ ಮುಂಬರುವ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಖಚಿತಪಡಿಸಿಕೊಂಡಿದ್ದಾರೆ.ಒಸಾಕ ಸತತ ಗ್ರ್ಯಾನ್ಸ್‌ಸ್ಲಾಮ್‌ ಗೆಲ್ಲುವುದರೊಂದಿಗೆ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಎತ್ತಿದ ಮೊದಲ ಏಶ್ಯದ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ಈ ಸಾಧನೆ ಏಶ್ಯ ಖಂಡಕ್ಕೆ ಹೆಮ್ಮೆಯ ಗರಿಯಾಗಿದೆ.

ಒಸಾಕಾ-ಕ್ವಿಟೋವಾ ಪೈಪೋಟಿ
ಇಬ್ಬರಿಗೂ ಚೊಚ್ಚಲ ಆಸ್ಟ್ರೇಲಿಯನ್‌ ಓಪನ್‌ ಫೈನಲ್‌ ಪಂದ್ಯವಾಗಿದ್ದರಿಂದ ಇಬ್ಬರಲ್ಲೂ ಪ್ರಶಸ್ತಿ ಗೆಲ್ಲುವ ಹಂಬಲ ಉತ್ತುಂಗಕ್ಕೇರಿತ್ತು. ಮೊದಲ ಸೆಟ್‌ ಆರಂಭದಲ್ಲೇ ಇವರಿಬ್ಬರ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು. ಪ್ರಾರಂಭದಿಂದಲೇ ಮುನ್ನಡೆಯಲ್ಲಿದ್ದ ಒಸಾಕಾ ಮೊದಲ ಸೆಟ್‌ನಲ್ಲಿ ಗೆಲ್ಲುವ ಹಂತಕ್ಕೆ ತಲುಪಿದ್ದರೂ ಕ್ವಿಟೋವಾ ಅವರ ಸೆಟ್‌ ಅನ್ನು ಟೈಬ್ರೇಕರ್‌ ತಲುಪಿಸುವಲ್ಲಿ ಯಶಸ್ವಿಯಾದರು. ಆದರೆ ಟೈಬ್ರೇಕರ್‌ನಲ್ಲೂ ಪ್ರಾಬಲ್ಯ ಮೆರೆದ ಒಸಾಕಾ ಮೊದಲ ಸೆಟ್‌ ತಮ್ಮದಾಗಿಸಿಕೊಂಡರು. ಕ್ವಿಟೋವಾ 2ನೇ ಸೆಟ್‌ನಲ್ಲಿ ಅತ್ಯುತ್ತಮ ಹೊಡೆತಗಳಿಂದ ಒಸಾಕಾಗೆ ಪ್ರತಿರೋಧ ಒಡ್ಡಲಾರಂಭಿಸಿದರು. ಕ್ವಿಟೋವಾ ಆಟಕ್ಕೆ ಒಸಾಕ ಸರಿಸಮಾನವಾಗಿ ಆಡಿದರೂ ಅಂತಿಮದಲ್ಲಿ 5-7 ಅಂತರದಿಂದ ಸೋತರು. ನೇರ ಸೆಟ್‌ಗಳ ಗೆಲುವನ್ನು ತಪ್ಪಿಸಿಕೊಂಡ ಒಸಾಕಾ ನಿರ್ಣಾಯಕ ಸೆಟ್‌ನಲ್ಲಿ ಎಚ್ಚರಿಕೆ ಹೆಜ್ಜೆಗಳನ್ನು ಇಡಲಾರಂಭಿಸಿದರು. ಒಬ್ಬರ ಹಿಂದೆ ಒಬ್ಬರಂತೆ ಅಂಕಗಳನ್ನು ಗಳಿಸುತ್ತಾ ಹೋದ ಆಟಗಾರ್ತಿಯರು ವೀಕ್ಷಕರಲ್ಲಿ ಕುತೂಹಲವನ್ನು ಇಮ್ಮಡಿಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಕೊನೆಯ ಹಂತದಲ್ಲಿ ಒಸಾಕಾ 6-4 ಅಂತರದಿಂದ ಗೆ‌ದ್ದು ಪ್ರಶಸ್ತಿ ತಮ್ಮದಾಗಿಸಿಕೊಂಡರು.

ಒಸಾಕಾ ಈಗ ನಂ. ವನ್‌
ಕಳೆದ ವರ್ಷ ಯುಎಸ್‌ ಓಪನ್‌, ಈಗ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಜಯಿಸಿದ ಒಸಾಕಾ ಎಟಿಪಿ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ. ಒಂದು ವರ್ಷದ ಹಿಂದೆ 72ನೇ ಸ್ಥಾನದಲ್ಲಿದ್ದ ಒಸಾಕಾ ಯುಎಸ್‌ ಚಾಂಪಿಯನ್‌ ಆಗಿ 4ನೇ ಸ್ಥಾನಕ್ಕೆ ಜಿಗಿದಿದ್ದರು. ಈಗ ನಂ. ವನ್‌ ಪಟ್ಟ. 21 ವರ್ಷದ ಒಸಾಕಾ ದಶಕಗಳ ಬಳಿಕ ಅಗ್ರಸ್ಥಾನ ಸಂಪಾದಿಸಿದ ಏಶ್ಯದ ವನಿತಾ ಆಟಗಾರ್ತಿ ಎಂದೆನಿಸಿಕೊಳ್ಳಲಿದ್ದಾರೆ. 2010ರಲ್ಲಿ ಕ್ಯಾರೋಲಿನಾ ವಾಜ್ನಿಯಾಕಿ ನಂ. ವನ್‌ ಸ್ಥಾನ ಸಂಪಾದಿಸಿದಾಗ ಅವರಿಗೆ 20 ವರ್ಷ.

“ಪ್ರಶಸ್ತಿ ಹಿಡಿಯುವವರೆಗೂ ನಾನು ಆಶ್ವರ್ಯಕ್ಕೊಳಗಾಗಿದ್ದೆ. ಕ್ವಿಟೋವಾ ಉತ್ತಮ ಆಟಗಾರ್ತಿಯರಲ್ಲಿ ಒಬ್ಬರು. ಅವರ ವಿರುದ್ಧ ಗ್ರ್ಯಾನ್‌ಸ್ಲಾಮ್‌ ಫೈನಲ್‌ನಲ್ಲಿ ಗೆದ್ದಿರುವುದು ನನಗೆ ಹೆಮ್ಮೆ ಅನಿಸುತ್ತಿದೆ.’
– ನವೊಮಿ ಒಸಾಕಾ

Advertisement

“ನನ್ನ ಸಾಮರ್ಥ್ಯವನ್ನೆಲ್ಲ ಇಲ್ಲಿ ಪ್ರದರ್ಶಿಸಿದ್ದೇನೆ. ನಾನು ಮತ್ತೂಮ್ಮೆ ಗ್ರ್ಯಾನ್‌ಸ್ಲಾಮ್‌ ಫೈನಲ್‌ನಲ್ಲಿ ಆಡುತ್ತಿದ್ದೇನೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಇದೊಂದು ಅದ್ಭುತ ಸಾಧನೆ. ಒಸಾಕಾ ಈಗ ಟೆನಿಸ್‌ನ ನವತಾರೆ.’
-ಪೆಟ್ರಾ ಕ್ವಿಟೋವಾ

Advertisement

Udayavani is now on Telegram. Click here to join our channel and stay updated with the latest news.

Next