Advertisement

ಆಸ್ಟ್ರೇಲಿಯನ್‌ ಓಪನ್‌: ಕೆನಿನ್‌ ಮೆಲ್ಬರ್ನ್ ಕ್ವೀನ್‌

10:05 AM Feb 02, 2020 | Team Udayavani |

ಮೆಲ್ಬರ್ನ್: ಮಾಸ್ಕೊ ಮೂಲದ ಅಮೆರಿಕನ್‌ ಆಟಗಾರ್ತಿ ಸೋಫಿಯಾ ಕೆನಿನ್‌ “ಆಸ್ಟ್ರೇಲಿಯನ್‌ ಓಪನ್‌’ ಟ್ರೋಫಿಗೆ ಮುತ್ತಿಕ್ಕಿದ್ದಾರೆ. ಇದರೊಂದಿಗೆ ತಮ್ಮ ಟೆನಿಸ್‌ ಬಾಳ್ವೆಯ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನು ಎತ್ತಿಹಿಡಿದು ಸಂಭ್ರಮಿಸಿದ್ದಾರೆ. ಶನಿವಾರ “ಮೆಲ್ಬರ್ನ್ ಪಾರ್ಕ್‌’ನಲ್ಲಿ ನಡೆದ 3 ಸೆಟ್‌ಗಳ ಫೈನಲ್‌ ಹೋರಾಟದಲ್ಲಿ ಅವರು ಅವಳಿ ಗ್ರ್ಯಾನ್‌ಸ್ಲಾಮ್‌ ವಿಜೇತೆ, ಸ್ಪೇನಿನ ಗಾರ್ಬಿನ್‌ ಮುಗುರುಜಾ ವಿರುದ್ಧ 4-6, 6-2, 6-2 ಅಂತರದ ಮೇಲುಗೈ ಸಾಧಿಸಿದರು.

Advertisement

21ರ ಹರೆಯದ, 14ನೇ ಶ್ರೇಯಾಂಕದ ಸೋಫಿಯಾ ಕೆನಿನ್‌ ಕಳೆದ 12 ವರ್ಷಗಳಲ್ಲಿ ಆಸ್ಟ್ರೇಲಿಯನ್‌ ಓಪನ್‌ ಚಾಂಪಿಯನ್‌ ಎನಿಸಿಕೊಂಡ ಅತೀ ಕಿರಿಯ ಆಟಗಾರ್ತಿ. 2008ರಲ್ಲಿ ಶರಪೋವಾ 20ರ ಹರೆಯದಲ್ಲಿ ಚಾಂಪಿಯನ್‌ ಆಗಿದ್ದರು.

ಸೆಮಿಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ್ತಿ, ತವರಿನ ಆ್ಯಶ್ಲಿ ಬಾರ್ಟಿ ಅವರನ್ನು ಮಣಿಸಿದ್ದರು. ಇದಕ್ಕೂ ಮೊದಲು ತಮ್ಮದೇ ದೇಶದ ಕೋಕೋ ಗಾಫ್ ಅವರಿಗೆ ಆಘಾತವಿಕ್ಕಿದ್ದರು. ಇಲ್ಲಿ ಯಾವುದೇ ಶ್ರೇಯಾಂಕವಿಲ್ಲದೆ ಆಡಲಿಳಿದ ಮುಗುರುಜಾ ವಿರುದ್ಧ ಕೆನಿನ್‌ ಆಕ್ರಮಣಕಾರಿ ಆಟವನ್ನೇ ಆಡಿದರು. 2 ಗಂಟೆ, 3 ನಿಮಿಷಗಳ ತನಕ ಇವರ ಹೋರಾಟ ಸಾಗಿತು.

“ನನ್ನ ಕನಸು ಕೊನೆಗೂ ನನಸಾಗಿದೆ. ಈ ಸಂಭ್ರಮ ವನ್ನು ಬಣ್ಣಿಸಲು ನನ್ನಿಂದ ಸಾಧ್ಯವಿಲ್ಲ’ ಎಂಬುದು ಕೆನಿನ್‌ ಪ್ರತಿಕ್ರಿಯೆ. ಕೋಚ್‌ ಕೂಡ ಆಗಿರುವ ತಂದೆ ಅಲೆಕ್ಸಾಂಡರ್‌ ಈ ಗೆಲುವಿಗೆ ಸಾಕ್ಷಿಯಾಗಿದ್ದರು. ನೂತನ ರ್‍ಯಾಂಕಿಂಗ್‌ನಲ್ಲಿ ಕೆನಿನ್‌ 7ನೇ ಸ್ಥಾನಕ್ಕೆ ನೆಗೆಯಲಿದ್ದಾರೆ.

ಸೋಫಿಯಾ ಕೆನಿನ್‌ ಪ್ರೊಫೈಲ್‌
-1998ರ ನ. 14ರಂದು ಮಾಸ್ಕೋದಲ್ಲಿ ಜನನ. 6 ವರ್ಷವಾಗಿದ್ದಾಗ ಹೆತ್ತವರೊಂದಿಗೆ ಅಮೆರಿಕಕ್ಕೆ ಪಯಣ, ಅಲ್ಲಿನದೇ ಪೌರತ್ವ.
– 12ರಿಂದ 18ರ ವಯೋಮಿತಿಯ ಎಲ್ಲ ಅಮೆರಿಕನ್‌ ಟೆನಿಸ್‌ ಸ್ಪರ್ಧೆಗಳಲ್ಲಿ ಭಾಗಿ. ಎಲ್ಲದರಲ್ಲೂ ನಂ.1 ಗೌರವ.
– 14ರ ಹರೆಯದಲ್ಲಿ ಐಟಿಎಫ್ ಸರ್ಕ್ನೂಟ್‌ನಲ್ಲಿ ಮೊದಲ ಗೆಲುವು.
– 2015ರಲ್ಲಿ ಮೊದಲ ಗ್ರ್ಯಾನ್‌ಸ್ಲಾಮ್‌ ಸ್ಪರ್ಧೆ. ವೈಲ್ಡ್‌
ಕಾರ್ಡ್‌ ಮೂಲಕ ಯುಎಸ್‌ ಓಪನ್‌ ಪ್ರವೇಶ. 2016ರಲ್ಲೂ ಯುಎಸ್‌ ಓಪನ್‌ನಲ್ಲಿ ಸ್ಪರ್ಧೆ. ಎರಡೂ ಸಲ ಮೊದಲ ಸುತ್ತಿನಲ್ಲೇ ಸೋಲು.
– 2018ರಲ್ಲಿ ಮೊದಲ ಸಲ ಟಾಪ್‌-50 ರ್‍ಯಾಂಕಿಂಗ್‌ ಗೌರವ.
– 2019ರಲ್ಲಿ ಮೊದಲ ಡಬ್ಲ್ಯುಟಿಎ ಪ್ರಶಸ್ತಿ. ಹೋಬರ್ಟ್‌ ಇಂಟರ್‌ನ್ಯಾಶನಲ್‌ ಕೂಟದಲ್ಲಿ ಚಾಂಪಿಯನ್‌.
– 2019ರ ಆಸ್ಟ್ರೇಲಿಯನ್‌ ಓಪನ್‌ 3ನೇ ಸುತ್ತಿನಲ್ಲಿ ನಂ.1 ಸಿಮೋನಾ ಹಾಲೆಪ್‌ ವಿರುದ್ಧ ಭಾರೀ ಹೋರಾಟ. ಕೊನೆ ಯಲ್ಲಿ 3-6, 7-6 (7-5), 4-6 ಅಂತರದ ಸೋಲು.
– 2019ರ ವಿವಿಧ ಕೂಟಗಳಲ್ಲಿ ನವೋಮಿ ಒಸಾಕಾ, ಆ್ಯಶ್ಲಿ ಬಾರ್ಟಿ ವಿರುದ್ಧ ಗೆಲುವು. ವರ್ಷಾಂತ್ಯದಲ್ಲಿ 12ನೇ ರ್‍ಯಾಂಕಿಂಗ್‌ ಗೌರವ. “ಡಬ್ಲ್ಯುಟಿಎ ಮೋಸ್ಟ್‌ ಇಂಪ್ರೂವ್‌x ಪ್ಲೇಯರ್‌ ಆಫ್ ದಿ ಇಯರ್‌’ ಪ್ರಶಸ್ತಿ.

Advertisement
Advertisement

Udayavani is now on Telegram. Click here to join our channel and stay updated with the latest news.

Next