Advertisement

Australian Open ಗ್ರ್ಯಾನ್‌ ಸ್ಲಾಮ್‌ ಟೆನಿಸ್‌ ಡ್ರಾ

11:58 PM Jan 09, 2025 | Team Udayavani |

ಮೆಲ್ಬರ್ನ್: ಹಾಲಿ ಚಾಂಪಿಯನ್‌ ಜಾನ್ನಿಕ್‌ ಸಿನ್ನರ್‌ ಮತ್ತು 10 ಬಾರಿಯ ಆಸ್ಟ್ರೇಲಿಯನ್‌ ಓಪನ್‌ ವಿಜೇತ ನೋವಾಕ್‌ ಜೊಕೋವಿಕ್‌ ಅವರು ವರ್ಷಾರಂಭದ ಮೊದಲ ಗ್ರ್ಯಾನ್‌ ಸ್ಲಾಮ್‌ನ ಡ್ರಾದಲ್ಲಿ ವಿರುದ್ಧ ಬದಿಗಳಲ್ಲಿ ಸ್ಪರ್ಧೆಗೆ ಇಳಿಯಲಿದ್ದಾರೆ. ಹೀಗಾಗಿ ಅವರಿಬ್ಬರು ಕಳೆದ ವರ್ಷದಂತೆ ಸೆಮಿಫೈನಲ್‌ನಲ್ಲಿ ಮುಖಾಮುಖೀಯಾಗುವ ಸಾಧ್ಯತೆ ಇಲ್ಲವಾಗಿದೆ. ಆಸ್ಟ್ರೇಲಿಯನ್‌ ಓಪನ್‌ ಮೆಲ್ಬರ್ನ್ನಲ್ಲಿ ರವಿವಾರ ಬೆಳಗ್ಗೆ ಆರಂಭವಾಗಲಿದ್ದು 15 ದಿನಗಳ ಕಾಲ ಸಾಗಲಿದೆ.

Advertisement

ಕಳೆದ ವರ್ಷದ ಸೆಮಿಫೈನಲ್‌ನಲ್ಲಿ ಸಿನ್ನರ್‌ ಅವರು ಜೊಕೋವಿಕ್‌ ಅವರನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೇರಿದ್ದರು. ಅಲ್ಲಿ ಡ್ಯಾನಿಲ್‌ ಮೆಡ್ವೆಡೇವ್‌ ಅವರನ್ನು ಐದು ಸೆಟ್‌ಗಳ ಹೋರಾಟದಲ್ಲಿ (3-6, 3-6, 6-4, 6-4, 6-3) ಕೆಡಹಿ ಗ್ರ್ಯಾನ್‌ ಸ್ಲಾಮ್‌ನಲ್ಲಿ ಚೊಚ್ಚಲ ಪ್ರಶಸ್ತಿ ಗೆದ್ದಿದ್ದರು. ಅಗ್ರ ರ್‍ಯಾಂಕಿನ ಸಿನ್ನರ್‌ ಮೊದಲ ಸುತ್ತಿನಲ್ಲಿ ನಿಕೋಲಾಸ್‌ ಜೆರ್ರಿ ಅವರನ್ನು ಎದುರಿಸಲಿದ್ದಾರೆ. ಆಬಳಿಕ ಅವರು ಟಯ್ಲರ್‌ ಫ್ರಿಟ್ಜ್, ಬೆನ್‌ ಶೆಲ್ಟನ್‌ ಹಾಗೂ ಕ್ವಾರ್ಟರ್‌ಫೈನಲ್‌ನಲ್ಲಿ ಮೆಡ್ವೆಡೇವ್‌ ಅವರ ಸವಾಲನ್ನು ಎದುರಿಸುವ ಸಾಧ್ಯತೆಯಿದೆ.

ಇಲ್ಲಿ 11ನೇ ಬಾರಿ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿರುವ ಜೊಕೋವಿಕ್‌ ಮತ್ತು ಮೂರನೇ ಶ್ರೇಯಾಂಕದ ಕಾಲೋಸ್‌ ಅಲ್ಕರಾಜ್‌ ಕ್ವಾರ್ಟರ್‌ಫೈನಲ್‌ನಲ್ಲಿ ಪರಸ್ಪರ ಮುಖಾಮುಖೀ ಆಗುವ ಸಾಧ್ಯತೆಯಿದ್ದು ಸೆಮಿಫೈನಲ್‌ನಲ್ಲಿ ಎರಡನೇ ಶ್ರೇಯಾಂಕದ ಅಲೆಕ್ಸಾಂಡರ್‌ ಜ್ವೆರೇವ್‌ ಎದುರಾಗಬಹುದು.
ಕಳೆದ ವರ್ಷ ಫೈನಲ್‌ನಲ್ಲಿ ಝೆಂಗ್‌ ಕ್ವಿನ್‌ವೆನ್‌ ಅವರನ್ನು ಸೋಲಿಸುವ ಮೂಲಕ ಸತತ ಎರಡನೇ ಪ್ರಶಸ್ತಿ ಗೆದ್ದ ಸಾಧನೆ ಮಾಡಿರುವ ಸಬಲೆಂಕಾ ಸತತ ಮೂರನೇ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. ಈ ಹಿಂದೆ ಹಿಂಗಿಸ್‌ 1997ರಿಂದ 1999ರ ವರೆಗೆ ಸತತ ಮೂರು ಬಾರಿ ಪ್ರಶಸ್ತಿ ಜಯಿಸಿದ್ದರು.

ಸಬಲೆಂಕಾಗೆ ಕಠಿನ ಎದುರಾಳಿ
ಸಬಲೆಂಕಾ ಮೊದಲ ಸುತ್ತಿನಲ್ಲಿ ಕಠಿನ ಎದುರಾಳಿ 2017ರ ಯುಎಸ್‌ ಚಾಂಪಿಯನ್‌ ಸ್ಲೋನೆ ಸ್ಟೆಫ‌ನ್ಸ್‌ ಅವರನ್ನು ಎದುರಿಸಲಿದ್ದಾರೆ. ಇಲ್ಲಿ ಗೆದ್ದರೆ ಅವರು ಮುಂದಿನ ಸುತ್ತುಗಳಲ್ಲಿ 17ರ ಹರೆಯದ ಮಿರಾ ಆ್ಯಂಡ್ರೀವಾ, ಝೆಂಗ್‌ ಅವರ ಸವಾಲಿಗೆ ಉತ್ತರಿಸಬೇಕಾಗುತ್ತದೆ. ಮೂರನೇ ಶ್ರೇಯಾಂಕದ ಕೊಕೊ ಗಾಫ್ ಸೆಮಿಫೈನಲಿನಲ್ಲಿ ಸಬ‌ಲೆಂಕಾ ಅವರನ್ನು ಎದುರಿಸುವ ಸಾಧ್ಯತೆಯಿದೆ.

ನಾಗಲ್‌ಗೆ ಮಾಚ್ಯಾಕ್‌ ಎದುರಾಳಿ
ಭಾರತದ ಉನ್ನತ ರ್‍ಯಾಂಕಿನ ಆಟಗಾರ ಸುಮಿತ್‌ ನಾಗಲ್‌ ಅವರು ಆಸ್ಟ್ರೇಲಿಯನ್‌ ಓಪನ್‌ನ ಮೊದಲ ಸುತ್ತಿನಲ್ಲಿ ಜೆಕ್‌ ಗಣರಾಜ್ಯದ ಥಾಮಸ್‌ ಮಾಚ್ಯಾಕ್‌ ಅವರ ಸವಾಲನ್ನು ಎದುರಿಸಲಿದ್ದಾರೆ. ವಿಶ್ವದ 104 ಉನ್ನತ ರ್‍ಯಾಂಕಿನ ಆಟಗಾರರಲ್ಲಿ ಒಬ್ಬರಾದ ಕಾರಣ 27ರ ಹರೆಯದ ನಾಗಲ್‌ ಇಲ್ಲಿ ಮುಖ್ಯ ಡ್ರಾದಲ್ಲಿ ಆಡುವ ಅವಕಾಶ ಪಡೆದುಕೊಂಡರು.

Advertisement

ಲೆಬನಾನಿನ ಮೊದಲ ಆಟಗಾರ
ಅರ್ಹತಾ ಸುತ್ತಿನಲ್ಲಿ ಆಡಿದ 3 ಪಂದ್ಯಗಳಲ್ಲಿ ಗೆಲುವು ಸಾಧಿಸುವ ಮೂಲಕ ಲೆಬನಾನಿನ ಹ್ಯಾಡಿ ಹಬಿಬ್‌ ಅವರು ಪುರುಷರ ಮುಖ್ಯ ಡ್ರಾದಲ್ಲಿ ಆಡುವ ಅರ್ಹತೆ ಗಳಿಸಿದರು. ಅವರು ಆಸ್ಟ್ರೇಲಿಯನ್‌ ಒಪನ್‌ನಲ್ಲಿ ಆಡುತ್ತಿರುವ ಲೆಬನಾನಿನ ಮೊದಲ ಆಟಗಾರರೆಂಬ ಗೌರವ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next