ಮೆಲ್ಬರ್ನ್: ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್ ಸ್ಲಾಮ್ ಕೂಟದ ಡ್ರಾ ನಡೆದಿದ್ದು ಅಗ್ರ ರ್‍ಯಾಂಕಿನ ಇಗಾ ಸ್ವಿಯಾಟೆಕ್ ಅವರಿಗೆ ಆರಂಭದಲ್ಲಿಯೇ ಕಠಿನ ಸ್ಪರ್ಧಿಗಳು ಎದುರಾಗಿದ್ದಾರೆ. ಅವರು ಮೊದಲ ಸುತ್ತಿನಲ್ಲಿ 2020ರ ಚಾಂಪಿಯನ್ ಸೋಫಿಯಾ ಕೆನಿನ್ ಅವರ ಸವಾಲನ್ನು ಎದುರಿಸಲಿದ್ದಾರೆ. ಈ ಹೋರಾಟದಲ್ಲಿ ಗೆದ್ದರೆ ಅವರು ದ್ವಿತೀಯ ಸುತ್ತಿನಲ್ಲಿ 2016ರ ವಿಜೇತೆ ಆ್ಯಂಜೆಲಿಕ್ ಕೆರ್ಬರ್ ಅಥವಾ ಡನೀಲೆ ಕಾಲಿನ್ಸ್ ಅವರನ್ನು ಎದುರಿಸಬೇಕಾಗುತ್ತದೆ.
ದಾಖಲೆ ಮುಂದುವರಿಯುವ 11ನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆಲ್ಲುಲ ಗುರಿ ಇಟ್ಟುಕೊಂಡಿರುವ ಹಾಲಿ ಚಾಂಪಿಯನ್ ನೋವಾಕ್ ಜೋಕೋವಿಕ್ ಅವರು ಮೂರನೇ ಸುತ್ತಿನಲ್ಲಿ ಆ್ಯಂಡಿ ಮರ್ರೆ ಮತ್ತು ಕ್ವಾರ್ಟರ್‌ಫೈನಲ್‌ನಲ್ಲಿ ಕಳೆದ ವರ್ಷದ ರನ್ನರ್ ಅಪ್ ಸ್ಟೆಫನೋಸ್ ಟಿಸಿಪಾಸ್ ಅವರನ್ನು ಎದುರಿಸುವ ಸಾಧ್ಯತೆಯಿದೆ.
ಗುರುವಾರ ಆಸ್ಟ್ರೇಲಿಯನ್ ಓಪನ್ ಟೆನಿಸ್ ಕೂಟದ ಸಿಂಗಲ್ಸ್ ಸ್ಪರ್ಧೆಯ ಡ್ರಾ ನಡೆದಿದೆ. ಮಾಜಿ ಚಾಂಪಿಯನ್‌ಗಳಾದ ನವೋಮಿ ಒಸಾಕಾ, ಕೆರ್ಬರ್ ಮತ್ತು ಕ್ಯಾರೋಲಿನ್ ವೋಜ್ನಿಯಾಕಿ ಅವರು ದೀರ್ಘ ವಿಶ್ರಾಂತಿಯ ಬಳಿಕ ಸ್ಪರ್ಧೆಗೆ ಮರಳಿದ ಕಾರಣ ಮೊದಲ ಸುತ್ತಿನಲ್ಲಿ ಕೆಲವು ತೀವ್ರ ಹೋರಾಟದ ಸ್ಪರ್ಧೆಗಳು ನಡೆಯುವ ಸಾಧ್ಯತೆಯಿದೆ.
ಎರಡು ಬಾರಿ ಆಸ್ಟ್ರೇಲಿಯನ್ ಮತ್ತು ಯುಎಸ್ ಓಪನ್ ಪ್ರಶಸ್ತಿ ಗೆದ್ದಿರುವ ಒಸಾಕಾ ಮೊದಲ ಸುತ್ತಿನಲ್ಲಿ ಕ್ಯಾರೋಲಿನ್ ಗಾರ್ಸಿಯಾ ಅವರ ಸವಾಲನ್ನು ಎದುರಿಸಲಿದ್ದರೆ ಮೂರು ಬಾರಿಯ ಗ್ರ್ಯಾನ್ ಸ್ಲಾಮ್ ವಿಜೇತೆ ಕೆರ್ಬರ್ ಅವರು ಕಾಲಿನ್ಸ್ ಅವರನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದ್ದಾರೆ.
ವೋಜ್ನಿ ಯಾಕಿ ಅವರು ಮಗ್ಡಾ ಲಿನೆಟ್ ಅವರನ್ನು ಮೊದಲ ಸುತ್ತಿ ನಲ್ಲಿ ಎದುರಿಸಲಿದ್ದಾರೆ. ಹಾಲಿ ಚಾಂಪಿ ಯನ್ ಅರ್ಯಾನಾ ಸಬಲೆಂಕಾ ಅವರು ಅರ್ಹತಾ ಆಟಗಾರ್ತಿ ಯನ್ನು ಎದುರಿಸುವ ಮೂಲಕ ತನ್ನ ಹೋರಾಟ ಆರಂಭಿಸಲಿದ್ದಾರೆ.