ಸಿಡ್ನಿ: ಸ್ಟಾರ್ ಇಂಡಿಯನ್ ಶಟ್ಲರ್ ಎಚ್.ಎಸ್. ಪ್ರಣಯ್ “ಆಸ್ಟ್ರೇಲಿಯನ್ ಓಪನ್ ಸೂಪರ್-500′ ಬ್ಯಾಡ್ಮಿಂಟನ್ ಪಂದ್ಯಾವಳಿಯ ಫೈನಲ್‌ಗೆ ಲಗ್ಗೆ ಹಾಕಿದ್ದಾರೆ.
ಶನಿವಾರದ ಸೆಮಿಫೈನಲ್ ಸೆಣಸಾಟದಲ್ಲಿ ಪ್ರಣಯ್ ಭಾರತದವರೇ ಆದ ಪ್ರಿಯಾಂಶು ರಾಜಾವತ್ ವಿರುದ್ಧ 21-18, 21-12 ಅಂತರದ ಗೆಲುವು ಸಾಧಿಸಿದರು. ಇದರೊಂದಿಗೆ ರಾಜಾವತ್ ಅವರಿಗೆ ಸೂಪರ್-500 ಕೂಟದ ಚೊಚ್ಚಲ ಫೈನಲ್ ಅವಕಾಶ ಕೈತಪ್ಪಿತು.
ವಿಶ್ವದ ನಂ.9 ಆಟಗಾರನಾಗಿರುವ ಎಚ್.ಎಸ್. ಪ್ರಣಯ್ ರವಿವಾರದ ಫೈನಲ್‌ನಲ್ಲಿ ಚೀನದ ವೆಂಗ್ ಹಾಂಗ್ ಯಾಂಗ್ ವಿರುದ್ಧ ಆಡಲಿದ್ದಾರೆ. ಪಂದ್ಯ ಭಾರತೀಯ ಕಾಲಮಾನದಂತೆ ಬೆಳಗ್ಗೆ 9.30ಕ್ಕೆ ಆರಂಭವಾಗಲಿದೆ.
ಕಾಕತಾಳೀಯವೆಂಬಂತೆ, ವಿಶ್ವದ ನಂ. 24 ಆಟಗಾರನಾಗಿರುವ ಹಾಂಗ್ ಯಾಂಗ್ ಮೇ ತಿಂಗಳಲ್ಲಿ ನಡೆದ ಮಲೇಷ್ಯಾ ಮಾಸ್ಟರ್ ಫೈನಲ್‌ನಲ್ಲೂ ಪ್ರಣಯ್‌ಗೆ ಎದುರಾಗಿದ್ದರು. ಈ ಚೀನೀ ಆಟಗಾರನನ್ನು ಮಣಿಸುವ ಮೂಲಕ ಪ್ರಣಯ್ 6 ವರ್ಷಗಳ ಪ್ರಸ್ತಿ ಬರಗಾಲ ನೀಗಿಸಿಕೊಂಡಿದ್ದರು. ಅಂದಿನದು ಇವರಿಬ್ಬರ ನಡುವಿನ ಮೊದಲ ಮುಖಾಮುಖೀಯೂ ಆಗಿತ್ತು.
“ವೆಂಗ್ ಹಾಂಗ್ ಓರ್ವ ಕಠಿನ ಎದುರಾಳಿ. ಬಿಗ್ ಮ್ಯಾಚ್‌ಗಳನ್ನು ಆಡಬಲ್ಲ ಸಶಕ್ತ ಆಟಗಾರ. ಅದೂ ಅಲ್ಲದೆ ಎಡಗೈ ಆಟಗಾರ ಬೇರೆ. ಆದರೆ ಫೈನಲ್ ಈಸ್ ಫೈನಲ್. ನಾಳೆ ನನ್ನೆಲ್ಲ ಸಾಮರ್ಥ್ಯವನ್ನು ತೆರೆದಿರಿಸಿ ಹೋರಾಡಲಿದ್ದೇನೆ’ ಎಂಬುದಾಗಿ ಪ್ರಣಯ್ ಹೇಳಿದರು.