Advertisement

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್ : ಜೊಕೋವಿಕ್‌ ಸೆಕೆಂಡ್‌ ಹ್ಯಾಟ್ರಿಕ್‌

11:10 PM Feb 21, 2021 | Team Udayavani |

ಮೆಲ್ಬರ್ನ್: ಎರಡನೇ ಸಲ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿಗಳ ಹ್ಯಾಟ್ರಿಕ್‌ ಸಾಧಿಸಿದ ಸರ್ಬಿಯಾದ ನೊವಾಕ್‌ ಜೊಕೋವಿಕ್‌ ತಾನೇಕೆ ವಿಶ್ವದ ನಂಬರ್‌ ವನ್‌ ಟೆನಿಸಿಗ ಎಂಬುದನ್ನು ಸಾಬೀತುಪಡಿಸಿದ್ದಾರೆ. ರವಿವಾರದ ಬಹು ನಿರೀಕ್ಷೆಯ ಫೈನಲ್‌ನಲ್ಲಿ ರಶ್ಯದ ಡ್ಯಾನಿಲ್‌ ಮೆಡ್ವೆಡೇವ್‌ ಸರ್ಬಿಯನ್‌ ಆಟಗಾರನಿಗೆ ಯಾವ ವಿಧದಲ್ಲೂ ಸಾಟಿಯಾಗಲಿಲ್ಲ. 7-5, 6-2, 6-2 ನೇರ ಸೆಟ್‌ಗಳ ಜಯ ಸಾಧಿಸಿದ ಜೊಕೋವಿಕ್‌ 9ನೇ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿಯೊಂದಿಗೆ 18 ಗ್ರ್ಯಾನ್‌ಸ್ಲಾಮ್‌ ಟ್ರೋಫಿಗಳ ಸರದಾರನೆನಿಸಿದರು.

Advertisement

ಕಳೆದೆರಡು ವರ್ಷವೂ ಜೊಕೋವಿಕ್‌ ಅವರೇ ಆಸ್ಟ್ರೇಲಿಯನ್‌ ಓಪನ್‌ ಪ್ರಶಸ್ತಿ ಮೇಲೆ ಹಕ್ಕು ಚಲಾಯಿಸಿದ್ದರು. ಇದರೊಂದಿಗೆ “ಮೆಲ್ಬರ್ನ್ ಪಾರ್ಕ್‌’ನಲ್ಲಿ 2ನೇ ಸಲ ಹ್ಯಾಟ್ರಿಕ್‌ ಸಾಧಿಸಿದಂತಾಯಿತು. 2011-2013ರ ಅವಧಿಯಲ್ಲೂ ಸತತ 3 ಸಲ ಇಲ್ಲಿ ಟ್ರೋಫಿಯನ್ನೆತ್ತಿ ಮೊದಲ ಹ್ಯಾಟ್ರಿಕ್‌ ಸಂಭ್ರಮ ಆಚರಿಸಿದ್ದರು.

ಜೊಕೋವಿಕ್‌ ಈ ಸಾಧನೆಯೊಂದಿಗೆ ರೋಜರ್‌ ಫೆಡರರ್‌ ಮತ್ತು ರಫೆಲ್‌ ನಡಾಲ್‌ ಅವರ 20 ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಗಳ ಪುರುಷರ ವಿಭಾಗದ ದಾಖಲೆಗೆ ಇನ್ನಷ್ಟು ಹತ್ತಿರವಾದರು.

ಸಾಟಿಯಾಗದ ಮೆಡ್ವೆಡೇವ್‌
ವಿಶ್ವದ ನಂ.4 ಟೆನಿಸಿಗನಾಗಿರುವ ಡ್ಯಾನಿಲ್‌ ಮೆಡ್ವೆಡೇವ್‌ ಅವರಿಗೆ ಇದು ಕೇವಲ 2ನೇ ಗ್ರ್ಯಾನ್‌ಸ್ಲಾಮ್‌ ಫೈನಲ್‌ ಆಗಿತ್ತು. ಮೊದಲ ಗ್ರ್ಯಾನ್‌ಸ್ಲಾಮ್‌ ಟ್ರೋಫಿಯ “ದೂರದ ನಿರೀಕ್ಷೆ’ಯಲ್ಲಿದ್ದರು. ಆದರೆ ಜೊಕೋವಿಕ್‌ ಅವರ ಸೂಪರ್ಬ್ ಸರ್ವ್‌, ಅಮೋಘ ಬೇಸ್‌ಲೈನ್‌ ಪರಾಕ್ರಮದ ಮುಂದೆ ರಶ್ಯನ್‌ ಟೆನಿಸಿಗನ ಆಟ ಸಾಗಲಿಲ್ಲ. ಅವರ ಸತತ 20 ಪಂದ್ಯಗಳ ಗೆಲುವಿನ ಓಟಕ್ಕೆ ಜೊಕೋ ತೆರೆ ಎಳೆದರು. ಕೂಟದ ನಡುವೆ ಸ್ನಾಯು ಸೆಳೆತಕ್ಕೆ ಸಿಲುಕಿದರೂ ಈ ನೋವನ್ನು ಮೆಟ್ಟಿ ನಿಲ್ಲುವ ಮೂಲಕ ಜೊಕೋವಿಕ್‌ ತಮ್ಮ ತಾಕತ್ತನ್ನು ಹೊರಗೆಡಹಿದ್ದು ವಿಶೇಷವಾಗಿತ್ತು.

ಮೆಡ್ವೆಡೇವ್‌ 2019ರ ಯುಎಸ್‌ ಓಪನ್‌ ಫೈನಲ್‌ಗೆ ತಲುಪಿದ್ದರೂ ಅಲ್ಲಿ ರಫೆಲ್‌ ನಡಾಲ್‌ ವಿರುದ್ಧ ಪರಾಭವಗೊಂಡಿದ್ದರು.

Advertisement

Croatia’s Ivan Dodig (R) and partner Slovakia’s Filip Polasek kiss the championship trophy after winning their men’s doubles final match against Rajeev Ram of the US and partner Britain’s Joe Salisbury on day fourteen of the Australian Open tennis tournament in Melbourne.

ಪುರುಷರ ಡಬಲ್ಸ್‌: ಡೋಡಿಗ್‌-ಪೊಲಸೆಕ್‌ ಜೋಡಿಗೆ ಮೊದಲ ಗ್ರ್ಯಾನ್‌ಸ್ಲಾಮ್‌
ಕ್ರೊವೇಶಿಯಾದ ಇವಾನ್‌ ಡೋಡಿಗ್‌-ಸ್ಲೊವಾಕಿಯಾದ ಫಿಲಿಪ್‌ ಪೊಲಸೆಕ್‌ ಜೋಡಿ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನೆತ್ತಿ ಸಂಭ್ರಮಿಸಿದೆ. 9ನೇ ಶ್ರೇಯಾಂಕದ ಇವರು, ರವಿವಾರ ಆಸ್ಟ್ರೇಲಿಯನ್‌ ಓಪನ್‌ ಪುರುಷರ ಡಬಲ್ಸ್‌ನಲ್ಲಿ ಚಾಂಪಿಯನ್‌ ಆಗಿ ಮೂಡಿಬಂದರು. ಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ರಾಜೀವ್‌ ರಾಮ್‌ (ಅಮೆರಿಕ)-ಜೋ ಸ್ಯಾಲಿಸ್‌ಬರಿ (ಬ್ರಿಟನ್‌) ವಿರುದ್ಧ 6-3, 6-4 ನೇರ ಸೆಟ್‌ಗಳ ಜಯ ಸಾಧಿಸಿದ್ದು ವಿಶೇಷ.

35 ವರ್ಷದ ಫಿಲಿಪ್‌ ಪೊಲಸೆಕ್‌ ಅವರಿಗೆ ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ. 2018ರಲ್ಲಿ ಇವರು ನಿವೃತ್ತಿಯಿಂದ ಹೊರಬಂದು ಮರಳಿ ಟೆನಿಸ್‌ ಅಂಕಣಕ್ಕೆ ಇಳಿದಿದ್ದರು. ಇನ್ನೊಂದೆಡೆ, 36 ವರ್ಷದ ಇವಾನ್‌ ಡೋಡಿಗ್‌ ಗೆದ್ದ 2ನೇ ಗ್ರ್ಯಾನ್‌ಸ್ಲಾಮ್‌ ಟ್ರೋಫಿ. ಇದಕ್ಕೂ ಮೊದಲು 2015ರಲ್ಲಿ ಮಾರ್ಸೆಲೊ ಮೆಲೊ ಜತೆಗೂಡಿ ಫ್ರೆಂಚ್‌ ಓಪನ್‌ ಡಬಲ್ಸ್‌ ಜಯಿಸಿದ್ದರು.

ಫಿಲಿಪ್‌ ಪೊಲಸೆಕ್‌ ನಿವೃತ್ತಿಯಿಂದ ಹೊರಬಂದು ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಜಯಿಸಿದ ಸ್ಲೊವಾಕಿಯಾದ ಕೇವಲ 2ನೇ ಟೆನಿಸಿಗ. ಡೇನಿಯೇಲಾ ಹಂಟುಚೋವಾ ಮೊದಲ ಸಾಧಕಿ. ಫಿಲಿಪ್‌ ಪೊಲಸೆಕ್‌ ಈ ಪ್ರಶಸ್ತಿಯನ್ನು ಇತ್ತೀಚೆಗಷ್ಟೇ ಜನಿಸಿದ ತಮ್ಮ ಪುತ್ರಿಗೆ ಅರ್ಪಿಸಿದ್ದಾರೆ.

ರಾಜೀವ್‌ಗೆ ಮಿಶ್ರ ಡಬಲ್ಸ್‌
ಇದಕ್ಕೂ ಮೊದಲು ರಾಜೀವ್‌ ರಾಮ್‌ ಜೆಕ್‌ ಆಟಗಾರ್ತಿ ಬಾಬೊìರಾ ಕ್ರೆಜಿಕೋವಾ ಜತೆಗೂಡಿ ಮಿಶ್ರ ಡಬಲ್ಸ್‌ ಪ್ರಶಸ್ತಿ ಜಯಿಸಿದ್ದರು. ಫೈನಲ್‌ನಲ್ಲಿ ಇವರು ಆತಿಥೇಯ ನಾಡಿನ ಸಮಂತಾ ಸ್ಟೋಸರ್‌-ಮ್ಯಾಥ್ಯೂ ಎಬ್ಡೆನ್‌ ವಿರುದ್ಧ 6-1, 6-4ರಿಂದ ಮೇಲುಗೈ ಸಾಧಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next