ಮೆಲ್ಬರ್ನ್: ಮುಂಬರುವ ಐಪಿಎಲ್ ಟಿ20 ಕ್ರಿಕೆಟ್ ಕೂಟ ನಡೆದರೂ ಕೊರೊನಾ ಭಯದಿಂದಾಗಿ ಆಸ್ಟ್ರೇಲಿಯಾದ ಆಟಗಾರರು ಪಾಲ್ಗೊಳ್ಳುವುದು ಅನುಮಾನ ಎನ್ನಲಾಗಿದೆ.
ಕ್ರಿಕೆಟ್ ಆಸ್ಟ್ರೇಲಿಯಾ ಮಂಗಳವಾರ ತಮ್ಮ ಆಟಗಾರರಿಗೆ ಪರೋಕ್ಷವಾಗಿ ಐಪಿಎಲ್‌ನಲ್ಲಿ ಭಾಗವಹಿಸಬೇಡಿ ಎಂಬ ಸೂಚನೆಯನ್ನು ರವಾನಿಸಿದೆ.
ಈ ಬಗ್ಗೆ ಮಾತನಾಡಿರುವ ಆಸೀಸ್ ಕ್ರಿಕೆಟ್ ಸಿಇಒ ಕೆವಿನ್ ರಾಬರ್ಟ್ಸ್, “ಐಪಿಎಲ್‌ನಲ್ಲಿ ಭಾಗವಹಿಸುವ ಆಟಗಾರರಿಗೆ ಕೊರೊನಾ ಹಿನ್ನೆಲೆಯಲ್ಲಿ ಸಲಹೆ ನೀಡಲು ಇಷ್ಟಪಡುತ್ತೇವೆ. ಫ್ರಾಂಚೈಸಿಗಳ ಜತೆ ನೀವು ವೈಯಕ್ತಿಕವಾಗಿ ಒಪ್ಪಂದ ಮಾಡಿಕೊಂಡಿದ್ದೀರಿ, ಈಗ ನೀವೇ ನಿರ್ಧರಿಸಿ, ಇಂತಹ ಸಮಯದಲ್ಲಿ ಐಪಿಎಲ್ ನಿಮಗೆ ಎಷ್ಟು ಮುಖ್ಯ ಎನ್ನುವುದನ್ನು, ಒಂದೊಳ್ಳೆ ನಿರ್ಧಾರಕ್ಕೆ ನೀವು ಬರುತ್ತೀರಿ ಎಂದು ಭಾವಿಸಿದ್ದೇನೆ’ ಎಂದು ಹೇಳಿದ್ದಾರೆ.
ಒಟ್ಟಾರೆ ಆಸ್ಟ್ರೇಲಿಯಾದ 17 ಆಟಗಾರರು ವಿವಿಧ ಐಪಿಎಲ್ ಫ್ರಾಂಚೈಸಿಗಳ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ವಿದೇಶಿ ಆಟಗಾರರ ಪೈಕಿ ಆಸೀಸ್‌ನ ಪ್ಯಾಟ್ ಕಮಿನ್ಸ್ (15.5 ಕೋಟಿ ರೂ.) ಅತೀ ಹೆಚ್ಚು ಮೊತ್ತಕ್ಕೆ ಕೋಲ್ಕತಾ ತಂಡಕ್ಕೆ ಮಾರಾಟಗೊಂಡಿದ್ದಾರೆ. ಉಳಿದಂತೆ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್, ಗ್ಲೆನ್ ಮ್ಯಾಕ್ಸ್‌ವೆಲ್ ಐಪಿಎಲ್‌ನಲ್ಲಿ ಭಾಗವಹಿಸುತ್ತಿರುವ ಆಸ್ಟ್ರೇಲಿಯಾದ ತಾರಾ ಆಟಗಾರರಾಗಿದ್ದಾರೆ. ಮೂಲಗಳ ಪ್ರಕಾರ ಈ ತಾರಾ ಆಟಗಾರರನ್ನು ಐಪಿಎಲ್‌ನಲ್ಲಿ ಪಾಲ್ಗೊಳ್ಳದಂತೆ ಸ್ವತಃ ಆಸೀಸ್ ಕ್ರಿಕೆಟ್ ಮಂಡಳಿಯೇ ಸೂಚನೆ ನೀಡಿದೆ ಎಂದು ಹೇಳಲಾಗಿದೆ.