Advertisement
ಮಾಯಾಂಕ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ವೀಕ್ಷಕ ವಿವರಣೆ ನಡೆಸುತ್ತಿದ್ದ ಮಾಜಿ ಕ್ರಿಕೆಟಿಗ ಕೀಫ್, ಮಾಯಾಂಕ್ ರಣಜಿಯಲ್ಲಿ ಬಾರಿಸಿದ ತ್ರಿಶತಕವನ್ನು ಪ್ರಸ್ತಾಪಿಸಿ ಅಪಹಾಸ್ಯ ಮಾಡಿದರು. “ರಣಜಿಯಲ್ಲಿ ಮಾಯಾಂಕ್ ತ್ರಿಶತಕ ಸಿಡಿಸಿದ್ದಾರೆ. ಅದು ಯಾವುದೋ ಕ್ಯಾಂಟೀನ್ ಹುಡುಗರ ಅಥವಾ ಹೋಟೆಲ್ ವೈಟರ್ ವಿರುದ್ಧ ಹೊಡೆದಿರಬಹುದು’ ಎಂದು ಟೀಕಿಸಿದ್ದಾರೆ. ಇದೇ ವೇಳೆ ಆಸೀಸ್ ಮಾಜಿ ಕ್ರಿಕೆಟಿಗ ಮಾರ್ಕ್ ವಾ ಕೂಡ ಮಾತನಾಡಿದ್ದಾರೆ. ಭಾರತದಲ್ಲಿ ಮಾಯಾಂಕ್ ಬ್ಯಾಟಿಂಗ್ ಸರಾಸರಿ ಶೇ.50, ಇದು ಆಸ್ಟ್ರೇಲಿಯದಲ್ಲಿ ಸರಾಸರಿ 40 ಆಗಿದೆ ಎನ್ನುವ ಮೂಲಕ ಭಾರತದ ದೇಶಿ ಕ್ರಿಕೆಟ್ ಕೂಟವನ್ನು ಪರೋಕ್ಷವಾಗಿ ಕಳಪೆ ಎಂದಿದ್ದಾರೆ. ಇವರಿಬ್ಬರ ಟೀಕೆಗೆ ಮಾಯಾಂಕ್ ಅರ್ಧಶತಕ ಸಿಡಿಸುವ ಮೂಲಕ ಅತ್ಯುತ್ತಮ ಪ್ರತಿಕ್ರಿಯೆ ನೀಡಿದ್ದಾರೆ.
ಮಾಯಾಂಕ್ ವಿರುದ್ಧ ಆಸೀಸ್ ಮಾಜಿ ಕ್ರಿಕೆಟಿಗ ಅವಮಾನಕಾರಿ ಹೇಳಿಕೆ ನೀಡಿದ ಬೆನ್ನಲ್ಲೇ ಟ್ವೀಟರ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ರಿಷಭ್ ಸಿಂಗ್ ಎಂಬ ಅಭಿಮಾನಿಯೊಬ್ಬರು ಕೀಫ್ ಜನ್ಮ ಜಾಲಾಡಿದ್ದಾರೆ. ಕೀಫ್ ಅವರೆ, ಮಾಯಾಂಕ್ ಮೊದಲ ಟೆಸ್ಟ್‌ನಲ್ಲೇ ಅರ್ಧಶತಕ ಸಿಡಿಸಿದ್ದಾರೆ. ನೀವು 24 ಟೆಸ್ಟ್ ಪಂದ್ಯ ಆಡಿ 1 ಅರ್ಧಶತಕ ದಾಖಲಿಸಿದ್ದೀರಿ. ಈಗ ಹೇಳಿ ನಿಜವಾದ ಕ್ಯಾಂಟೀನ್ ಕ್ರಿಕೆಟಿಗ ಯಾರು ಎಂದು ಪ್ರಶ್ನಿಸಿದ್ದಾರೆ.