Advertisement

ಇಂದಿನಿಂದ ಟಿ20 ಕೌತುಕ; ಚುಟುಕು ಸರಣಿಗೆ ಅಣಿಯಾದ ವನಿತೆಯರು

11:27 PM Oct 06, 2021 | Team Udayavani |

ಗೋಲ್ಡ್‌ಕೋಸ್ಟ್‌: ತನ್ನ ಪ್ರಪ್ರಥಮ ಹಗಲು-ರಾತ್ರಿ ಟೆಸ್ಟ್‌ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯ ವಿರುದ್ಧ ಉತ್ತಮ ಪ್ರದರ್ಶನ ನೀಡಿ ಮೇಲುಗೈ ಸಾಧಿಸಿದ ಭಾರತೀಯ ವನಿತಾ ಕ್ರಿಕೆಟ್‌ ತಂಡವೀಗ ಟಿ20 ಸರಣಿಗೆ ಸಜ್ಜಾಗಿದೆ. ಮೂರು ಪಂದ್ಯಗಳ ಸರಣಿಯ ಮೊದಲ ಮುಖಾಮುಖೀ ಗುರುವಾರ ನಡೆಯಲಿದೆ.

Advertisement

ಹೆಬ್ಬೆರಳಿನ ಗಾಯದಿಂದ ಏಕದಿನ ಮತ್ತು ಟೆಸ್ಟ್‌ ಸರಣಿಯಿಂದ ಹೊರಗುಳಿದಿದ್ದ ಹರ್ಮನ್‌ಪ್ರೀತ್‌ ಕೌರ್‌ ಈಗ ಸಂಪೂರ್ಣ ಗುಣಮುಖರಾಗಿದ್ದು, ತಂಡಕ್ಕೆ ಮರಳಿದ್ದಾರೆ. ಟಿ20 ನಾಯಕತ್ವವನ್ನೂ ವಹಿಸಲಿದ್ದಾರೆ. ಇದು ಭಾರತದ ಪಾಲಿಗೊಂದು ಲಾಭವೇನೋ ನಿಜ, ಆದರೆ ಕೌರ್‌ ಬ್ಯಾಟಿಂಗ್‌ ಫಾರ್ಮ್ ಬಗ್ಗೆ ತುಸು ಆತಂಕವಿದೆ.

ಮಂಧನಾ ಪ್ರಚಂಡ ಫಾರ್ಮ್
ಮೊದಲ ಪಿಂಕ್‌ಬಾಲ್‌ ಟೆಸ್ಟ್‌ನಲ್ಲಿ ಶತಕ ಬಾರಿಸಿ ಪ್ರಚಂಡ ಫಾರ್ಮ್ ಪ್ರದರ್ಶಿಸಿರುವ ಆರಂಭಿಕ ಆಟಗಾರ್ತಿ ಸ್ಮತಿ ಮಂಧನಾ ಮೇಲೆ ತಂಡ ಭಾರೀ ನಿರೀಕ್ಷೆ ಇರಿಸಿದೆ. ಅದರಂತೆ “ಲೇಡಿ ಸೆಹವಾಗ್‌’ ಖ್ಯಾತಿಯ ಶಫಾಲಿ ವರ್ಮ ಕೂಡ ಸಿಡಿದು ನಿಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಇವರೊಂದಿಗೆ ಜೆಮಿಮಾ ರೋಡ್ರಿಗಸ್‌ ಕೂಡ ಲಯ ಕಂಡುಕೊಂಡರೆ ಭಾರತದ ಬ್ಯಾಟಿಂಗ್‌ ಬಲಿಷ್ಠ ಎನಿಸಲಿದೆ.

ಇದನ್ನೂ ಓದಿ:ಅಂತಾರಾಷ್ಟ್ರೀಯ ಹಾಕಿ ಪ್ರಶಸ್ತಿ ಬಾಚಿಕೊಂಡ ಭಾರತೀಯರು

ಏಕದಿನದಲ್ಲಿ ಉತ್ತಮ ಹೋರಾಟ ನೀಡಿದ್ದ ಭಾರತ, ಆತಿಥೇಯರ ಸತತ ಗೆಲುವಿನ ದಾಖಲೆಗೆ ಬ್ರೇಕ್‌ ಹಾಕಿದ್ದನ್ನು ಮರೆಯು ವಂತಿಲ್ಲ. ಕೌರ್‌ ಬಳಗ ಇದೇ ಫಾರ್ಮ್ ಮುಂದುವರಿಸಿಕೊಂಡು ಹೋಗಬೇಕಾದ ಅಗತ್ಯವಿದೆ.

Advertisement

ಆಸೀಸ್‌ ಬಲಿಷ್ಠ
ಬ್ಯಾಟಿಂಗ್‌ ಮತ್ತು ಬೌಲಿಂಗ್‌ ವಿಭಾಗ ಗಳೆರಡರಲ್ಲೂ ಆಸ್ಟ್ರೇಲಿಯ ಸಮರ್ಥವಾಗಿದೆ. ಮೆಗ್‌ ಲ್ಯಾನಿಂಗ್‌, ಹೀಲಿ, ಪೆರ್ರಿ, ಮೂನಿ ಅವರೆಲ್ಲ ಸ್ಫೋಟಕ ಬ್ಯಾಟಿಂಗಿಗೆ ಹೆಸರುವಾಸಿ. ಇವರಲ್ಲಿ ಇಬ್ಬರು ಸಿಡಿದು ನಿಂತರೂ ಭಾರತಕ್ಕೆ ಅಪಾಯ ತಪ್ಪಿದ್ದಲ್ಲ. ಆದ್ದರಿಂದ ಭಾರತದ ಬೌಲಿಂಗ್‌ ವಿಭಾಗ ಹರಿತಗೊಳ್ಳಬೇಕಿದೆ. ಇಲ್ಲಿ ಮೇಘನಾ ಸಿಂಗ್‌, ಶಿಖಾ ಪಾಂಡೆ, ಪೂಜಾ ವಸ್ತ್ರಾಕರ್‌ ಅವರನ್ನು ಭಾರತ ಅವಲಂಬಿಸಿದೆ.

ಆರಂಭ: ಅಪರಾಹ್ನ 2.10
ಪ್ರಸಾರ: ಸೋನಿ ನೆಟ್‌ವರ್ಕ್‌

 

Advertisement

Udayavani is now on Telegram. Click here to join our channel and stay updated with the latest news.

Next