Advertisement
ಸತತ 2 ಪಂದ್ಯಗಳನ್ನು ಗೆದ್ದು ಸರಣಿ ವಶಪಡಿಸಿಕೊಂಡ ಬಳಿಕ ಇಂಗ್ಲೆಂಡ್ ಟಿ20 ತಂಡ ರ್‍ಯಾಂಕಿಂಗ್‌ನಲ್ಲಿ ಆಸ್ಟ್ರೇಲಿಯವನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೆ ನೆಗೆದಿತ್ತು. ಆದರೀಗ 3ನೇ ಪಂದ್ಯವನ್ನು ಜಯಿಸುವ ಮೂಲಕ ಕಾಂಗರೂ ಪಡೆ ಮತ್ತೆ ನಂ.1 ಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಯಿತು. ಸರಣಿಯನ್ನು ಕ್ಲೀನ್‌ಸ್ವೀಪ್ ಆಗಿ ವಶಪಡಿಸಿಕೊಂಡರಷ್ಟೇ ಇಂಗ್ಲೆಂಡ್ ಅಗ್ರಸ್ಥಾನದಲ್ಲಿ ಗಟ್ಟಿಯಾಗುತ್ತಿತ್ತು.
ಮಂಗಳವಾರ ರಾತ್ರಿ ನಡೆದ ಮೇಲಾಟದಲ್ಲಿ ಇಂಗ್ಲೆಂಡ್ 6 ವಿಕೆಟಿಗೆ 145 ರನ್ ಗಳಿಸಿದರೆ, ಆಸ್ಟ್ರೇಲಿಯ 19.3 ಓವರ್‌ಗಳಲ್ಲಿ 5 ವಿಕೆಟಿಗೆ 146 ರನ್ ಬಾರಿಸಿ ಗೆದ್ದು ಬಂದಿತು. ಮಿಚೆಲ್ ಮಾರ್ಷ್ ಅಜೇಯ 39 ರನ್ ಬಾರಿಸಿ ತಂಡವನ್ನು ದಡ ಮುಟ್ಟಿಸಿದರು. ನಾಯಕ ಆರನ್ ಫಿಂಚ್ ಕೂಡ 39 ರನ್ ಹೊಡೆದರು. ಇಂಗ್ಲೆಂಡ್ ತಂಡ ಸ್ಟಾರ್ ಆಟಗಾರ ಜಾಸ್ ಬಟ್ಲರ್ ಮತ್ತು ನಾಯಕ ಇಯಾನ್ ಮಾರ್ಗನ್ ಸೇವೆಯಿಂದ ವಂಚಿತವಾಗಿತ್ತು. ಮೊಯಿನ್ ಅಲಿ ತಂಡವನ್ನು ಮುನ್ನಡೆಸಿದರು. ಇನ್ನೊಂದೆಡೆ ಡೇವಿಡ್ ವಾರ್ನರ್ ಮತ್ತು ಪ್ಯಾಟ್ ಕಮಿನ್ಸ್ ಅವರಿಗೆ ಆಸ್ಟ್ರೇಲಿಯ ವಿಶ್ರಾಂತಿ ನೀಡಿತ್ತು.
ಈ ತಂಡಗಳಿನ್ನು ಶುಕ್ರವಾರದಿಂದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿವೆ. ಎಲ್ಲ ಪಂದ್ಯಗಳು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಅಂಗಳದಲ್ಲಿ ನಡೆಯಲಿವೆ.
Related Articles
Advertisement