Advertisement

ಪರ್ತ್‌ ಟೆಸ್ಟ್‌: ನಥನ್‌ ಲಿಯಾನ್‌ ಮಾರಕ ದಾಳಿ; ಆಸ್ಟ್ರೇಲಿಯಕ್ಕೆ 164 ರನ್‌ ಜಯಭೇರಿ

10:15 PM Dec 04, 2022 | Team Udayavani |

ಪರ್ತ್‌: ಆಫ್ ಸ್ಪಿನ್ನರ್‌ ನಥನ್‌ ಲಿಯಾನ್‌ ಅವರ ಅದ್ಭುತ ನಿರ್ವಹಣೆಯಿಂದಾಗಿ ಆಸ್ಟ್ರೇಲಿಯ ತಂಡವು ವೆಸ್ಟ್‌ಇಂಡೀಸ್‌ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ 164 ರನ್‌ ಅಂತರದ ಗೆಲುವು ಸಾಧಿಸಿದೆ. ಈ ಗೆಲುವಿನಿಂದ ಆಸ್ಟ್ರೇಲಿಯ ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತಲ್ಲದೇ ಫ್ರ್ಯಾಂಕ್‌ ವೊರೆಲ್‌ ಟ್ರೋಫಿಯನ್ನು ತನ್ನಲ್ಲಿ ಉಳಿಸಿಕೊಂಡಿತು.

Advertisement

ಲಿಯಾನ್‌ 128 ರನ್ನಿಗೆ 6 ವಿಕೆಟ್‌ ಉರುಳಿಸಿದ್ದರಿಂದ ವೆಸ್ಟ್‌ಇಂಡೀಸ್‌ ತಂಡವು ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಟೆಸ್ಟ್‌ನ ಅಂತಿಮ ದಿನ 333 ರನ್ನಿಗೆ ಆಲೌಟಾಯಿತು. 111ನೇ ಟೆಸ್ಟ್‌ ಆಡುತ್ತಿರುವ ಲಿಯಾನ್‌ ಈ ಮೂಲಕ ಐದು ಪ್ಲಸ್‌ ವಿಕೆಟ್‌ ಗೊಂಚಲನ್ನು 21ನೇ ಬಾರಿ ಪಡೆದರು.

ಲಿಯಾನ್‌ ಟೆಸ್ಟ್‌ನಲ್ಲಿ ಒಟ್ಟಾರೆ 446 ವಿಕೆಟ್‌ ಪಡೆದಿದ್ದು ಸಾರ್ವಕಾಲಿಕ ಗರಿಷ್ಠ ವಿಕೆಟ್‌ ಪಡೆದವರಲ್ಲಿ ಎಂಟನೇ ಸ್ಥಾನ ಪಡೆದಿದ್ದಾರೆ. ಅವರು ಆಸ್ಟ್ರೇಲಿಯ ಪರ ಶೇನ್‌ ವಾರ್ನ್ (145 ಟೆಸ್ಟ್‌ನಲ್ಲಿ 708 ವಿಕೆಟ್‌) ಮತ್ತು ಗ್ಲೆನ್‌ ಮೆಕ್‌ಗ್ರಾಥ್‌ (124 ಟೆಸ್ಟ್‌ನಲ್ಲಿ 563 ವಿಕೆಟ್‌) ಅವರ ಬಳಿಕದ ಸ್ಥಾನ ಪಡೆದಿದ್ದಾರೆ.

ಲಿಯನ್‌ ಇಲ್ಲಿ ಬೌಲಿಂಗ್‌ ಮಾಡುವುದನ್ನು ಇಷ್ಟಪಡುತ್ತಾರೆ. ಇದು ಅವರ ಅದ್ಭುತ ಆಲ್‌ರೌಂಡ್‌ ನಿರ್ವಹಣೆಯಾಗಿದೆ ಎಂದು ಆಸ್ಟ್ರೇಲಿಯ ನಾಯಕ ಪ್ಯಾಟ್‌ ಕಮಿನ್ಸ್‌ ಹೇಳಿದ್ದಾರೆ. ಸೋಲಿನಿಂದ ನಿರಾಶೆಯಾಗಿದೆ. ಆದರೆ ಆಟಗಾರರ ತೀವ್ರ ಹೋರಾಟದ ಪ್ರಯತ್ನಕ್ಕೆ ಮೆಚ್ಚುಗೆ ಸಲ್ಲಿಸುತ್ತೇನೆ ಎಂದು ವೆಸ್ಟ್‌ಇಂಡೀಸ್‌ ನಾಯಕ ಬ್ರಾತ್‌ವೇಟ್‌ ತಿಳಿಸಿದ್ದಾರೆ.

ಪರ್ತ್‌ ಟೆಸ್ಟ್‌ ಗೆಲ್ಲಲು 498 ರನ್‌ ಗಳಿಸುವ ಗುರಿ ಪಡೆದಿದ್ದ ವೆಸ್ಟ್‌ಇಂಡೀಸ್‌ ತಂಡವು ಲಿಯಾನ್‌ ದಾಳಿಗೆ ತತ್ತರಿಸಿತು. ಆದರೆ ಆರಂಭಿಕ ನಾಯಕ ಕ್ರೆಗ್‌ ಬ್ರಾತ್‌ವೇಟ್‌ ಸಹಿತ ರೋಸ್ಟನ್‌ ಚೇಸ್‌ ಮತ್ತು ಅಲ್ಜಾರಿ ಜೋಸೆಫ್ ದಿಟ್ಟ ಹೋರಾಟ ನೀಡಿದ್ದರಿಂದ ವೆಸ್ಟ್‌ಇಂಡೀಸ್‌ ದ್ವಿತೀಯ ಇನ್ನಿಂಗ್ಸ್‌ನಲ್ಲಿ 333 ರನ್‌ ಗಳಿಸುವಂತಾಯಿತು. ಬ್ರಾತ್‌ವೇಟ್‌ ಶತಕ ಸಿಡಿಸಿದರೆ ಚೇಸ್‌ ಮತ್ತು ಜೋಸೆಫ್ ಉತ್ತಮವಾಗಿ ಆಡಿದರಲ್ಲದೇ 8ನೇ ವಿಕೆಟಿಗೆ 82 ರನ್‌ ಪೇರಿಸಿದ್ದರು.

Advertisement

ಲಬುಶೇನ್‌ ಪಂದ್ಯಶ್ರೇಷ್ಠ
ಮೊದಲ ಇನ್ನಿಂಗ್ಸ್‌ನಲ್ಲಿ ದ್ವಿಶತಕ ಮತ್ತು ದ್ವಿತೀಯ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಮಾರ್ನಸ್‌ ಲಬುಶೇನ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. 1974ರಲ್ಲಿ ಗ್ರೆಗ್‌ ಚಾಪೆಲ್‌ ಬಳಿಕ ಟೆಸ್ಟ್‌ ಪಂದ್ಯವೊಂದರಲ್ಲಿ ದ್ವಿಶತಕ ಮತ್ತು ಶತಕ ಬಾರಿಸಿದ ಆಸ್ಟ್ರೇಲಿಯದ ಮೊದಲ ಆಟಗಾರರೆಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯ ಪ್ರಥಮ ಇನ್ನಿಂಗ್ಸ್‌ 598ಕ್ಕೆ 4 ಡಿಕ್ಲೇರ್ ಡ್; ವೆಸ್ಟ್‌ಇಂಡೀಸ್‌ ಪ್ರಥಮ ಇನ್ನಿಂಗ್ಸ್‌ 283; ಆಸ್ಟ್ರೇಲಿಯ ದ್ವಿತೀಯ ಇನ್ನಿಂಗ್ಸ್‌: 182ಕ್ಕೆ 2 ಡಿಕ್ಲೇರ್ ಡ್ ,; ವೆಸ್ಟ್‌ಇಂಡೀಸ್‌ ದ್ವಿತೀಯ ಇನ್ನಿಂಗ್ಸ್‌: 333.

ಪಂದ್ಯಶ್ರೇಷ್ಠ: ಮಾರ್ನಸ್‌ ಲಬುಶೇನ್‌.

Advertisement

Udayavani is now on Telegram. Click here to join our channel and stay updated with the latest news.

Next