Advertisement

ಆಸ್ಟ್ರೇಲಿಯ-ದ. ಆಫ್ರಿಕಾ ಮೊದಲ ಫೈಟ್‌; 6ನೇ ಟಿ20 ವಿಶ್ವಕಪ್‌ ಸಡಗರ

11:51 PM Oct 22, 2021 | Team Udayavani |

ಅಬುಧಾಬಿ: ಬರೋಬ್ಬರಿ 5 ವರ್ಷಗಳ ಬಳಿಕ 6ನೇ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಶನಿವಾರದಿಂದ ಚಾಲನೆ ಲಭಿಸಲಿದೆ. ಅರ್ಹತಾ ಸುತ್ತಿನಿಂದ ಬಂದ 4 ತಂಡಗಳು ಸೇರಿದಂತೆ ಒಟ್ಟು 12 ತಂಡಗಳ ಮುಖಾಮುಖಿ ಕಾವೇರಿಸಿಕೊಳ್ಳಲಿದೆ. ಈ ವರೆಗೆ ಕಪ್‌ ಗೆಲ್ಲದ ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ಮೊದಲ ಪಂದ್ಯದಲ್ಲಿ ಸೆಣಸುವುದು ವಿಶೇಷ.

Advertisement

ಆಸ್ಟ್ರೇಲಿಯ-ದಕ್ಷಿಣ ಆಫ್ರಿಕಾ ನಡುವೆ ನಡೆ ಯುತ್ತಿರುವ ಕೇವಲ 2ನೇ ವಿಶ್ವಕಪ್‌ ಪಂದ್ಯ. 2012ರಲ್ಲಿ ಆಡಲಾದ ಏಕೈಕ ಪಂದ್ಯದಲ್ಲಿ ಆಸೀಸ್‌ ವಿಜಯಿಯಾಗಿತ್ತು.

ಇವೆರಡೂ ಬಲಿಷ್ಠ ತಂಡಗಳಾದರೂ ಕೂಟದ ನೆಚ್ಚಿನ ತಂಡಗಳಂತೂ ಅಲ್ಲ. 2010ರಲ್ಲಿ ಫೈನಲ್‌ ಪ್ರವೇಶಿಸಿದ್ದಷ್ಟೇ ಆಸ್ಟ್ರೇಲಿಯದ ಅತ್ಯುತ್ತಮ ಸಾಧನೆ. ಇನ್ನೊಂದೆಡೆ, ಹರಿಣಗಳ ಪಡೆಗೆ ಫೈನಲ್‌ ಕೂಡ ಮರೀಚಿಕೆಯಾಗಿದೆ. ಹೀಗಾಗಿ ಈ ಬಾರಿ ಇತ್ತಂಡಗಳೂ ಹೊಸ ಎತ್ತರ ತಲುಪುವ ಯೋಜನೆಯೊಂದಿಗೆ ಹೋರಾಟಕ್ಕೆ ಇಳಿಯಬೇಕಿದೆ.

ಆಸೀಸ್‌ ಸೋಲಿನ ಹಾದಿ
ಕಾಂಗರೂ ಬಳಗದ ವಿಶ್ವಕಪ್‌ ಆಗಮನದ ಹಾದಿಯಂತೂ ಸೋಲಿನ ಹಾದಿಯೇ ಆಗಿತ್ತು. ಬಾಂಗ್ಲಾದೇಶ, ವೆಸ್ಟ್‌ ಇಂಡೀಸ್‌, ನ್ಯೂಜಿಲ್ಯಾಂಡ್‌, ಭಾರತ, ಇಂಗ್ಲೆಂಡ್‌… ಹೀಗೆ ಎಲ್ಲ ತಂಡಗಳ ವಿರು ದ್ಧವೂ ಸರಣಿ ಸೋಲನುಭವಿಸಿತ್ತು. ಇಲ್ಲಿ ಆಡಲಾದ 13 ಪಂದ್ಯಗಳಲ್ಲಿ ಗೆದ್ದದ್ದು ಐದರಲ್ಲಿ ಮಾತ್ರ.

ಇದನ್ನೂ ಓದಿ:ಕೇರಳದಲ್ಲಿ ಇನ್ನೂ 2 ವಾರ ಮಳೆ;  9 ಆಣೆಕಟ್ಟಿಗೆ ರೆಡ್‌, 7 ಜಿಲ್ಲೆಗೆ ಯೆಲ್ಲೋ ಅಲರ್ಟ್‌

Advertisement

ಆಸ್ಟ್ರೇಲಿಯದ ಅಡಿಪಾಯವೇ ಗಟ್ಟಿ ಇಲ್ಲ. ಡೇವಿಡ್‌ ವಾರ್ನರ್‌ ಅವರ ಫಾರ್ಮ್ ಎಂದೋ ಕೈಕೊಟ್ಟಿದೆ. ಅಭ್ಯಾಸ ಪಂದ್ಯಗಳಲ್ಲೂ ಇದು ಸಾಬೀತಾಗಿದೆ. ಒಂದರಲ್ಲಿ ಸೊನ್ನೆ ಸುತ್ತಿದರೆ, ಇನ್ನೊಂದರಲ್ಲಿ ಗಳಿಸಿದ್ದು ಒಂದೇ ರನ್‌. ಮೊಣಕಾಲಿನ ಶಸ್ತ್ರಚಿಕಿತ್ಸೆ ಮುಗಿಸಿ ಬಂದಿರುವ ನಾಯಕ ಆರನ್‌ ಫಿಂಚ್‌ ಅವರಿಗೆ ಅಭ್ಯಾಸದ ಕೊರತೆ ಎದುರಾಗಿದೆ. ಪ್ರಧಾನ ವೇಗಿ ಪ್ಯಾಟ್‌ ಕಮಿನ್ಸ್‌ ಐಪಿಎಲ್‌ “ಫ‌ಸ್ಟ್‌ ಲೆಗ್‌’ ಬಳಿಕ ಯಾವುದೇ ಪಂದ್ಯವನ್ನಾಡಿಲ್ಲ.

ಆಸ್ಟ್ರೇಲಿಯದ ಬಲ ಇರುವುದೇ ಮಧ್ಯಮ ಕ್ರಮಾಂಕದಲ್ಲಿ. ಸ್ಮಿತ್‌, ಮಿಚೆಲ್‌ ಮಾರ್ಷ್‌, ಮ್ಯಾಕ್ಸ್‌ ವೆಲ್‌, ಸ್ಟೋಯಿನಿಸ್‌ ಇಲ್ಲಿನ ಇನ್‌ಫಾರ್ಮ್ ಆಟ ಗಾರರು. ಸ್ಟಾರ್ಕ್‌, ಹ್ಯಾಝಲ್‌ವುಡ್‌, ರಿಚರ್ಡ್‌ ಸನ್‌ ಅವರನ್ನೊಳಗೊಂಡ ವೇಗದ ವಿಭಾಗವೂ ಪರಾಗಿಲ್ಲ.

ಆಫ್ರಿಕಾ ಹೆಚ್ಚು ಬಲಿಷ್ಠ
ಆಸ್ಟ್ರೇಲಿಯಕ್ಕೆ ಹೋಲಿಸಿದರೆ ದಕ್ಷಿಣ ಆಫ್ರಿಕಾ ಹೆಚ್ಚು ಬಲಿಷ್ಠ. ತಾಂತ್ರಿಕವಾಗಿಯೂ ಮೇಲುಗೈ ಹೊಂದಿದೆ. ವಿಂಡೀಸ್‌, ಐರ್ಲೆಂಡ್‌ ಮತ್ತು ಲಂಕಾ ವಿರುದ್ಧ ಸರಣಿ ಗೆದ್ದ ಬಳಿಕ ಎರಡೂ ಅಭ್ಯಾಸ ಪಂದ್ಯಗಳನ್ನೂ ಜಯಿಸಿದೆ.

ಡಿ ಕಾಕ್‌, ಬವುಮ, ಮಾರ್ಕ್‌ರಮ್‌, ಹೆಂಡ್ರಿಕ್ಸ್‌ ಅವರನ್ನೊಳಗೊಂದ ಅಗ್ರ ಕ್ರಮಾಂಕ ಹೆಚ್ಚು ಬಲಿಷ್ಠ. ಆದರೆ ಐಪಿಎಲ್‌ ಹೀರೋ ಡು ಪ್ಲೆಸಿಸ್‌ ಇಲ್ಲದಿರುವುದೊಂದು ಕೊರತೆ. ಪವರ್‌ ಹಿಟ್ಟರ್‌ ಮಿಲ್ಲರ್‌ ಫಾರ್ಮ್ ಬಗ್ಗೆ ಅನುಮಾನವಿದೆ. ಮಧ್ಯಮ ಕ್ರಮಾಂಕ ಸಾಮಾನ್ಯ. ಬೆಸ್ಟ್‌ ಫಿನಿಶರ್ ಕೊರತೆ ಇದೆ.

ಬೌಲಿಂಗ್‌ ವಿಭಾಗದಲ್ಲಿ ವೈವಿಧ್ಯವಿದೆ. ರಬಾಡ, ಎನ್‌ಗಿಡಿ, ನೋರ್ಜೆ, ಮಹಾರಾಜ್‌ ಎದುರಾಳಿಯನ್ನು ನಿಯಂತ್ರಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಆಲ್‌ರೌಂಡ್‌ ಪಾತ್ರ ನಿಭಾಯಿಸಲು ಪ್ರಿಟೋರಿಯಸ್‌ ಮತ್ತು ಮುಲ್ಡರ್‌ ಇದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next