Advertisement

ಆಸ್ಟ್ರೇಲಿಯಕ್ಕೆ ಇಂದು ಏಕದಿನ ಅಭ್ಯಾಸ

07:10 AM Sep 12, 2017 | |

ಚೆನ್ನೈ: ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ಏಕದಿನ ಹಾಗೂ ಟಿ-20 ಸರಣಿಯನ್ನಾಡಲು ಭಾರತಕ್ಕೆ ಕಾಲಿಟ್ಟಿದೆ. ವರ್ಷಾರಂಭದಲ್ಲಿ ಭಾರತಕ್ಕೆ ಆಗಮಿಸಿದ್ದ ಆಸೀಸ್‌ ತಂಡ 4 ಟೆಸ್ಟ್‌ಗಳನ್ನಷ್ಟೇ ಆಡಿ ತೆರಳಿತ್ತು. ಈ ಬಾರಿ ಸೀಮಿತ ಓವರ್‌ಗಳ ಸರಣಿಯನ್ನಾಡಲಿದೆ. 5 ಪಂದ್ಯಗಳ ಏಕದಿನ ಮುಖಾಮುಖೀ ಸೆ. 17ರಿಂದ ಚೆನ್ನೈಯಲ್ಲಿ ಆರಂಭವಾಗಲಿದ್ದು, ಇದರ ತಯಾರಿಗಾಗಿ ಮಂಗಳವಾರ ಇಲ್ಲಿಯೇ 50 ಓವರ್‌ಗಳ ಅಭ್ಯಾಸ ಪಂದ್ಯವೊಂದನ್ನು ಆಡಲಾಗುವುದು. ಎದುರಾಳಿ ತಂಡ, ಭಾರತೀಯ ಕ್ರಿಕೆಟ್‌ ಮಂಡಳಿ ಅಧ್ಯಕ್ಷರ ಇಲೆವೆನ್‌.

Advertisement

ಸ್ಟೀವನ್‌ ಸ್ಮಿತ್‌ ನೇತೃತ್ವದ ಆಸ್ಟ್ರೇಲಿಯ ತಂಡ ಬಾಂಗ್ಲಾದೇಶದಲ್ಲಿ ನಡೆದ 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ 1-1 ಸಮಬಲ ಸಾಧಿಸಿ ಇಲ್ಲಿಗೆ ಆಗಮಿಸಿದೆ. ಇನ್ನೊಂದೆಡೆ ಕೊಹ್ಲಿ ಪಡೆ ಶ್ರೀಲಂಕಾದಲ್ಲಿ 9-0 ಕ್ಲಿನ್‌ಸಿÌàಪ್‌ ಸಾಧಿಸಿದ ಹುರುಪಿನಲ್ಲಿದೆ. ಆದರೆ ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ ಎದುರಾಗುವ ತಂಡ ಕೊಹ್ಲಿ ಪಡೆಯಷ್ಟು ಶಕ್ತಿಶಾಲಿಯಲ್ಲ. ಗುರುಕೀರತ್‌ ಸಿಂಗ್‌ ಮಾನ್‌ ನಾಯಕತ್ವದ ಈ ತಂಡದಲ್ಲಿ ಅನನುಭವಿಗಳೇ ತುಂಬಿದ್ದಾರೆ. ಬಹುತೇಕ ಸ್ಟಾರ್‌ ಕ್ರಿಕೆಟಿಗರು ದುಲೀಪ್‌ ಟ್ರೋಫಿ ಪಂದ್ಯಾವಳಿಯಲ್ಲಿ ಆಡುತ್ತಿರುವುದರಿಂದ ಹೊಸ ಮುಖಗಳಿಗೆ ಅವಕಾಶ ಲಭಿಸಿದೆ. ಅಷ್ಟೇ ಅಲ್ಲ, ಈ ತಂಡದ ಯಾವುದೇ ಆಟಗಾರರು ಆಸೀಸ್‌ ಎದುರಿನ ಸರಣಿಗಾಗಿ ಭಾರತ ತಂಡದಲ್ಲಿ ಸ್ಥಾನ ಸಂಪಾದಿಸಿಲ್ಲ. ಹೀಗಾಗಿ ಕಾಂಗರೂ ಅಭ್ಯಾಸಕ್ಕೆ ಇದು ಸರಿಸಾಟಿಯಾದ ತಂಡವೇ ಅಲ್ಲ, ಅಭ್ಯಾಸವೇನಿದ್ದರೂ ಆತಿಥೇಯ ತಂಡದ ಆಟಗಾರರಿಗೆ ಎಂಬುದು ಸಾರ್ವತ್ರಿಕ ಅಭಿಪ್ರಾಯ.

ಆತಿಥೇಯ ತಂಡದಲ್ಲಿ ಅಂತಾರಾಷ್ಟ್ರೀಯ ಪಂದ್ಯವನ್ನಾಡಿದ ಏಕೈಕ ಅನುಭವಿಯೆಂದರೆ ನಾಯಕ ಗುರುಕೀರತ್‌ ಸಿಂಗ್‌ ಮಾನ್‌. ಇವರು ಕಳೆದ ವರ್ಷ ಆಸ್ಟ್ರೇಲಿಯ ಪ್ರವಾಸದಲ್ಲಿ 3 ಏಕದಿನ ಪಂದ್ಯಗಳನ್ನಾಡಿ ಬಳಿಕ ಮೂಲೆಗುಂಪಾಗಿದ್ದರು. ಉಳಿದಂತೆ ಕರ್ನಾಟಕದ ಮಾಯಾಂಕ್‌ ಅಗರ್ವಾಲ್‌, ಭರವಸೆಯ ಬ್ಯಾಟ್ಸ್‌ಮನ್‌ಗಳಾದ ನಿತೀಶ್‌ ರಾಣ, ರಾಹುಲ್‌ ತ್ರಿಪಾಠಿ, ತಮಿಳುನಾಡಿನವರೇ ಆದ ಆಫ್ಬ್ರೇಕ್‌ ಬೌಲಿಂಗ್‌ ಆಲ್‌ರೌಂಡರ್‌ ವಾಷಿಂಗ್ಟನ್‌ ಸುಂದರ್‌ ಮೊದಲಾದವರಷ್ಟೇ ಕ್ರಿಕೆಟ್‌ ಅಭಿಮಾನಿಗಳು ಈವರೆಗೆ ಹೆಚ್ಚು ಕೇಳಿದ ಹೆಸರುಗಳು.

ಸವಾಲಿಗೆ ಆಸೀಸ್‌ ಸಜ್ಜು
ಆಸ್ಟ್ರೇಲಿಯದ ಕ್ರಿಕೆಟಿಗರೆ ಮುಂದಿರುವ 2 ದೊಡ್ಡ ಸವಾಲುಗಳೆಂದರೆ ಭಾರತದ ವಾತಾವರಣಕ್ಕೆ ಹೊಂದಿಕೊಳ್ಳುವುದು ಹಾಗೂ ಸ್ಪಿನ್‌ ದಾಳಿಯನ್ನು ಯಶಸ್ವಿಯಾಗಿ ನಿಭಾಯಿಸುವುದು. ಆದರೆ ವರ್ಷಾರಂಭದ ಟೆಸ್ಟ್‌ ಸರಣಿಯ ವೇಳೆ ಆಸೀಸ್‌ ಪಡೆ ನಿರೀಕ್ಷೆಗೂ ಮಿಗಿಲಾದ ಪ್ರದರ್ಶನ ನೀಡಿದ್ದನ್ನು ಮರೆಯುವಂತಿಲ್ಲ. 4 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ವೈಟ್‌ವಾಶ್‌ ಅನುಭವಿಸುತ್ತದೆಂದೇ ಭಾವಿಸಲಾಗಿದ್ದ ಕಾಂಗರೂ ಬಳಗ ಕೇವಲ 1-2ರಿಂದ ಸರಣಿ ಸೋತು ಭಾರತಕ್ಕೆ ಆಘಾತವಿಕ್ಕಿತ್ತು.

ಟೆಸ್ಟ್‌ ಕ್ರಿಕೆಟಿಗೆ ಹೋಲಿಸಿದರೆ ಏಕದಿನದಲ್ಲಿ ಆಸ್ಟ್ರೇಲಿಯದ ಆಟಗಾರರು ಹೆಚ್ಚು ಸ್ಪರ್ಧಾತ್ಮಕವಾಗಿ ಹಾಗೂ ಹೆಚ್ಚು ಅಪಾಯಕಾರಿಗಳಾಗಿ ಗೋಚರಿಸಬಲ್ಲರು. ಇದಕ್ಕೆ ಕಾರಣ ವೃತ್ತಿಪರತೆ ಹಾಗೂ ಐಪಿಎಲ್‌ ಪಂದ್ಯಾವಳಿ. ನಾಯಕ ಸ್ಟೀವನ್‌ ಸ್ಮಿತ್‌, ಉಪನಾಯಕ ಡೇವಿಡ್‌ ವಾರ್ನರ್‌ ಅವರ ಪುಣೆ ಹಾಗೂ ಹೈದರಾಬಾದ್‌ ತಂಡಗಳು ಕಳೆದ ಐಪಿಎಲ್‌ನಲ್ಲಿ ನೀಡಿದ ಅಮೋಘ ಪ್ರದರ್ಶನವನ್ನು ಮರೆಯುವಂತಿಲ್ಲ. ಹೀಗಾಗಿ ಭಾರತದ ಟ್ರ್ಯಾಕ್‌ಗಳು ಆಸೀಸ್‌ ಕ್ರಿಕೆಟಿಗರಿಗೆ ಮೊದಲಿನಂತೆ ಸವಾಲಿನದ್ದಾಗೇನೂ ಉಳಿದಿಲ್ಲ. ಅಲ್ಲದೇ ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ ಸರಣಿಯನ್ನು ಸಮಬಲಗೊಳಿಸಿದ ಆತ್ಮವಿಶ್ವಾಸವೂ ತಂಡಕ್ಕೆ ಶ್ರಿರಕ್ಷೆಯಾಗಿದೆ.

Advertisement

ಬಾಂಗ್ಲಾ ಸರಣಿಯಲ್ಲಿ 2 ಶತಕ ಬಾರಿಸುವ ಮೂಲಕ ವಾರ್ನರ್‌ ತಮ್ಮ ಫಾರ್ಮನ್ನು ಸಾಬೀತುಪಡಿಸಿದ್ದಾರೆ. ಫಿಂಚ್‌, ಹೆಡ್‌, ಮ್ಯಾಕ್ಸ್‌ವೆಲ್‌, ಫಾಕ್ನರ್‌ ಅವರಂಥ ಒನ್‌ ಡೇ ಸ್ಪೆಷಲಿಸ್ಟ್‌ಗಳು ಪಂದ್ಯಕ್ಕೆ ಯಾವುದೇ ತಿರುವನ್ನು ನೀಡಲು ಶಕ್ತರು. ಇವರೆದುರು ಅನನುಭವಿ ಆಟಗಾರರು ಅಭ್ಯಾಸ ಪಂದ್ಯದಲ್ಲಿ ಯಾವ ರೀತಿಯ ನಿರ್ವಹಣೆ ನೀಡಬಲ್ಲರೆಂಬುದೊಂದು ಕುತೂಹಲ.

ಗಾಯಾಳು ಫಿಂಚ್‌ ಆಡುವುದಿಲ್ಲ
ಆಸ್ಟ್ರೇಲಿಯದ ಬಿಗ್‌ ಹಿಟ್ಟಿಂಗ್‌ ಓಪನರ್‌ ಆರನ್‌ ಫಿಂಚ್‌ ಮೀನಖಂಡದ ನೋವಿನಿಂದ ಅಭ್ಯಾಸ ಪಂದ್ಯದಲ್ಲಿ ಆಡುವುದಿಲ್ಲ. ಇದನ್ನು ತಂಡದ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ. ಆದರೆ ಅವರು ಸೆ. 17ರ ಮೊದಲ ಏಕದಿನ ಪಂದ್ಯಕ್ಕೆ ಲಭ್ಯರಾಗುವ ಬಗ್ಗೆ ಆನುಮಾನವಿಲ್ಲ ಎಂದೂ ತಿಳಿಸಿದೆ.ಆಲ್‌ರೌಂಡರ್‌ ಹಿಲ್ಟನ್‌ ಕಾರ್ಟ್‌ರೈಟ್‌ ಕೂಡ ಅನಾರೋಗ್ಯದಿಂದ ನರಳುತ್ತಿದ್ದು, ಮಂಗಳವಾರ ಬೆಳಗ್ಗೆಯಷ್ಟೇ ಇವರ ಲಭ್ಯತೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಇದೇನೂ ಅಧಿಕೃತ “ಲಿಸ್ಟ್‌ ಎ’ ಪಂದ್ಯ ಅಲ್ಲದಿರುವುದರಿಂದ ಎಲ್ಲ ಆಟಗಾರರಿಗೂ ಆಡುವ ಅವಕಾಶ ಲಭಿಸಲಿದೆ.

ಚೆನ್ನೈ ವಾತಾವರಣಕ್ಕೆ ಹೊಂದಿಕೊಳ್ಳುವುದು ಆಸೀಸ್‌ ಕ್ರಿಕೆಟಿಗರಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಇಲ್ಲಿನ ಉಷ್ಣತೆ 30 ಡಿಗ್ರಿ ಸಿ.ಗಿಂತ ಕೆಳಗಿದ್ದರೂ ವಿಪರೀತ ಬೆವರು ಆಟಗಾರರನ್ನು ಕಂಗೆಡಿಸುತ್ತಿದೆ. ಇದನ್ನು ತಡೆದುಕೊಳ್ಳಲು ಶಕ್ತರಾದರೆ ಸರಣಿ ರೋಮಾಂಚಕಾರಿ ಆರಂಭ ಪಡೆಯಲಿದೆ ಎಂಬುದು ಆಸೀಸ್‌ ಆಟಗಾರ ಜೇಮ್ಸ್‌ ಫಾಕ್ನರ್‌ ಅಭಿಪ್ರಾಯ.

ತಂಡಗಳು
ಮಂಡಳಿ ಅಧ್ಯಕ್ಷರ ಬಳಗ:
ಗುರುಕೀರತ್‌ ಸಿಂಗ್‌ ಮಾನ್‌ (ನಾಯಕ), ರಾಹುಲ್‌ ತ್ರಿಪಾಠಿ, ಮಾಯಾಂಕ್‌ ಅಗರ್ವಾಲ್‌, ಶಿವಂ ಚೌಧರಿ, ವಾಷಿಂಗ್ಟನ್‌ ಸುಂದರ್‌, ನಿತೀಶ್‌ ರಾಣ, ಗೋವಿಂದ ಪೋದ್ದಾರ್‌, ಶ್ರೀವತ್ಸ ಗೋಸ್ವಾಮಿ, ರಾಹಿಲ್‌ ಷಾ, ಅಕ್ಷಯ್‌ ಕರ್ನೇವಾರ್‌, ಕುಲ್ವಂತ್‌ ಖೆಜೊÅàಲಿಯ, ಕುಶಾಂಗ್‌ ಪಟೇಲ್‌, ಆವೇಷ್‌ ಖಾನ್‌, ಸಂದೀಪ್‌ ಶರ್ಮ.

ಆಸ್ಟ್ರೇಲಿಯ: ಸ್ಟೀವನ್‌ ಸ್ಮಿತ್‌ (ನಾಯಕ), ಡೇವಿಡ್‌ ವಾರ್ನರ್‌, ಆರನ್‌ ಫಿಂಚ್‌, ಟ್ರ್ಯಾವಿಸ್‌ ಹೆಡ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮ್ಯಾಥ್ಯೂ ವೇಡ್‌, ಆ್ಯಶrನ್‌ ಅಗರ್‌, ಹಿಲ್ಟನ್‌ ಕಾರ್ಟ್‌ರೈಟ್‌, ನಥನ್‌ ಕೋಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಜೇಮ್ಸ್‌ ಫಾಕ್ನರ್‌, ಮಾರ್ಕಸ್‌ ಸ್ಟೊಯಿನಿಸ್‌, ಆ್ಯಡಂ ಝಂಪ, ಕೇನ್‌ ರಿಚರ್ಡ್‌ಸನ್‌.

ಆರಂಭ: ಬೆಳಗ್ಗೆ 10.00

Advertisement

Udayavani is now on Telegram. Click here to join our channel and stay updated with the latest news.

Next