Advertisement

ಇಂದಿನಿಂದ ಭಾರತ ಎ- ಆಸ್ಟ್ರೇಲಿಯಾ ಕದನ

03:45 AM Feb 17, 2017 | |

ಮುಂಬೈ: ಅತ್ಯಂತ ಕಠಿಣವೆಂದೇ ಭಾವಿಸಲಾದ ಭಾರತದೆದುರಿನ ಟೆಸ್ಟ್‌ ಸರಣಿಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಶುಕ್ರವಾರದಿಂದ ತ್ರಿದಿನ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳಲಿದೆ. ಇಲ್ಲಿನ “ಬ್ರೆಬೋರ್ನ್ ಮೈದಾನ’ದಲ್ಲಿ ನಡೆಯಲಿರುವ ಈ ಮುಖಾಮುಖೀಯಲ್ಲಿ ಕಾಂಗರೂಗಳ ಎದುರಾಳಿಯಾಗಿ ಕಣಕ್ಕಿಳಿಯುವ ತಂಡ ಹಾರ್ದಿಕ್‌ ಪಾಂಡ್ಯ ನೇತೃತ್ವದ ಭಾರತ “ಎ’. ಇದು ಟೆಸ್ಟ್‌ ಸರಣಿಗೂ ಮುನ್ನ ಸ್ಟೀವನ್‌ ಸ್ಮಿತ್‌ ಪಡೆಗೆ ಲಭಿಸಲಿರುವ ಏಕೈಕ ಅಭ್ಯಾಸ ಪಂದ್ಯ. 4 ಪಂದ್ಯಗಳ ಸರಣಿ ಫೆ. 23ರಿಂದ ಪುಣೆಯಲ್ಲಿ ಆರಂಭವಾಗಲಿದೆ.

Advertisement

ಆಸ್ಟ್ರೇಲಿಯಾ ಎಷ್ಟೇ ಬಲಿಷ್ಠ ಹಾಗೂ ಅಪಾಯಕಾರಿ ತಂಡವಾದರೂ ಭಾರತೀಯ ಉಪಖಂಡಕ್ಕೆ ಬಂದಿಳಿದೊಡನೆ ಮಂಕಾಗುತ್ತದೆ. ಇದಕ್ಕೆ ತಾಜಾ ಉದಾಹರಣೆಯೇ ಇದೆ. ಏಷ್ಯಾದಲ್ಲಿ ಕಳೆದ 4 ವರ್ಷಗಳಲ್ಲಿ ಆಡಲಾದ ಎಲ್ಲ 9 ಟೆಸ್ಟ್‌ ಪಂದ್ಯಗಳಲ್ಲೂ ಆಸೀಸ್‌ ಸೋತಿದೆ! ಕಳೆದ ಭಾರತ ಪ್ರವಾಸದ ವೇಳೆ 4-0 ವೈಟ್‌ವಾಷ್‌ಗೆ ತುತ್ತಾಗಿದ್ದ ಆಸೀಸ್‌, ಕಳೆದ ವರ್ಷ ಶ್ರೀಲಂಕಾ ಕೈಯಲ್ಲೂ 3-0 ಹೊಡೆತ ತಿಂದಿತ್ತು. ಕ್ರಿಕೆಟ್‌ ಪಂಡಿತರ ಲೆಕ್ಕಾಚಾರದಲ್ಲಿ ಈ ಸಲವೂ ಭಾರತ ಪ್ರವಾಸದ ವೇಳೆ ಆಸೀಸ್‌ಗೆ ಗಂಡಾಂತರ ತಪ್ಪಿದ್ದಲ್ಲ.

ಐಪಿಎಲ್‌ ಅನುಭವ: ಆಸ್ಟ್ರೇಲಿಯಾ ಪಾಲಿನ ಒಂದು ಧನಾತ್ಮಕ ಸಂಗತಿಯೆಂದರೆ ಐಪಿಎಲ್‌. ಭಾರತದ ಈ ಜನಪ್ರಿಯ ಚುಟುಕು ಕ್ರಿಕೆಟ್‌ ಸರಣಿಯಲ್ಲಿ ಕಾಂಗರೂ ನಾಡಿನ ಬಹಳಷ್ಟು ಮಂದಿ ಆಟಗಾರರು ಆಡಿ ಅನುಭವ ಗಳಿಸಿದ್ದಾರೆ. ಇದಕ್ಕೆ ಡೇವಿಡ್‌ ವಾರ್ನರ್‌ ಅವರಿಗಿಂತ ಉತ್ತಮ ಉದಾಹರಣೆ ಬೇಕಿಲ್ಲ. ವಾರ್ನರ್‌ ನಾಯಕತ್ವದಲ್ಲೇ ಕಳೆದ ವರ್ಷ ಸನ್‌ರೈಸರ್ ಹೈದರಾಬಾದ್‌ ಚಾಂಪಿಯನ್‌ ಆದುದನ್ನು ಮರೆಯಲಾದೀತೇ!

ನಾಯಕ ಸ್ಮಿತ್‌, ಆಲ್‌ರೌಂಡರ್‌ಗಳಾದ ಮಾರ್ಷ್‌ ಸಹೋದರು, ಮ್ಯಾಕ್ಸ್‌ವೆಲ್‌, ವೇಗಿ ಸ್ಟಾರ್ಕ್‌ ಅವರೆಲ್ಲ ಐಪಿಎಲ್‌ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದಾರೆ. ಈ ಅನುಭವ ಎಷ್ಟರ ಮಟ್ಟಿಗೆ ನೆರವಿಗೆ ಬಂದೀತೆಂಬುದು ಸಹಜ ಕುತೂಹಲ. ಭಾರತಕ್ಕೆ ಆಗಮಿಸುವ ಮುನ್ನ ಸ್ಮಿತ್‌ ಪಡೆ ದುಬೈ ಟ್ಯಾಕ್‌ಗಳಲ್ಲಿ ಅಭ್ಯಾಸ ನಡೆಸಿತ್ತು. ಇದು ಎಷ್ಟರ ಮಟ್ಟಿಗೆ ಲಾಭ ತಂದೀತೆಂಬ ಕುತೂಹಲವೂ ಇದೆ.

ಪ್ರತಿಭಾನ್ವಿತರ ಪಡೆ: ಭಾರತ “ಎ’ ತಂಡ ಇತ್ತೀಚಿನ ದಿನಗಳಲ್ಲಿ ಕಂಡ ದೇಶದ ಅತ್ಯಂತ ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿದೆ. ಶ್ರೇಯಸ್‌ ಐಯ್ಯರ್‌, ರಿಷಭ್‌ ಪಂತ್‌, ಪ್ರಿಯಾಂಕ್‌ ಪಾಂಚಾಲ್‌, ಅಂಕಿತ್‌ ಭಾವೆ°, ಈಶನ್‌ ಕಿಶನ್‌ ಮೊದಲಾದವರು ಇಲ್ಲಿ ಒಗ್ಗೂಡಿದ್ದಾರೆ. ಟೆಸ್ಟ್‌ ತಂಡಕ್ಕೆ ಆಯ್ಕೆಯಾದ ಹಾರ್ದಿಕ್‌ ಪಾಂಡ್ಯ, ಎಡಗೈ ಲೆಗ್‌ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಕೂಡ ಈ ತಂಡದಲ್ಲಿದ್ದಾರೆ. ಏಕೈಕ ಅನುಭವಿಯೆಂದರೆ ವೇಗಿ ಅಶೋಕ್‌ ದಿಂಡಾ.

Advertisement

ಪ್ರಸಕ್ತ ರಣಜಿಯಲ್ಲಿ ಸರ್ವಾಧಿಕ 56 ವಿಕೆಟ್‌ ಉಡಾಯಿಸಿದ ಆಫ್ಸ್ಪಿನ್ನರ್‌ ಶಹಬಾಜ್‌ ನದೀಂ, 41 ವಿಕೆಟ್‌ ಉರುಳಿಸಿದ ಮಧ್ಯಮ ವೇಗಿ ಮೊಹಮ್ಮದ್‌ ಸಿರಾಜ್‌, 17 ಪಂದ್ಯಗಳಿಂದ 50 ಪ್ರಥಮ ದರ್ಜೆ ವಿಕೆಟ್‌ ಕಿತ್ತ ನವದೀಪ್‌ ಸೈನಿ, ಕರ್ನಾಟಕದ ಸ್ಪಿನ್‌ ಬೌಲಿಂಗ್‌ ಆಲೌರೌಂಡರ್‌ ಕೃಷ್ಣಪ್ಪ ಗೌತಮ್‌ ಅವರೆಲ್ಲ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಬ್ರೆಬೋರ್ನ್ ಮೈದಾನ ಪಿಚ್‌ ಬ್ಯಾಟ್ಸ್‌ಮನ್‌ಗಳಿಗೆ ಧಾರಾಳ ನೆರವು ನೀಡುವ ಸಾಧ್ಯತೆ ಇದೆ.

ತಂಡಗಳು
ಭಾರತ
“ಎ’: ಹಾರ್ದಿಕ್‌ ಪಾಂಡ್ಯ (ನಾಯಕ), ಅಖೀಲ್‌ ಹೆರ್ವಾಡ್ಕರ್‌, ಪ್ರಿಯಾಂಕ್‌ ಪಾಂಚಾಲ್‌, ಶ್ರೇಯಸ್‌ ಐಯ್ಯರ್‌, ಅಂಕಿತ್‌ ಭಾವೆ°, ರಿಷಭ್‌ ಪಂತ್‌, ಈಶನ್‌ ಕಿಶನ್‌ (ವಿ.ಕೀ.), ಶಹಬಾಜ್‌ ನದೀಂ, ಕೆ.ಗೌತಮ್‌, ಕುಲದೀಪ್‌ ಯಾದವ್‌, ನವದೀಪ್‌ ಸೈನಿ, ಅಶೋಕ್‌ ದಿಂಡಾ, ಮೊಹಮ್ಮದ್‌ ಸಿರಾಜ್‌, ರಾಹುಲ್‌ ಸಿಂಗ್‌, ಬಾಬಾ ಇಂದ್ರಜಿತ್‌.

ಆಸ್ಟ್ರೇಲಿಯಾ: ಸ್ಟೀವನ್‌ ಸ್ಮಿತ್‌ (ನಾಯಕ), ಡೇವಿಡ್‌ ವಾರ್ನರ್‌, ಮ್ಯಾಟ್‌ ರೆನ್‌ಶಾ, ಉಸ್ಮಾನ್‌ ಖವಾಜಾ, ಶಾನ್‌ ಮಾರ್ಷ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಮಿಚೆಲ್‌ ಮಾರ್ಷ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಮ್ಯಾಥ್ಯೂ ವೇಡ್‌, ಮಿಚೆಲ್‌ ಸ್ಟಾರ್ಕ್‌, ಜೋಶ್‌ ಹೇಜಲ್‌ವುಡ್‌, ಜಾಕ್ಸನ್‌ ಬರ್ಡ್‌, ನಥನ್‌ ಲಿಯೋನ್‌, ಸ್ಟೀವನ್‌ ಓ’ಕೀಫ್, ಆ್ಯಶrನ್‌ ಆ್ಯಗರ್‌, ಮಿಚೆಲ್‌ ಸೆಪ್ಸನ್‌.

Advertisement

Udayavani is now on Telegram. Click here to join our channel and stay updated with the latest news.

Next