ಕ್ಯಾನ್ ಬೆರಾ: ಮೊದಲ ಟಿ20 ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾ ವಿರುದ್ಧ 11 ರನ್ ಗಳಿಂದ ಭರ್ಜರಿ ಜಯಗಳಿಸಿದೆ. ಭಾರತ ನೀಡಿದ 162 ರನ್ ಗಳ ಗುರಿ ಬೆನ್ನತ್ತಿದ ಫಿಂಚ್ ಪಡೆ 20 ಓವರ್ ಗಳಲ್ಲಿ 150 ರನ್ ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.
ಆರಂಭಿಕರಾಗಿ ಕಣಕ್ಕಿಳಿದ ನಾಯಕ ಫಿಂಚ್ ಮತ್ತು ಡಿ ಆರ್ಸಿ ಶಾರ್ಟ್ ತಂಡಕ್ಕೆ ಭದ್ರಬುನಾದಿಯನ್ನು ಹಾಕಿಕೊಟ್ಟರು. ಭಾರತೀಯ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಮೊದಲ ವಿಕೆಟ್ ಗೆ 56 ರನ್ ಗಳ ಜೊತೆಯಾಟ ನಡೆಸಿತು. ಈ ವೇಳೆ 1 ಸಿಕ್ಸರ್ ಮತ್ತು 5 ಬೌಂಡರಿಗಳ ಮೂಲಕ 35 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ಫಿಂಚ್, ಚಹಾಲ್ ಬೌಲಿಂಗ್ ನಲ್ಲಿ ಪಾಂಡ್ಯಾಗೆ ಕ್ಯಾಚಿತ್ತು ಹೊರನಡೆದರು.
ನಂತರ ಬಂದ ಸ್ಟೀವನ್ ಸ್ಮಿತ್ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. 1 ಭರ್ಜರಿ ಸಿಕ್ಸರ್ ಮೂಲಕ 12 ರನ್ ಗಳಿಸಿದ್ದ ವೇಳೆ ಚಹಾಲ್ ಬೌಲಿಂಗ್ ನಲ್ಲಿ ಸ್ಯಾಮ್ಸನ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ಸೇರಿದರು. ಮ್ಯಾಕ್ಸ್ ವೇಲ್ (2) ಒಂದಂಕಿ ದಾಟುವ ಮೊದಲೇ, ಪದಾರ್ಪಣೆ ಪಂದ್ಯವಾಡುತ್ತಿರುವ ನಟರಾಜನ್ ಬೌಲಿಂಗ್ ನಲ್ಲಿ ಎಲ್ ಬಿ ಬಲೆಗೆ ಬಿದ್ದರು.
ತಾಳ್ಮೆಯ ಆಟಕ್ಕೆ ಮೊರೆಹೋಗಿದ್ದ ಡಿ ಶಾರ್ಟ್, 3 ಬೌಂಡರಿಗಳ ಮೂಲಕ 34 ರನ್ ಪೇರಿಸಿದ್ದಾಗ, ನಟರಾಜನ್ ಮೋಡಿಗೆ ಪಾಂಡ್ಯಾಗೆ ಕ್ಯಾಚ್ ನೀಡಿದರು. ವಿಕೆಟ್ ಕೀಪರ್ ಮ್ಯಾಥ್ಯು ಹೇಡ್ 7 ರನ್ ಗಳಿಸಿ ಅಲ್ಪ ಮೊತ್ತಕ್ಕೆ ಔಟಾದರು. ಮೋಯಿಸ್ ಹೆನ್ರಿಕ್ಯೂಸ್ 30 ರನ್ ಗಳಿಸಿದರೇ, ಮಿಚೆಲ್ ಸ್ಟಾರ್ಕ್ 1 ರನ್ ಗಳಿಸಿದರು.
ಇದನ್ನೂ ಓದಿ: ನಾನು ಕಾಂಗ್ರೆಸ್ ಸೇರಲು ರಾಜ್ಯದ ಯಾವ ಕಾಂಗ್ರೆಸ್ ನಾಯಕರು ಕಾರಣರಲ್ಲ: ಸಿದ್ದರಾಮಯ್ಯ
ಸೀನ್ ಅಬೋಟ್ ಮತ್ತು ಮಿಚೆಲ್ ಸ್ವೆಪ್ಸನ್ ತಲಾ 12 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಆಸ್ಟ್ರೇಲಿಯಾ ಪಡೆ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿ, 11 ರನ್ ಗಳಿಂದ ಸೋಲನ್ನಪ್ಪಿತ್ತು.
ರವೀಂದ್ರ_ಜಡೇಜಾ ಗಾಯಾಳುವಾಗಿ ಹೊರನಡೆದಿದ್ದರಿಂದ ಕಂಕಷನ್ ರೂಲ್ ಪ್ರಕಾರ ತಂಡ ಸೇರಿದ ಯಜುವೇಂದ್ರ ಚಹಾಲ್ ಮೂರು ವಿಕೆಟ್ ಪಡೆದರು. ಪದಾರ್ಪಣೆ ಪಂದ್ಯದಲ್ಲಿ ಬೊಂಬಾಟ್ ಬೌಲಿಂಗ್ ಮಾಡಿದ ನಟರಾಜನ್ ಕೂಡ 3 ವಿಕೆಟ್ ಪಡೆದು ಮಿಂಚಿದರು. ದೀಪಕ್ ಚಹಾರ್ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಧವನ್ ಕೇವಲ 1 ರನ್ ಗಳಿಸಿ ಸ್ಟಾರ್ಕ್ ಗೆ ವಿಕೆಟ್ ಒಪ್ಪಿಸಿದರೇ, ನಾಯಕ ಕೊಹ್ಲಿ 9 ರನ್ ಗಳಿಸಿ ಸ್ವೆಪ್ಸನ್ ಎಸೆತದಲ್ಲಿ ಕ್ಯಾಚ್ ನೀಡಿ ಹೊರನಡೆದರು.
ಇದನ್ನೂ ಓದಿ: ಬೆಳಗಾವಿ ಜಿಲ್ಲೆ ವಿಭಜನೆ ಅತ್ಯಂತ ಅವಶ್ಯಕ: ಸಚಿವ ರಮೇಶ್ ಜಾರಕಿಹೊಳಿ
ಮನಮೋಹಕ ಆಟವಾಡಿದ ಕೆ.ಎಲ್ ರಾಹುಲ್ (51) ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಭಾರತದ ಮಧ್ಯಮ ಕ್ರಮಾಂಕದಲ್ಲಿ ಯಾರು ಕೂಡ ಹೆಚ್ಚು ಹೊತ್ತು ಆರ್ಭಟಿಸಲಿಲ್ಲ. ಸ್ಯಾಮ್ಸನ್ 23 ರನ್ ಗಳಿಸಿದರೆ, ಪಾಂಡೆ 2 ರನ್ ಗಳಿಸಿ ನಿರ್ಗಮಿಸಿದರು. ಹಾರ್ದಿಕ್ ಪಾಂಡ್ಯ ಮತ್ತು ವಾಷಿಂಗ್ಟನ್ ಸುಂದರ್ ಕ್ರಮವಾಗಿ 16 ಮತ್ತು 7 ರನ್ ಗಳಿಸಿದರೇ, ಏಕದಿನ ಪಂದ್ಯದ ಹೀರೋ ಜಡೇಜಾ 1 ಸಿಕ್ಸರ್ ಮತ್ತು5 ಬೌಂಡರಿಗಳ ಮೂಲಕ 44 ರನ್ ಗಳಿಸಿ ಅಜೇಯರಾಗಿ ಉಳಿದರು.
ಅಂತಿಮವಾಗಿ ಭಾರತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತ್ತು.
ಆಸ್ಟ್ರೇಲಿಯಾ ಪರ, ಹೆನ್ರಿಕ್ಯೂಸ್ 3 ವಿಕೆಟ್ ಪಡೆದು ಮಿಂಚಿದರು. ಸ್ಟಾರ್ಕ್ 2 ವಿಕೆಟ್ ಗಳಿಸಿದರೇ, ಝಾಂಪ ಮತ್ತು ಸ್ವೆಪ್ಸನ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ಮೇಘಾಲಯದಲ್ಲಿ ಭರ್ಜರಿ ಬೇಟೆ:1,525ಕೆಜಿ ಸ್ಫೋಟಕ, 6000 ಡಿಟೋನೇಟರ್ಸ್ಸ್ ಪತ್ತೆ, 6 ಮಂದಿ ಸೆರೆ