Advertisement

ಅಫ್ಘಾನ್‌ ಕನಸಿನ ಓಟಕ್ಕೆ ತೆರೆ ಪ್ರಶಸ್ತಿ ಸುತ್ತಿಗೆ ಆಸೀಸ್‌ ಪ್ರವೇಶ

06:15 AM Jan 30, 2018 | Team Udayavani |

ಕ್ರೈಸ್ಟ್‌ಚರ್ಚ್‌: ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಅಫ್ಘಾನಿಸ್ಥಾನದ ಕನಸಿನ ಓಟ ಸೆಮಿಫೈನಲ್‌ನಲ್ಲಿ ಕೊನೆಗೊಂಡಿದೆ. ಸೋಮವಾರದ ಬಹು ನಿರೀಕ್ಷೆಯ ಸೆಣಸಾಟದಲ್ಲಿ 3 ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯ 6 ವಿಕೆಟ್‌ಗಳಿಂದ ಅಫ್ಘಾನ್‌ ಪಡೆಯನ್ನು ಉರುಳಿಸಿತು.

Advertisement

ಮಂಗಳವಾರ ಭಾರತ-ಪಾಕಿಸ್ಥಾನ ತಂಡಗಳ ನಡುವೆ ದ್ವಿತೀಯ ಸೆಮಿಫೈನಲ್‌ ಪಂದ್ಯ ಜರಗಲಿದ್ದು, ಇಲ್ಲಿ ಗೆದ್ದ ತಂಡವನ್ನು ಆಸ್ಟ್ರೇಲಿಯ ಫೆ. 3ರ ಪ್ರಶಸ್ತಿ ಸುತ್ತಿನಲ್ಲಿ ಎದುರಿಸಲಿದೆ. ಮೌಂಟ್‌ ಮಾಂಗನಿ ಈ ಪಂದ್ಯದ ಆತಿಥ್ಯ ವಹಿಸಲಿದೆ.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ನಡೆಸಿದ ಅಫ್ಘಾನಿಸ್ಥಾನ ನಿರೀಕ್ಷಿಸಿದಷ್ಟು ಮೊತ್ತವನ್ನು ಪೇರಿಸಲು ವಿಫ‌ಲವಾಯಿತು. ಕಾಂಗರೂ ಬೌಲರ್‌ಗಳ ಸಾಂ ಕ ದಾಳಿಗೆ ಸಿಲುಕಿ 48 ಓವರ್‌ಗಳಲ್ಲಿ 181 ರನ್ನಿಗೆ ಆಲೌಟ್‌ ಆಯಿತು. ಚೇಸಿಂಗ್‌ ಮಾಡಿದ ಕಾಂಗರೂ ಕಿರಿಯರು 37.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 182 ರನ್‌ ಬಾರಿಸಿ ಫೈನಲ್‌ಗೆ ಲಗ್ಗೆ ಇರಿಸಿದರು.

ಆಸೀಸ್‌ಗೆ 4ನೇ ಫೈನಲ್‌
ಇದು ಆಸ್ಟ್ರೇಲಿಯ ಕಾಣುತ್ತಿರುವ 4ನೇ ಅಂಡರ್‌-19 ವಿಶ್ವಕಪ್‌ ಕ್ರಿಕೆಟ್‌ ಫೈನಲ್‌. 1988, 2002 ಮತ್ತು 2010ರಲ್ಲಿ ಚಾಂಪಿಯನ್‌ ಆಗಿ ಮೂಡಿಬಂದ ಆಸ್ಟ್ರೇಲಿಯ, 2012ರ ಫೈನಲ್‌ನಲ್ಲಿ ಭಾರತಕ್ಕೆ 6 ವಿಕೆಟ್‌ಗಳಿಂದ ಶರಣಾಗಿತ್ತು. ಇನ್ನೊಂದೆಡೆ ಸೆಮಿಫೈನಲ್‌ ಪ್ರವೇಶಿಸಿದ್ದೇ ಅಫ್ಘಾನಿಸ್ಥಾನದ ಅತ್ಯುತ್ತಮ ಸಾಧನೆಯಾಗಿದೆ.

ಕ್ವಾರ್ಟರ್‌ ಫೈನಲ್‌ನಲ್ಲಿ ನ್ಯೂಜಿಲ್ಯಾಂಡ್‌ ಎದುರು ತೋರ್ಪಡಿಸಿದಂಥ ಜೋಶ್‌ ಅನ್ನು ಆಸೀಸ್‌ ಎದುರಿನ ಸೆಮಿಫೈನಲ್‌ನಲ್ಲಿ ತೋರುವಲ್ಲಿ ಅಫ್ಘಾನ್‌ ವಿಫ‌ಲವಾಯಿತು. ವನ್‌ಡೌನ್‌ನಲ್ಲಿ ಬಂದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಇಕ್ರಮ್‌ ಅಲಿ ಖೀಲ್‌ ಏಕಾಂಗಿಯಾಗಿ ಹೋರಾಡಿ 80 ರನ್‌ ಬಾರಿಸಿದ್ದನ್ನು ಹೊರತುಪಡಿಸಿದರೆ ಉಳಿದವರಿಗೆ ಕಾಂಗರೂ ದಾಳಿಯನ್ನು ತಡೆದು ನಿಲ್ಲಲಾಗಲಿಲ್ಲ. ಖೀಲ್‌ 119 ಎಸೆತ ನಿಭಾಯಿಸಿ 80 ರನ್‌ ಹೊಡೆದರು. ಇದರಲ್ಲಿ 8 ಬೌಂಡರಿ ಸೇರಿತ್ತು. ಉಳಿದವರ್ಯಾರೂ ಒಂದಕ್ಕಿಂತ ಹೆಚ್ಚು ಬೌಂಡರಿ ಹೊಡೆಯಲಿಲ್ಲ. ಖೀಲ್‌ ಹೊರತುಪಡಿಸಿದರೆ 20 ರನ್‌ ಮಾಡಿದ ಆರಂಭಕಾರ ರೆಹಮಾನುಲ್ಲ ಗುರ್ಬಜ್‌ ಅವರದೇ ಹೆಚ್ಚಿನ ಗಳಿಕೆ. ಬೌಲಿಂಗ್‌ ದಾಳಿಗಿಳಿದ 7 ಮಂದಿ ಆಸೀಸ್‌ ಬೌಲರ್‌ಗಳಲ್ಲಿ 6 ಮಂದಿ ಯಶಸ್ಸು ಸಂಪಾದಿಸಿದರು. ಮಧ್ಯಮ ವೇಗಿ ಜೊನಾಥನ್‌ ಮೆರ್ಲೊ 24ಕ್ಕೆ 4 ವಿಕೆಟ್‌ ಕಿತ್ತರು.

Advertisement

ಆಸೀಸ್‌ ನೆರವಿಗೆ ಎಡ್ವರ್ಡ್ಸ್‌
ಚೇಸಿಂಗ್‌ ವೇಳೆ ಆರಂಭಕಾರ ಜಾಕ್‌ ಎಡ್ವರ್ಡ್ಸ್‌ ಆಸ್ಟ್ರೇಲಿಯದ ಸರದಿಯನ್ನು ಬೆಳೆಸತೊಡಗಿದರು. 25 ಓವರ್‌ ತನಕ ಕ್ರೀಸಿನಲ್ಲಿ ಉಳಿದ ಎಡ್ವರ್ಡ್ಸ್‌ 65 ಎಸೆತಗಳಿಂದ 72 ರನ್‌ ಬಾರಿಸಿದರು (8 ಬೌಂಡರಿ, 2 ಸಿಕ್ಸರ್‌). ಮತ್ತೂಬ್ಬ ಓಪನರ್‌ ಮ್ಯಾಕ್ಸ್‌ ಬ್ರಿಯಾಂಟ್‌ ನಾಲ್ಕೇ ರನ್ನಿಗೆ ಔಟಾಗಿದ್ದರು. ನಾಯಕ ಜಾಸನ್‌ ಸಂಗ 26, ಜೊನಾಥನ್‌ ಮೆರ್ಲೊ 17, ಪವನ್‌ ಉಪ್ಪಲ್‌ ಔಟಾಗದೆ 32 ಹಾಗೂ ನಥನ್‌ ಮೆಕ್‌ಸ್ವೀನಿ ಔಟಾಗದೆ 22 ರನ್‌ ಮಾಡಿದರು. ಉಪ್ಪಲ್‌-ಮೆಕ್‌ಸ್ವೀನಿ ಜೋಡಿಯಿಂದ ಮುರಿಯದ 5ನೇ ವಿಕೆಟಿಗೆ 53 ರನ್‌ ಒಟ್ಟುಗೂಡಿತು. ಇನ್ನೂ 75 ಎಸೆತ ಬಾಕಿ ಇರುವಾಗಲೇ ಆಸ್ಟ್ರೇಲಿಯ ಗೆಲುವಿನ ಬಾವುಟ ಹಾರಿಸಿತು. ಅಫ್ಘಾನ್‌ ಲೆಗ್‌ಸ್ಪಿನ್ನರ್‌ ಕೈಸ್‌ ಅಹ್ಮದ್‌ 2 ವಿಕೆಟ್‌ ಉರುಳಿಸಿದರು. ಐಪಿಎಲ್‌ ಹರಾಜಿನಲ್ಲಿ ಪಂಜಾಬ್‌ ತಂಡದ ಪಾಲಾದ ಮುಜೀಬ್‌ ಜದ್ರಾನ್‌ ಮೇಲೆ ಹೆಚ್ಚಿನ ನಿರೀಕ್ಷೆ ಇತ್ತು. ಅವರು ಔಟಾಗದೆ 12 ರನ್‌ ಜತೆಗೆ ಒಂದು ವಿಕೆಟ್‌ ಉರುಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಅಫ್ಘಾನಿಸ್ಥಾನ-48 ಓವರ್‌ಗಳಲ್ಲಿ 181 (ಖೀಲ್‌ 80, ಗುರ್ಬಜ್‌ 20, ಮುಜೀಬ್‌ 12, ಮೆರ್ಲೊ 24ಕ್ಕೆ 4, ಇವಾನ್ಸ್‌ 26ಕ್ಕೆ 2). ಆಸ್ಟ್ರೇಲಿಯ-37.3 ಓವರ್‌ಗಳಲ್ಲಿ 4 ವಿಕೆಟಿಗೆ 182 (ಎಡ್ವರ್ಡ್ಸ್‌ 72, ಉಪ್ಪಲ್‌ ಅಜೇಯ 32, ಸಂಗ 26, ಮೆಕ್‌ಸ್ವೀನಿ ಅಜೇಯ 22, ಕೈಸ್‌ ಅಹ್ಮದ್‌ 35ಕ್ಕೆ 2). ಪಂದ್ಯಶ್ರೇಷ್ಠ: ಜಾಕ್‌ ಎಡ್ವರ್ಡ್ಸ್‌.

Advertisement

Udayavani is now on Telegram. Click here to join our channel and stay updated with the latest news.

Next