Advertisement

ಆಸೀಸ್‌ ಶರಣು ಕಿವೀಸ್‌ಗೆ ಸರಣಿ

03:45 AM Feb 06, 2017 | Harsha Rao |

ಹ್ಯಾಮಿಲ್ಟನ್‌: ರಾಸ್‌ ಟಯ್ಲರ್‌ ಅವರ ದಾಖಲೆ ಶತಕ, ಟ್ರೆಂಟ್‌ ಬೌಲ್ಟ್ ಅವರ ಜೀವನಶ್ರೇಷ್ಠ ಬೌಲಿಂಗ್‌ ಸಾಹಸದಿಂದ ಹ್ಯಾಮಿಲ್ಟನ್‌ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಕ್ಕೆ 24 ರನ್‌ ಸೋಲುಣಿಸಿದ ಆತಿಥೇಯ ನ್ಯೂಜಿಲ್ಯಾಂಡ್‌ “ಚಾಪೆಲ್‌-ಹ್ಯಾಡ್ಲಿ ಟ್ರೋಫಿ’ಯನ್ನು ಮರಳಿ ಗಳಿಸಿದೆ.

Advertisement

ರವಿವಾರ ಇಲ್ಲಿನ “ಸೆಡ್ಡನ್‌ ಪಾರ್ಕ್‌’ನಲ್ಲಿ ನಡೆದ 3ನೇ ಹಾಗೂ ಅಂತಿಮ ಮುಖಾಮುಖೀಯಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲ್ಯಾಂಡ್‌ 9 ವಿಕೆಟಿಗೆ 281 ರನ್‌ ಪೇರಿಸಿದರೆ, ಆಸ್ಟ್ರೇಲಿಯ 47 ಓವರ್‌ಗಳಲ್ಲಿ 257ಕ್ಕೆ ಆಲೌಟ್‌ ಆಯಿತು. ಇದು ತವರಿನಲ್ಲಿ ನ್ಯೂಜಿಲ್ಯಾಂಡ್‌ ಗೆದ್ದ ಸತತ 8ನೇ ದ್ವಿಪಕ್ಷೀಯ ಸರಣಿ.

ನ್ಯೂಜಿಲ್ಯಾಂಡ್‌ ಪರ ರಾಸ್‌ ಟಯ್ಲರ್‌ 107 ರನ್‌ ಬಾರಿಸಿ ಮಿಂಚಿ ದರು. ಇದು ಅವರ 16ನೇ ಶತಕ. ಇದರೊಂದಿಗೆ ನ್ಯೂಜಿಲ್ಯಾಂಡ್‌ ಪರ ಸರ್ವಾಧಿಕ 16 ಸೆಂಚುರಿ ಹೊಡದ ನಥನ್‌ ಆ್ಯಸ್ಲೆ ದಾಖಲೆಯನ್ನು ಟಯ್ಲರ್‌ ಸರಿದೂಗಿಸಿದರು. ಅವರ 107 ರನ್‌ 101 ಎಸೆತಗಳಿಂದ ಬಂತು. 13 ಸಲ ಚೆಂಡು ಬೌಂಡರಿ ದಾಟಿತು. 

ಕಿವೀಸ್‌ ಬೌಲಿಂಗ್‌ ಸರದಿಯಲ್ಲಿ ಘಾತಕ ಪ್ರದರ್ಶನವಿತ್ತವರು ವೇಗಿ ಟ್ರೆಂಟ್‌ ಬೌಲ್ಟ್. ಅವರು 33 ರನ್‌ ವೆಚ್ಚದಲ್ಲಿ 6 ವಿಕೆಟ್‌ ಉಡಾಯಿಸಿದರು. ಇದು ಬೌಲ್ಟ್ ಅವರ ಜೀವನಶ್ರೇಷ್ಠ ಬೌಲಿಂಗ್‌ ಸಾಧನೆ. ಈ ಸಾಹಸಕ್ಕಾಗಿ ಅವರು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ದ್ವಿತೀಯ ಪಂದ್ಯ ಮಳೆಯಿಂದ ರದ್ದಾದರಿಂದ ಸರಣಿ ಸಮಬಲಗೊಳಿ ಸಲು ಆಸ್ಟ್ರೇಲಿಯ ಈ ಪಂದ್ಯವನ್ನು ಗೆಲ್ಲಲೇಬೇಕಿತ್ತು. ನಾಯಕ ಆರನ್‌ ಫಿಂಚ್‌ (56), ಮಧ್ಯಮ ಕ್ರಮಾಂಕ ದಲ್ಲಿ ಬಂದ ಟ್ರ್ಯಾವಿಸ್‌ ಹೆಡ್‌ (53), ಮೊದಲ ಪಂದ್ಯದ ಹೀರೋ ಸ್ಟೊಯಿನಿಸ್‌ (42), ಬೌಲರ್‌ಗಳಾದ ಕಮಿನ್ಸ್‌ (27) ಹಾಗೂ ಸ್ಟಾರ್ಕ್‌ (ಔಟಾಗದೆ 29) ಉತ್ತಮ ಹೋರಾಟ ನಡೆಸಿದರೂ ಬೌಲ್ಟ್ ಬಿರುಗಾಳಿಯ ಮುಂದೆ ಕಾಂಗರೂಗಳಿಗೆ ನೆಲೆ ಸಿಗಲಿಲ್ಲ. ಹ್ಯಾಂಡ್ಸ್‌ಕಾಂಬ್‌, ಮ್ಯಾಕ್ಸ್‌ ವೆಲ್‌ ಮತ್ತು ಫಾಕ್ನರ್‌ ಶೂನ್ಯಕ್ಕೆ ಔಟಾದದ್ದು ಆಸೀಸ್‌ಗೆ ಕಂಟಕವಾಗಿ ಪರಿಣಮಿಸಿತು.

Advertisement

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲ್ಯಾಂಡ್‌-9 ವಿಕೆಟಿಗೆ 281 (ಟಯ್ಲರ್‌ 107, ಬ್ರೌನ್‌ಲೀ 63, ಸ್ಯಾಂಟ್ನರ್‌ ಔಟಾಗದೆ 38, ಫಾಕ್ನರ್‌ 59ಕ್ಕೆ 3, ಸ್ಟಾರ್ಕ್‌ 63ಕ್ಕೆ 3). ಆಸ್ಟ್ರೇಲಿಯ-47 ಓವರ್‌ಗಳಲ್ಲಿ 257 (ಫಿಂಚ್‌ 56, ಹೆಡ್‌ 53, ಸ್ಟೊಯಿನಿಸ್‌ 42, ಬೌಲ್ಟ್ 33ಕ್ಕೆ 6, ಸ್ಯಾಂಟ್ನರ್‌ 50ಕ್ಕೆ 2).

ಮೂರಕ್ಕೇರಿದ ನ್ಯೂಜಿಲ್ಯಾಂಡ್‌
ಸರಣಿ ಗೆಲುವಿನ ಸಾಧನೆ ಯೊಂದಿಗೆ ನ್ಯೂಜಿಲ್ಯಾಂಡ್‌ ಐಸಿಸಿ ತಂಡ ರ್‍ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೆ ನೆಗೆಯಿತು. ಅಗ್ರಸ್ಥಾನಿ ಆಸ್ಟ್ರೇಲಿಯವನ್ನು ದಕ್ಷಿಣ ಆಫ್ರಿಕಾ ಬೆನ್ನಟ್ಟಿಕೊಂಡು ಬಂದಿದೆ. ಎರಡೂ 118 ಅಂಕಗಳೊಂದಿಗೆ ಸಮಬಲ ಸ್ಥಿತಿಯಲ್ಲಿವೆ. ದಶಮಾಂಶ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯವೇ ನಂಬರ್‌ ವನ್‌ ಸ್ಥಾನದಲ್ಲಿ ಉಳಿದುಕೊಂಡಿದೆ. ಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ಇನ್ನೂ 2 ಪಂದ್ಯಗಳನ್ನು ಆಡಲಿದ್ದು, ಇಲ್ಲಿ ಗೆದ್ದರೆ ಹರಿಣಗಳ ಪಡೆ ವಿಶ್ವದ ಅಗ್ರಮಾನ್ಯ ಏಕದಿನ ತಂಡವಾಗಿ ಹೊರಹೊಮ್ಮಲಿದೆ.

Advertisement

Udayavani is now on Telegram. Click here to join our channel and stay updated with the latest news.

Next