ಸಿಡ್ನಿ: ಭಾರತ ತಂಡ ಇದೇ ವರ್ಷಾಂತ್ಯಕ್ಕೆ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಸಲುವಾಗಿ ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿದೆ.
ಈ ವೇಳೆ ಟೂರ್ನಿಯಲ್ಲಿ ಆಸೀಸ್ ಆಟಗಾರರು ಯಾವುದೇ ಕಾರಣಕ್ಕೂ ವಿರಾಟ್ ಕೊಹ್ಲಿ ಅವರನ್ನು ಸ್ಲೆಡ್ಜಿಂಗ್ ಮೂಲಕ ಕೆಣಕದಂತೆ ಆತಿಥೇಯ ತಂಡದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಎಚ್ಚರಿಕೆ ಸಂದೇಶವೊಂದನ್ನು ನೀಡಿದ್ದಾರೆ.
‘ಕೊಹ್ಲಿಯನ್ನು ಕೆಣಕುವೂದೂ ಒಂದೇ ಮಲಗಿರುವ ಕರಡಿಯನ್ನು ಚುಚ್ಚಿ ಎಬ್ಬಿಸುವುದೂ ಒಂದೇ.
ಇದರಿಂದ ಕೊಹ್ಲಿ ಮತ್ತಷ್ಟು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುವ ಸಾಧ್ಯತೆ ಇದೆ’ ಎಂದು ವಾರ್ನರ್ ತಿಳಿಸಿದ್ದಾರೆ.
ಕೋವಿಡ್ ಸೋಂಕು ನಿಯಂತ್ರಣಕ್ಕೆ ಬಂದು ಎಂದಿನಂತೆ ಕ್ರಿಕೆಟ್ ಚಟುವಟಿಕೆ ಆರಂಭವಾಗುವುದನ್ನು ಎದುರು ನೋಡುತಿದ್ದೇನೆ ಈಗಾಗಲೇ ಟೆಸ್ಟ್ ಕ್ರಿಕೆಟ್ ಸರಣಿ ಸಲುವಾಗಿ ಆಸ್ಟ್ರೇಲಿಯ ಕ್ರಿಕೆಟ್ ಮಂಡಳಿ ವೇಳಾಪಟ್ಟಿಯನ್ನು ಕೂಡ ಬಿಡುಗಡೆ ಮಾಡಿದೆ.
ಟೀಮ್ ಇಂಡಿಯಾ ಡಿ.3ರಂದು ಆಸೀಸ್ ಎದುರು ಮೊದಲ ಟೆಸ್ಟ್ ಆಡಲಿದೆ. ಬಹು ನಿರೀಕ್ಷೆಯ ಸರಣಿ ಇದಾಗಿದ್ದು, ನಾನಂತೂ ಕಾತುರದಿಂದ ಎದುರು ನೋಡುತ್ತಿದ್ದೇನೆ ಎಂದು ಸಂದರ್ಶನವೊಂದರಲ್ಲಿ ವಾರ್ನರ್ ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
2018-19ರಲ್ಲಿ ಭಾರತ ತಂಡ ಆಸ್ಟ್ರೇಲಿಯ ಪ್ರವಾಸ ಕೈಗೊಂಡಿದ್ದ ವೇಳೆ 4 ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ಅಂತರದಲ್ಲಿ ಗೆದ್ದು, ಕಾಂಗರೂ ನಾಡಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಮೊತ್ತ ಮೊದಲ ತಂಡವೆಂಬ ಇತಿಹಾಸ ಬರೆದಿತ್ತು. ಅಷ್ಟೇ ಅಲ್ಲದೆ ಭಾರತ ತಂಡ 71 ವರ್ಷಗಳಲ್ಲಿ ಇದೇ ಮೊದಲ ಬಾರಿ ಆಸೀಸ್ ವಿರುದ್ಧ ಅರದ್ದೇ ನೆಲದಲ್ಲಿ ಟೆಸ್ಟ್ ಸರಣಿ ಜಯ ದಾಖಲಿಸಿತ್ತು.