Advertisement

ಸೂಪರ್‌-12 ಸುತ್ತಿಗೆ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌ ಚಾಲನೆ

11:28 PM Oct 21, 2022 | Team Udayavani |

ಸಿಡ್ನಿ: ಟಿ20 ವಿಶ್ವಕಪ್‌ ಪಂದ್ಯಾವಳಿಯ ಪ್ರಧಾನ ಸುತ್ತಾಗಿರುವ “ಸೂಪರ್‌-12′ ಹಣಾಹಣಿಗೆ ಶನಿವಾರ ಚಾಲನೆ ಲಭಿಸಲಿದೆ. ಆತಿಥೇಯ ಹಾಗೂ ಹಾಲಿ ಚಾಂಪಿಯನ್‌ ಎಂಬ ಎರಡೆರಡು ಒತ್ತಡವನ್ನು ಹೊತ್ತಿರುವ ಆಸ್ಟ್ರೇಲಿಯ ಸಿಡ್ನಿಯಲ್ಲಿ ನಡೆಯುವ ಮೊದಲ ಪಂದ್ಯದಲ್ಲಿ ನೆರೆಯ ಎದುರಾಳಿ ನ್ಯೂಜಿಲ್ಯಾಂಡ್‌ ವಿರುದ್ಧ ಆಡಲಿದೆ.

Advertisement

ಪರ್ತ್‌ನಲ್ಲಿ ಸಾಗುವ ಇನ್ನೊಂದು ಮುಖಾಮುಖಿಯಲ್ಲಿ ಇಂಗ್ಲೆಂಡ್‌ ಮತ್ತು ಅಫ್ಘಾನಿಸ್ಥಾನ ತಂಡಗಳು ಎದುರಾಗಲಿವೆ. ಇವೆರಡೂ ಒಂದನೇ ಗ್ರೂಪ್‌ನ ಪಂದ್ಯಗಳಾಗಿವೆ.

ಶುಕ್ರವಾರ 8 ತಂಡಗಳ ನಡು ವಿನ ಅರ್ಹತಾ ಸುತ್ತಿನ ಸ್ಪರ್ಧೆ ಮುಗಿಯುವುದರೊಂದಿಗೆ ಸೂಪರ್‌- 12 ಹಂತದ ಗ್ರೂಪ್‌ಗಳ ಉಳಿದೆರಡು ತಂಡಗಳ ಆಯ್ಕೆ ಪ್ರಕ್ರಿಯೆ ಪೂರ್ತಿ ಗೊಂಡಿತು. ಅದರಂತೆ ಒಂದನೇ ಗ್ರೂಪ್‌ಗೆ ಶ್ರೀಲಂಕಾ, ಐರ್ಲೆಂಡ್‌; ಎರಡನೇ ಗ್ರೂಪ್‌ಗೆ ನೆದರ್ಲೆಂಡ್ಸ್‌ ಮತ್ತು ಜಿಂಬಾಬ್ವೆ ತಂಡಗಳ ಸೇರ್ಪಡೆಯಾಗಿದೆ.

ಕಳೆದ ಸಲದ ಫೈನಲಿಸ್ಟ್‌
ಈ ಸಲದ ಮೊದಲ ಪಂದ್ಯದಲ್ಲಿ ಸೆಣಸಲಿರುವ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್‌ 2021ರ ಟಿ20 ವಿಶ್ವ ಕಪ್‌ ಫೈನಲಿಸ್ಟ್‌ ತಂಡಗಳೂ ಆಗಿವೆ. ದುಬಾೖಯಲ್ಲಿ ನಡೆದ ಪ್ರಶಸ್ತಿ ಸಮರ ದಲ್ಲಿ ಆರನ್‌ ಫಿಂಚ್‌ ನಾಯಕತ್ವದ ಆಸ್ಟ್ರೇಲಿಯ 8 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡ್‌ಗೆ ಆಘಾತವಿಕ್ಕಿತ್ತು. 4ಕ್ಕೆ 172 ರನ್‌ ಪೇರಿಸಿದರೂ ನ್ಯೂಜಿ ಲ್ಯಾಂಡ್‌ಗೆ ಇದನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಅಂದಿನ ಸೋಲಿಗೆ ನ್ಯೂಜಿಲ್ಯಾಂಡ್‌ ಸೇಡು ತೀರಿಸಿಕೊಂಡು ಕೂಟಕ್ಕೆ ರೋಚಕ ಆರಂಭ ನೀಡೀತೇ ಎಂಬುದೊಂದು ನಿರೀಕ್ಷೆ.

ಈ ಎರಡೂ ತಂಡಗಳು ಅಭ್ಯಾಸ ಪಂದ್ಯದಲ್ಲಿ ಸೋಲನುಭವಿಸಿದ್ದನ್ನು ಮರೆಯುವಂತಿಲ್ಲ. ಆಸ್ಟ್ರೇಲಿಯವನ್ನು ಭಾರತ 6 ರನ್ನುಗಳಿಂದ ಕೆಡವಿದರೆ, ನ್ಯೂಜಿಲ್ಯಾಂಡ್‌ಗೆ ದಕ್ಷಿಣ ಆಫ್ರಿಕಾ 9 ವಿಕೆಟ್‌ಗಳಿಂದ ಆಘಾತವಿಕ್ಕಿತ್ತು. ಈ ಸೋಲಿನಿಂದಲೂ ಇತ್ತಂಡಗಳು ಹೊರಬರಬೇಕಿವೆ.

Advertisement

ನ್ಯೂಜಿಲ್ಯಾಂಡ್‌ಗೆ ಹೋಲಿಸಿದರೆ ಆಸ್ಟ್ರೇಲಿಯ ತಂಡ ಹೆಚ್ಚು ಬಲಿಷ್ಠ ಎಂಬುದರಲ್ಲಿ ಅನುಮಾನವಿಲ್ಲ. ಆಲ್‌ರೌಂಡರ್‌ ಕ್ಯಾಮರಾನ್‌ ಗ್ರೀನ್‌ ಸೇರ್ಪಡೆಯ ಬಳಿಕ ಕಾಂಗರೂ ಪಡೆ ಹೆಚ್ಚು ಅಪಾಯಕಾರಿಯಾಗಿ ಗೋಚರಿಸುತ್ತಿದೆ. ಕೀಪರ್‌ ಜೋಶ್‌ ಇಂಗ್ಲಿಸ್‌ ಗಾಯಾಳಾಗಿ ಹೊರಬಿದ್ದದ್ದು ತಂಡಕ್ಕೆ ಲಾಭ ತರುವ ಸಂಭವವೇ ಜಾಸ್ತಿ. ಆದರೆ ತಂಡದಲ್ಲಿ ಹೆಚ್ಚುವರಿ ಸ್ಪೆಷಲಿಸ್ಟ್‌ ಕೀಪರ್‌ ಇಲ್ಲದಿರು ವುದು ಆಸ್ಟ್ರೇಲಿಯದ ಆತಂಕಕ್ಕೆ ಕಾರಣವಾಗಿದೆ.

ಹಾರ್ಡ್‌ ಹಿಟ್ಟರ್‌ ಟಿಮ್‌ ಡೇವಿಡ್‌ ಪ್ರಚಂಡ ಫಾರ್ಮ್ ನಲ್ಲಿರುವುದು, ಮಿಚೆಲ್‌ ಮಾರ್ಷ್‌ ಸಂಪೂರ್ಣ ಫಿಟ್‌ನೆಸ್‌ಗೆ ಮರಳಿರುವುದು ಆಸೀಸ್‌ಗೆ ಲಾಭದಾಯಕ. ಹೀಗಾಗಿ ಸ್ಟೀವ್‌ ಸ್ಮಿತ್‌ ಅವರಿಗೆ ಜಾಗ ಸಿಗುವುದು ಅನುಮಾನ.
ನ್ಯೂಜಿಲ್ಯಾಂಡ್‌ಗೆ ಗಾಯದ ಸಮಸ್ಯೆ ಎದುರಾಗಿದ್ದು, ಡ್ಯಾರಿಲ್‌ ಮಿಚೆಲ್‌ ಆಸೀಸ್‌ ಎದುರಿನ ಪಂದ್ಯ ದಿಂದ ಹೊರಗುಳಿಯಲಿದ್ದಾರೆ.

ಇಂದಿನ ಪಂದ್ಯ
1. ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್‌
ಆರಂಭ: ಅ.12.30
ಸ್ಥಳ: ಸಿಡ್ನಿ

2. ಇಂಗ್ಲೆಂಡ್‌-ಅಫ್ಘಾನಿಸ್ಥಾನ
ಆರಂಭ: ಸಂ. 4.30
ಸ್ಥಳ: ಪರ್ತ್‌
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next