ಮಣಿಪಾಲ: ಕ್ರಮೇಣವಾಗಿ ಸೋಂಕು ಪ್ರಸರಣ ಕಡಿತವಾಗಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಒಂದಾಗಿ ತಮ್ಮ ಗಡಿಭಾಗಗಳನ್ನು ತೆರವುಗೊಳಿಸುವತ್ತ ಮುಂದಾಗಿವೆ. ಸಾರಿಗೆ ವ್ಯವಸ್ಥೆ ಮೇಲಿನ ನಿಬಂಧನೆಗಳನ್ನೂ ಸಡಿಲಗೊಳಿಸಲು ಚರ್ಚಿಸುತ್ತಿವೆ.
ನ್ಯೂಜಿಲೆಂಡ್‌ನ ಪ್ರಧಾನಿ ಜಸಿಂಡಾ ಅರ್ಡೆರ್ನ್ ವಿಡೀಯೋ ಕಾನ್ಫರೆನ್ಸ್ ಮೂಲಕ ಮಂಗಳವಾರ ಆಸ್ಟ್ರೇಲಿಯಾದ ಸರಕಾರದೊಂದಿಗೆ ಪ್ರಯಾಣ ನಿಬಂಧನೆ ವಿನಾಯಿತಿ ಚರ್ಚಿಸುವರು ಎನ್ನಲಾಗುತ್ತಿದೆ.
ಈ ಕುರಿತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್, ಕಳೆದ ವಾರ ಚರ್ಚೆಗೆ ಅರ್ಡೆರ್ನ್ರನ್ನು ಆಹ್ವಾನಿಸಿದ್ದರು ಎನ್ನಲಾಗಿದೆ. ಈ ಹಿಂದೆಯೂ ಅಂತಾರಾಷ್ಟ್ರೀಯ ಪ್ರಯಾಣ ನಿಷೇಧ ತೆರವುಗೊಳಿಸುವಿಕೆ ಕುರಿತೂ ಚರ್ಚಿಸುವ ಸಾಧ್ಯತೆ ಇದೆ. ಇದಕ್ಕೆ ಪೂರಕವೆಂಬತೆ ಆರ್ಡೆರ್ನ್ ಸಹ ಮಾಧ್ಯಮದೊಂದಿಗೆ ಮಾತನಾಡಿದ್ದು, ಟ್ರಾನ್ಸ್ -ಟ್ಯಾಸ್ಮನ್ ” ಟ್ರವೆಲ್ ಬಬಲ್’ ಯೋಜನೆಯ ಪ್ರಾರಂಭದ ಕುರಿತಾಗಿ ನಿರ್ಧಾರ ಕೈಗೊಳ್ಳಲಾಗುವುದು. 14 ದಿನಗಳಿಂದ ಸ್ಥಗಿತಗೊಂಡ ಅಂತಾರಾಷ್ಟ್ರೀಯ ಪ್ರಯಾಣ ಪುನರಾರಂಭವಾಗಬಹುದು ಎಂದಿದ್ದಾರೆ. ಕೋವಿಡ್-19 ಬಿಕ್ಕಟ್ಟನ್ನು ನಿರ್ವಹಿಸಲು ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಎರಡೂ ಯಶಸ್ವಿ ಕಾರ್ಯತಂತ್ರಗಳನ್ನು ಜಾರಿ ಮಾಡಿವೆ. ಉಭಯ ದೇಶಗಳು ಸೋಂಕು ಪ್ರಸರಣ ವಿಷಯದಲ್ಲಿ ಸ್ಥಿರತೆ ಕಾಯ್ದುಕೊಂಡಿವೆ. ಹಾಗೇ ನೋಡುವುದಾದರೆ ನ್ಯೂಜಿಲೆಂಡ್‌ನ ಲಾಕ್‌ಡೌನ್ ನಿಯಮಗಳು ಆಸ್ಟ್ರೇಲಿಯಾದಲ್ಲಿನ ನಿಯಮಗಳಿಗಿಂತ ಹೆಚ್ಚು ಕಠಿಣವಾಗಿವೆ. ಈ ಪರಿಶ್ರಮದ ಫಲವಾಗಿಯೇ ನ್ಯೂಜಿಲೆಂಡ್‌ನಲ್ಲಿ ಸೋಮವಾರ ಪ್ರಕರಣಗಳು ಪತ್ತೆಯಾಗಿಲ್ಲ.