ಬೀಜಿಂಗ್: ಚೀನದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂಬ ಹಿನ್ನೆಲೆಯಲ್ಲಿ ಮುಂದಿನ ವರ್ಷ ಬೀಜಿಂಗ್‌ನಲ್ಲಿ ನಡೆಯಲಿರುವ ಚಳಿಗಾಲದ ಒಲಿಂಪಿಕ್ಸ್‌ಗೆ ಅಮೆರಿಕ ಮತ್ತು ಆಸ್ಟ್ರೇಲಿಯ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನು ಕಳುಹಿಸುವುದಿಲ್ಲವೆಂದು ಘೋಷಿಸಿದೆ. ಬ್ರಿಟನ್ ಕೂಡ ಇದೇ ಹಾದಿಯಲ್ಲಿದೆ. ಇದು ಚೀನವನ್ನು ಕೆರಳಿಸಿದೆ.
ಅಮೆರಿಕ ಒಲಿಂಪಿಕ್ಸ್ ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ, ಬೀಜಿಂಗ್ ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಹಸ್ತಕ್ಷೇಪ ಮಾಡಲು ಯತ್ನಿಸುತ್ತಿದೆ. ಯಾವುದೇ ತಾತ್ವಿಕ ನೆಲೆಗಟ್ಟಿನ ಹಿನ್ನೆಲೆಯಿಲ್ಲದ, ಕೇವಲ ಪೂರ್ವಾಗ್ರಹ, ವದಂತಿಗಳ ಆಧಾರದಲ್ಲಿ ಹೀಗೆ ಮಾಡುತ್ತಿದೆ ಎಂದು ಚೀನ ವಿದೇಶಾಂಗ ಇಲಾಖೆ ಆರೋಪಿಸಿದೆ. ಅಮೆರಿಕ ತನ್ನ ಈ ಕೃತ್ಯಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ, ಕಾದು ನೋಡಿ ಎಂದು ಚೀನ ಹೇಳಿದೆ. ಆದರೆ ತಾನೇನು ಮಾಡುತ್ತೇನೆ ಎನ್ನುವುದನ್ನು ಬಹಿರಂಗಪಡಿಸಿಲ್ಲ.
ಇದನ್ನೂ ಓದಿ:ಟೆಸ್ಟ್ ಸರಣಿ: ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ ಇನ್ನಿಂಗ್ಸ್ ಗೆಲುವು
ಸೋಮವಾರ ಚೀನದ ವಿರುದ್ಧ ಕೆಂಡಕಾರಿದ್ದ ಅಮೆರಿಕದ ಜೋ ಬೈಡೆನ್ ಸರಕಾರ, ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲು ತನ್ನ ಆ್ಯತ್ಲೀಟ್‌ಗಳಿಗೆ ಅನುಮತಿ ನೀಡಿತ್ತು. ಆದರೆ ತನ್ನ ರಾಜತಾಂತ್ರಿಕ ಅಧಿಕಾರಿಗಳನ್ನು ಕಳುಹಿಸುವುದಿಲ್ಲ. ಅಧಿಕಾರಿಗಳು ಬೀಜಿಂಗ್ ಕೂಟಕ್ಕೆ ಬಹಿಷ್ಕಾರ ಹಾಕಲಿದ್ದಾರೆ ಎಂದು ಪ್ರಕಟಿಸಿತ್ತು.
ಇತ್ತೀಚೆಗೆ ಚೀನದ ಖ್ಯಾತ ಟೆನಿಸ್ ಆಟಗಾರ್ತಿ ಪೆಂಗ್ ಶುಯಿ ಚೀನದಲ್ಲಿ ನಾಪತ್ತೆಯಾಗಿದ್ದರು. ಅದನ್ನು ವಿರೋಧಿಸಿ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಒಕ್ಕೂಟ ಚೀನಾದಲ್ಲಿ ಎಲ್ಲ ಮಹಿಳಾ ಕೂಟಗಳನ್ನು ರದ್ದು ಮಾಡಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.