Advertisement

ಏಕದಿನ: ವಿಶ್ವ ಚಾಂಪಿಯನ್ನರ ಮೇಲೆ ಒತ್ತಡ​​​​​​​

12:30 AM Mar 06, 2019 | |

ನಾಗ್ಪುರ: ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯ ವಿರುದ್ಧದ ಏಕದಿನ ಸರಣಿಯಲ್ಲಿ ಗೆಲುವಿನ ಆರಂಭ ಕಂಡ ಭಾರತ ಈ ಓಟವನ್ನು ಮುಂದುವರಿಸುವ ಯೋಜನೆಯೊಂದಿಗೆ ಮಂಗಳವಾರ ನಾಗ್ಪುರದ “ವಿಸಿಎ ಸ್ಟೇಡಿಯಂ’ನಲ್ಲಿ ದ್ವಿತೀಯ ಪಂದ್ಯವನ್ನು ಆಡಲಿಳಿಯಲಿದೆ. ಇನ್ನೊಂದೆಡೆ ಆರನ್‌ ಫಿಂಚ್‌ ಪಡೆ ಸರಣಿಯನ್ನು ಸಮಬಲಗೊಳಿಸಲೇಬೇಕಾದ ಒತ್ತಡದಲ್ಲಿದ್ದು, ಟಿ20 ಜೋಶ್‌ ಪುನರಾವರ್ತಿಸುವ ಗುರಿಯನ್ನು ಹಾಕಿಕೊಂಡಿದೆ.

Advertisement

ಹೈದರಾಬಾದ್‌ನಲ್ಲಿ ನಡೆದ ಸಾಮಾನ್ಯ ಮೊತ್ತದ ಹೋರಾಟದಲ್ಲಿ ಧೋನಿ-ಜಾಧವ್‌ ಸಾಹಸದಿಂದ ಭಾರತ 6 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು; ಟಿ20 ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುವ ಸೂಚನೆ ನೀಡಿತ್ತು. ಇದು ಹೈದರಾಬಾದ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ಸಾಧಿಸಿದ ಮೊದಲ ಜಯವೂ ಆಗಿತ್ತು.

ಇತ್ತ ನಾಗ್ಪುರದಲ್ಲಿ ಭಾರತ-ಆಸ್ಟ್ರೇಲಿಯ ಪಂದ್ಯಗಳ ಫ‌ಲಿತಾಂಶ ಉಲ್ಟಾ ಆಗಿದೆ. ಇಲ್ಲಿ ಆಡಿದ ಮೂರೂ ಪಂದ್ಯಗಳಲ್ಲಿ ಕಾಂಗರೂ ಪಡೆ ಭಾರತದೆದುರು ಸೋತಿದೆ. 2011ರ ವಿಶ್ವಕಪ್‌ ವೇಳೆ ನ್ಯೂಜಿಲ್ಯಾಂಡ್‌ ವಿರುದ್ಧವಷ್ಟೇ ಜಯ ಸಾಧಿಸಿದೆ. ಹೀಗಾಗಿ ನಾಗ್ಪುರದಲ್ಲಿ ಆಸೀಸ್‌ ಭಾರತದೆದುರು ಗೆಲುವಿನ ಖಾತೆ ತೆರೆದೀತೇ ಎಂಬ ಕುತೂಹಲ ಸಹಜ.

ಭಾರತಕ್ಕೆ ಧವನ್‌ ಚಿಂತೆ
ವಿಶ್ವಕಪ್‌ಗೆ ಪರಿಪೂರ್ಣ ತಂಡವೊಂದನ್ನು ಅಂತಿಮಗೊಳಿಸಲು ವಿಶ್ವ ಚಾಂಪಿಯನ್ನರ ವಿರುದ್ಧವೇ ಅಭ್ಯಾಸ ನಡೆಸುತ್ತಿರುವ ಟೀಮ್‌ ಇಂಡಿಯಾಕ್ಕೆ ಸದ್ಯದ ಸಮಸ್ಯೆಯೆಂದರೆ ಆರಂಭಕಾರ ಶಿಖರ್‌ ಧವನ್‌ ವೈಫ‌ಲ್ಯ. ಹೈದರಾಬಾದ್‌ನಲ್ಲಿ ಧವನ್‌ ರನ್‌ ಗಳಿಸಲು ವಿಫ‌ಲರಾದ್ದರಿಂದ ಭಾರತ ಒತ್ತಡಕ್ಕೆ ಸಿಲುಕಿತ್ತು. 100 ರನ್‌ ಆಗುವಷ್ಟರಲ್ಲಿ 4 ವಿಕೆಟ್‌ ಉದುರಿ ಹೋಗಿತ್ತು. ಧೋನಿ-ಜಾಧವ್‌ ಕ್ರೀಸ್‌ ಆಕ್ರಮಿಸಿಕೊಳ್ಳದೇ ಹೋಗಿದ್ದರೆ, ಅಥವಾ ಇವರಲ್ಲೊಬ್ಬರು ಔಟಾಗಿದ್ದರೂ ಭಾರತಕ್ಕೆ ಅಪಾಯ ಎದುರಾಗುವ ಸಾಧ್ಯತೆ ಇತ್ತು. ಧವನ್‌ ಬದಲು ರಾಹುಲ್‌ ಅವರನ್ನು ಆಡಿಸುವ ಸಾಧ್ಯತೆ ಸದ್ಯದ ಮಟ್ಟಿಗೆ ದೂರ ಎನ್ನಬಹುದು.

ಆಲ್‌ರೌಂಡರ್‌ ವಿಜಯ್‌ ಶಂಕರ್‌ ಕೂಡ ಕ್ಲಿಕ್‌ ಆಗಿರಲಿಲ್ಲ. ಬೌಲಿಂಗ್‌ನಲ್ಲಿ ಧಾರಾಳಿಯಾದ್ದರಿಂದ ಇವರ ಸ್ಥಾನಕ್ಕೆ ರಿಷಬ್‌ ಪಂತ್‌ ಅವರನ್ನು ಕರೆತರುವ ಯೋಜನೆಯೂ ಇದೆ. ರವೀಂದ್ರ ಜಡೇಜ ಬದಲು ಚಾಹಲ್‌ ಅವರಿಗೆ ಚಾನ್ಸ್‌ ಕೊಡುವುದು ಮತ್ತೂಂದು ಸಾಧ್ಯತೆ. ಆದರೆ ತಂಡದ “ವಿನ್ನಿಂಗ್‌ ಕಾಂಬಿನೇಶನ್‌’ ಬದಲಿಸುವುದು ಸದ್ಯದ ಮಟ್ಟಿಗೆ ಅವಸರದ ಕ್ರಮವಾಗಲಿದೆ ಎಂಬ ಲೆಕ್ಕಾಚಾರವೂ ಇದೆ.

Advertisement

ಬೌಲಿಂಗ್‌ನಲ್ಲಿ ಬುಮ್ರಾ, ಶಮಿ ಭಾರತದ ಪ್ರಧಾನ ಅಸ್ತ್ರವಾಗಿದ್ದಾರೆ. ಕುಲದೀಪ್‌ ಸ್ಪಿನ್‌ ಕೂಡ ಕಾಂಗರೂಗಳಿಗೆ ಕಂಟಕವಾಗುವುದು ಖಂಡಿತ.

ಫಿಂಚ್‌ ಸತತ ವೈಫ‌ಲ್ಯ
ಆಸ್ಟ್ರೇಲಿಯಕ್ಕೆ ಎದುರಾಗಿರುವ ದೊಡ್ಡ ಸಮಸ್ಯೆಯೆಂದರೆ ಬಿಗ್‌ ಹಿಟ್ಟರ್‌ ಆರನ್‌ ಫಿಂಚ್‌ ಅವರ ಶೋಚನೀಯ ವೈಫ‌ಲ್ಯ. ಭಾರತದೆದುರು ತವರಿನಲ್ಲೇ ಬ್ಯಾಟಿಂಗ್‌ ಬರಗಾಲ ಅನುಭವಿಸಿದ ಫಿಂಚ್‌, ಈಗ ಭಾರತಕ್ಕೆ ಬಂದ ಬಳಿಕವೂ ಇದೇ ಸಂಕಟದಲ್ಲಿದ್ದಾರೆ. ಟಿ20 ಪಂದ್ಯಗಳಲ್ಲಿ ಇವರ ಗಳಿಕೆ 0 ಮತ್ತು 8 ರನ್‌. ಮೊದಲ ಏಕದಿನದಲ್ಲೂ ರನ್‌ ಖಾತೆ ತೆರೆಯಲು ವಿಫ‌ಲರಾಗಿದ್ದಾರೆ. ಹೀಗಾಗಿ ಅಗ್ರ ಕ್ರಮಾಂಕ ಹಾಗೂ ಪವರ್‌-ಪ್ಲೇ ಅವಧಿಯಲ್ಲಿ ಆಸ್ಟ್ರೇಲಿಯ ಪರದಾಡುತ್ತಿದೆ. ಇದರಿಂದ ಮಧ್ಯಮ ಕ್ರಮಾಂಕದ ಮೇಲೆ ಒತ್ತಡ ಬೀಳುತ್ತಿದೆ.

ಉಸ್ಮಾನ್‌ ಖ್ವಾಜಾ, ಗ್ಲೆನ್‌ ಮ್ಯಾಕ್ಸ್‌ವೆಲ್‌ ಮತ್ತು ಮಾರ್ಕಸ್‌ ಸ್ಟೋಯಿನಿಸ್‌ ಅವರನ್ನು ಆಸ್ಟ್ರೇಲಿಯ ಹೆಚ್ಚು ಅವಲಂಬಿಸಿದೆ. ಇವರೆಲ್ಲ ಹೈದರಾಬಾದ್‌ನಲ್ಲಿ ವಿಕೆಟ್‌ ಕೈಚೆಲ್ಲಿದ್ದರಿಂದ ಆಸೀಸ್‌ ದೊಡ್ಡ ಮೊತ್ತ ಪೇರಿಸುವಲ್ಲಿ ವಿಫ‌ಲವಾಗಿತ್ತು. ಜತೆಗೆ ಭಾರತದ ಸ್ಪಿನ್‌ ದಾಳಿಯನ್ನು ನಿಭಾಯಿಸುವಲ್ಲಿಯೂ ಎಡವಿತ್ತು.

ನಾಗ್ಪುರದಲ್ಲಿ ಭಾರತ ಅಜೇಯ
ನಾಗ್ಪುರದ ವಿಸಿಎ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಭಾರತ-ಆಸ್ಟ್ರೇಲಿಯ ಈವರೆಗೆ 3 ಸಲ ಮುಖಾಮುಖೀಯಾಗಿದ್ದು, ಭಾರತ ಮೂರನ್ನೂ ಗೆದ್ದು ಅಜೇಯ ದಾಖಲೆ ಕಾಯ್ದುಕೊಂಡಿದೆ. ಇನ್ನೊಂದೆಡೆ ಆಸ್ಟ್ರೇಲಿಯ 2011ರ ವಿಶ್ವಕಪ್‌ ವೇಳೆ ನ್ಯೂಜಿಲ್ಯಾಂಡ್‌ ವಿರುದ್ಧ ಇಲ್ಲಿ ಆಡಲಾದ ಗ್ರೂಪ್‌ ಪಂದ್ಯವನ್ನು 7 ವಿಕೆಟ್‌ಗಳಿಂದ ಜಯಿಸಿದೆ.

ಭಾರತ-ಆಸ್ಟ್ರೇಲಿಯ ಇಲ್ಲಿ ಮೊದಲ ಸಲ ಮುಖಾಮುಖೀಯಾದದ್ದು 2009ರಲ್ಲಿ. ಇದನ್ನು ಭಾರತ 99 ರನ್ನುಗಳಿಂದ ಗೆದ್ದಿತ್ತು. ನಾಯಕ ಧೋನಿ 124 ಬಾರಿಸಿದ್ದರು. 2ನೇ ಪಂದ್ಯ 2013ರಲ್ಲಿ ನಡೆದಿತ್ತು. ಭಾರತದ ಗೆಲುವಿನ ಅಂತರ 6 ವಿಕೆಟ್‌. ಭಾರತ 351 ರನ್ನುಗಳ ಬೃಹತ್‌ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿತ್ತು. ಭಾರತದ ಪರ ಧವನ್‌ 100, ಕೊಹ್ಲಿ ಅಜೇಯ 115 ರನ್‌; ಆಸೀಸ್‌ ಪರ ಬೈಲಿ 156, ವಾಟ್ಸನ್‌ 102 ರನ್‌ ಬಾರಿಸಿದ್ದರು.ಇಲ್ಲಿ ಭಾರತ-ಆಸೀಸ್‌ ಕೊನೆಯ ಸಲ ಎದುರಾದದ್ದು 2017ರಲ್ಲಿ. ಗೆಲುವಿನ ಅಂತರ 7 ವಿಕೆಟ್‌. ರೋಹಿತ್‌ ಗಳಿಕೆ 125.

ಸಂಭಾವ್ಯ ತಂಡಗಳು
ಭಾರತ:
ಶಿಖರ್‌ ಧವನ್‌, ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ (ನಾಯಕ), ಅಂಬಾಟಿ ರಾಯುಡು, ಮಹೇಂದ್ರ ಸಿಂಗ್‌ ಧೋನಿ, ಕೇದಾರ್‌ ಜಾಧವ್‌, ವಿಜಯ್‌ ಶಂಕರ್‌, ರವೀಂದ್ರ ಜಡೇಜ, ಮೊಹಮ್ಮದ್‌ ಶಮಿ, ಕುಲದೀಪ್‌ ಯಾದವ್‌, ಜಸ್‌ಪ್ರೀತ್‌ ಬುಮ್ರಾ.

ಆಸ್ಟ್ರೇಲಿಯ: ಆರನ್‌ ಫಿಂಚ್‌ (ನಾಯಕ), ಉಸ್ಮಾನ್‌ ಖ್ವಾಜಾ, ಶಾನ್‌ ಮಾರ್ಷ್‌, ಮಾರ್ಕಸ್‌ ಸ್ಟೋಯಿನಿಸ್‌, ಪೀಟರ್‌ ಹ್ಯಾಂಡ್ಸ್‌ಕಾಂಬ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಅಲೆಕ್ಸ್‌ ಕ್ಯಾರಿ, ನಥನ್‌ ಕೋಲ್ಟರ್‌ ನೈಲ್‌, ಪ್ಯಾಟ್‌ ಕಮಿನ್ಸ್‌, ಜಾಸನ್‌ ಬೆಹೆÅಂಡಾಫ್ì, ಆ್ಯಡಂ ಝಂಪ.
ಆರಂಭ: ಅ. 1.30
ಪ್ರಸಾರ: ಸ್ಟಾರ್‌ ನ್ಪೋರ್ಟ್ಸ್

Advertisement

Udayavani is now on Telegram. Click here to join our channel and stay updated with the latest news.

Next