Advertisement

ಕೋವಿಡ್‌ 2ನೇ ಹಂತದ ದಾಳಿ ಭೀತಿಯಲ್ಲಿ ಆಸ್ಟ್ರೇಲಿಯಾ

10:48 AM Jun 23, 2020 | mahesh |

ಮೆಲ್ಬರ್ನ್: ಇತ್ತೀಚೆಗೆಯಷ್ಟೇ ಕೋವಿಡ್‌ ವೈರಸ್‌ ದಾಳಿ ಕಡಿಮೆಯಾಗಿ ಸ್ವಲ್ಪ ನಿರಾಳವಾಗಿದ್ದ ಆಸ್ಟ್ರೇಲಿಯಾಗೆ ಈಗ ವೈರಸ್‌ ಎರಡನೇ ಹಂತದಲ್ಲಿ ದಾಳಿ ಮಾಡುವ ಆತಂಕ ಎದುರಾಗಿದೆ. ಇಲ್ಲಿನ ವಿಕ್ಟೋರಿಯಾ ರಾಜ್ಯದಲ್ಲಿ ಕಳೆದ ಒಂದಷ್ಟು ದಿನಗಳಿಂದ ಕೋವಿಡ್‌ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು ಈಗಾಗಲೇ 110 ಜನರಿಗೆ ಸೋಂಕು ದೃಢವಾಗಿದೆ. ಇದರಲ್ಲಿ ಹೆಚ್ಚಿನವರೂ ಮೆಲ್ಬರ್ನ್ ನವರಾಗಿದ್ದು ದೇಶದ ಒಟ್ಟು 6 ನಗರಗಳನ್ನು ಹಾಟ್‌ಸ್ಪಾಟ್‌ ಎಂದು ಗುರುತಿಸಲಾಗಿದೆ. ಇದರಿಂದ ಆಸ್ಟ್ರೇಲಿಯಾದಲ್ಲಿ ಕೋವಿಡ್‌ ಎರಡನೇ ಹಂತದಲ್ಲಿ ಹಾವಳಿ ಉಂಟು ಮಾಡಿರುವುದು ಸ್ಪಷ್ಟವಾಗುತ್ತದೆ. ಇಲ್ಲಿನ ನಾಗರಿಕರ ಮೆಲ್ಬರ್ನ್ ಪ್ರವಾಸವನ್ನು ಮೊಟಕುಗೊಳಿಸುವಂತೆ ಸರಕಾರ ಆದೇಶಿಸಿದೆ. ಆಸ್ಟ್ರೇಲಿಯಾದ ಎರಡನೇ ಅತಿ ದೊಡ್ಡ ನಗರವಾದ ಮೆಲ್ಬರ್ನ್ನಲ್ಲಿ ಸೋಂಕು ಹೆಚ್ಚಾದರೆ ಅದು ಇಡೀ ದೇಶಕ್ಕೆ ವ್ಯಾಪಿಸುವ ಭೀತಿಯಿದೆ.

Advertisement

ಈಗಾಗಲೇ ಕಠಿನ ನಿಯಮಗಳನ್ನು ಇಲ್ಲಿ ಜಾರಿಗೊಳಿಸಲಾಗಿದ್ದು, ವಿಕ್ಟೋರಿಯಾದ ನೆರೆ ರಾಜ್ಯಗಳ ಜನರಿಗೆ ಪ್ರವೇಶ ನಿಷೆ‌ಧಿಸಲಾಗಿದೆ. ಆದರೆ ಸೋಂಕಿನ ಮೂಲ ಪತ್ತೆ ಇನ್ನೂ ಅಧಿಕಾರಿಗಳಿಂದ ಸಾಧ್ಯವಾಗಿಲ್ಲ.  ಕೋವಿಡ್‌ ಸೋಂಕು ತಗಲದಿರಲು ಹೇರಿದ್ದ ಲಾಕ್‌ಡೌನ್‌ನಲ್ಲಿ ಸಡಿಲಿಕೆ ನೀಡಿದ್ದು ಸೋಂಕು ಹೆಚ್ಚಳವಾಗಲು ಪ್ರಮುಖ ಕಾರಣವಾಗಿದೆ. ದೇಶದ ಆರ್ಥಿಕತೆಯನ್ನು ಪುನರ್‌ ಸ್ಥಾಪಿಸುವ ನಿಟ್ಟಿನಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗಿತ್ತು. ಈಗಾಗಲೇ ಇಲ್ಲಿನ ಇತರ ನಗರಗಳು ಸ್ವಯಂ ಕೋವಿಡ್‌ ಮುಕ್ತತೆಯನ್ನು ಘೋಷಿಸಿದೆ. ಆದರೆ ವಿಕ್ಟೋರಿಯಾದಲ್ಲಿ ಉಂಟಾದ ವೈರಸ್‌ ಪುನರ್‌ ದಾಳಿ ಇತರ ಎಲ್ಲ ರಾಜ್ಯಗಳಿಗೆ ಮುನ್ನೆಚ್ಚರಿಕೆಯಾಗಿದೆ.

ಆಸ್ಟ್ರೇಲಿಯಾದಲ್ಲಿ ಈ ವರೆಗೆ 7,474 ಮಂದಿಗೆ ಕೊರೊನಾ ಸೋಂಕು ತಗಲಿದ್ದು, 102 ಮಂದಿ ಮೃತಪಟ್ಟಿದ್ದಾರೆ. 6,903 ಮಂದಿ ಗುಣಮುಖರಾಗಿದ್ದಾರೆ. ಸೋಮವಾರ 13 ಹೊಸ ಪ್ರಕರಣಗಳು ದಾಖಲಾಗಿದ್ದು , ಆತಂಕ ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next