Advertisement
ಹಾಲಿ ಚಾಂಪಿಯನ್ ತಂಡವೊಂದು ಅತ್ಯಂತ ದಯನೀಯ ಸ್ಥಿತಿಗೆ ತಲುಪಿ ಅಂಕಪಟ್ಟಿಯ ಕೊನೆಯ ಸ್ಥಾನಕ್ಕೆ ಜಾರಿದ ದುರಂತಕ್ಕೆ ಸಾಕ್ಷಿಯಾದ ವಿಶ್ವಕಪ್ ಪಂದ್ಯಾವಳಿ ಇದು. 2019ರಲ್ಲಿ, ವಿಚಿತ್ರ ಸನ್ನಿವೇಶವೊಂದರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಎತ್ತಿದ ಇಂಗ್ಲೆಂಡ್ ಈ ಬಾರಿ ಇದರ ಶೇ. ಹತ್ತರಷ್ಟೂ ಸಾಧನೆ ಮಾಡಿಲ್ಲ. ಆರರಲ್ಲಿ ಗೆದ್ದದ್ದು ಒಂದು ಪಂದ್ಯ ಮಾತ್ರ. ಹೀಗಾಗಿ ಜಾಸ್ ಬಟ್ಲರ್ ತಂಡ ಈಗಾಗಲೇ ಹೊರಬಿದ್ದಾಗಿದೆ. ಇದಕ್ಕೆ ಅಧಿಕೃತ ಮುದ್ರೆ ಬೀಳಬೇಕಾದ ಅಗತ್ಯವಿಲ್ಲ. ಏಕೆಂದರೆ ಉಳಿದ 3 ಪಂದ್ಯ ಗೆದ್ದರೂ ಮೇಲೇರಲಾಗದ ಅವಸ್ಥೆ ಇಂಗ್ಲೆಂಡ್ ತಂಡದ್ದು. ಆದರೆ ಆಸ್ಟ್ರೇಲಿಯವನ್ನು ಸೋಲಿಸಿದರೆ ಅದೇ ಒಂದು ಮಹತ್ಸಾಧನೆ ಆಗಲಿದೆ.
ಆಸ್ಟ್ರೇಲಿಯದ್ದು ಇದಕ್ಕೆ ವಿರುದ್ಧವಾದ ಸಾಧನೆ. ಆರಂಭದಲ್ಲಿ ಅದುರುತ್ತಿದ್ದ ಕಾಂಗರೂ ಬ್ಯಾಟಿಂಗ್ ಲೈನ್‌ಅಪ್ ಅನಂತರ ಬಲಿಷ್ಠಗೊಳ್ಳುತ್ತ ಬಂದಿದೆ. 5 ಬಾರಿಯ ಚಾಂಪಿಯನ್ ಆಗಿರುವ ಆಸ್ಟ್ರೇಲಿಯ ಕಳೆದ 4 ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ಕಾಯ್ದುಕೊಂಡಿದೆ. ಇದರಿಂದ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಏರಿದೆ. ಇದೂ ಸೇರಿದಂತೆ ಆಸೀಸ್ ಒಟ್ಟು 3 ಪಂದ್ಯಗಳನ್ನು ಆಡಬೇಕಿರುವುದರಿಂದ ಆತಂಕಪಡುವ ಅಗತ್ಯವೇನಿಲ್ಲ. ಮ್ಯಾಕ್ಸಿ , ಮಾರ್ಷ್ ಗೈರು
ಆಸ್ಟ್ರೇಲಿಯ ತಂಡದ ಪ್ರಮುಖ ಆಟಗಾರರಾದ ಮಿಚೆಲ್ ಮಾರ್ಷ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಈ ಪಂದ್ಯಕ್ಕೆ ಲಭ್ಯರಿಲ್ಲ. ಮಾರ್ಷ್ ವೈಯಕ್ತಿಕ ಕಾರಣಗಳಿಂದ ತವರಿಗೆ ಮರಳಿದ್ದಾರೆ. ಮ್ಯಾಕ್ಸ್‌ವೆಲ್ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದಾರೆ. ಇಬ್ಬರೂ ಪ್ರಚಂಡ ಫಾರ್ಮ್ನಲ್ಲಿದ್ದ ಆಟಗಾರರು. ಅದರಲ್ಲೂ ಮ್ಯಾಕ್ಸ್‌ವೆಲ್ ವಿಶ್ವಕಪ್ ಇತಿಹಾಸದ ಶರವೇಗದ ಶತಕ ಬಾರಿಸಿ ಮಿಂಚಿದ್ದರು. ಆದರೆ ಆಸ್ಟ್ರೇಲಿಯ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವೇನೂ ಇಲ್ಲ. ಇವರ ಬದಲು ಕ್ಯಾಮರಾನ್ ಗ್ರೀನ್ ಮತ್ತು ಮಾರ್ಕಸ್ ಸ್ಟೋಯಿನಿಸ್ ಆಡಲಿಳಿಯುತ್ತಾರೆ.
Related Articles
Advertisement
ಬೌಲಿಂಗ್‌ನಲ್ಲಿ ಸ್ಪಿನ್ನರ್ ಆ್ಯಡಂ ಝಂಪ ಟ್ರಂಪ್‌ಕಾರ್ಡ್ ಆಗುತ್ತಿದ್ದಾರೆ. ಭಾರತದ ಸ್ಪಿನ್ ಟ್ರ್ಯಾಕ್‌ಗಳನ್ನು ಅರೆದು ಕುಡಿದವರ ರೀತಿಯಲ್ಲಿ ಬೌಲಿಂಗ್ ನಡೆಸುತ್ತಿದ್ದು, ಈಗಾಗಲೇ 16 ವಿಕೆಟ್ ಉಡಾಯಿಸಿದ್ದಾರೆ. ಆದರೆ ವೇಗದ ಬೌಲಿಂಗ್ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಹೇಝಲ್‌ವುಡ್, ಕಮಿನ್ಸ್ ತಲಾ 8 ವಿಕೆಟ್ ಕೆಡವಿದರೆ, ಸ್ಟಾರ್ಕ್ ವಿಶ್ವಕಪ್‌ನಲ್ಲಿ ಮೊದಲ ಸಲ “ವಿಕೆಟ್ ಲೆಸ್’ ಎನಿಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧ ಸ್ಟಾರ್ಕ್ ಈ ವೈಫಲ್ಯ ಕಂಡಿದ್ದರು.
ಚಾಂಪಿಯನ್ಸ್ ಟ್ರೋಫಿ ಆತಂಕಆಸ್ಟ್ರೇಲಿಯದ ಬಲಿಷ್ಠ ಬ್ಯಾಟಿಂಗ್ ಸರದಿಗೆ ನಡುಕ ಹುಟ್ಟಿಸಲು ಡೇವಿಡ್ ವಿಲ್ಲಿ, ಮಾರ್ಕ್ ವುಡ್, ಕ್ರಿಸ್ ವೋಕ್ಸ್, ಆದಿಲ್ ರಶೀದ್ ಅವರಿಂದ ಸಾಧ್ಯವೇ ಎಂಬುದೊಂದು ಪ್ರಶ್ನೆ. ಉತ್ತಮ ಲಯದಲ್ಲಿದ್ದ ರೀಸ್ ಟಾಪ್‌ಲೀ ತಂಡದಿಂದ ಬೇರ್ಪಟ್ಟದ್ದು, ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಕ್ರಿಕೆಟೇ ಮರೆತವರಂತೆ ಆಡುತ್ತಿರುವುದು ಇಂಗ್ಲೆಂಡ್‌ಗೆ ಬಿದ್ದ ದೊಡ್ಡ ಹೊಡೆತ.
2025ರ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯಲ್ಲಿ ಆಡಬೇಕಾದರೆ ಇಂಗ್ಲೆಂಡ್ ಟಾಪ್-7 ಯಾದಿಯಲ್ಲಿ ಕಾಣಿಸಿಕೊಳ್ಳಬೇಕಿದೆ. ಈ ಕಾರಣಕ್ಕಾಗಿ ಯಾದರೂ ಇಂಗ್ಲೆಂಡ್ ಗೆಲ್ಲಬೇಕು. ಆಸ್ಟ್ರೇಲಿಯ ಮೇಲುಗೈ
ಏಕದಿನ ಇತಿಹಾಸ ಆಸ್ಟ್ರೇಲಿಯ ಪರವಾಗಿಯೇ ಇದೆ. ಇತ್ತಂಡಗಳ ನಡುವೆ 155 ಪಂದ್ಯ ಏರ್ಪಟ್ಟಿದ್ದು, ಇಂಗ್ಲೆಂಡ್ 87ರಲ್ಲಿ ಸೋಲನುಭವಿಸಿದೆ. ವಿಶ್ವಕಪ್‌ನಲ್ಲಿ 3-6 ಹಿನ್ನಡೆ ಹೊಂದಿದೆ.