ಸಿಡ್ನಿ: ಆಸ್ಟ್ರೇಲಿಯದ ವಿಶ್ವಕಪ್ ವಿಜೇತ ತಂಡದ ನಾಯಕಿ ಮೆಗ್ ಲ್ಯಾನಿಂಗ್ “ಕ್ರಿಕೆಟ್ ಬ್ರೇಕ್’ ಪಡೆಯಲು ನಿರ್ಧರಿಸಿದ್ದಾರೆ. “ನಾನು ನನಗಾಗಿಯೇ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆ’ ಎಂಬುದಾಗಿ ಅವರು ಹೇಳಿದ್ದಾರೆ. ಆದರೆ ನಿವೃತ್ತಿ ಕುರಿತು ಯಾವುದೇ ಹೇಳಿಕೆ ನೀಡಿಲ್ಲ.
ಬರ್ಮಿಂಗ್‌ಹ್ಯಾಮ್ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಆಸ್ಟ್ರೇಲಿಯ ಚಿನ್ನದ ಪದಕ ಗೆದ್ದ ಎರಡೇ ದಿನಗಳಲ್ಲಿ ಮೆಗ್ ಲ್ಯಾನಿಂಗ್ ಅವರಿಂದ ಈ ನಿರ್ಧಾರ ಪ್ರಕಟಗೊಂಡಿದೆ. ಇಲ್ಲಿ ಲ್ಯಾನಿಂಗ್ ನಾಯಕತ್ವದಲ್ಲೇ ಆಸ್ಟ್ರೇಲಿಯ ತಂಡ ಚಾಂಪಿಯನ್ ಆಗಿ ಮೂಡಿಬಂದಿತ್ತು.
ಈ ನಿರ್ಧಾರದಿಂದಾಗಿ ಮುಂಬರುವ ಭಾರತ ಪ್ರವಾಸದ ವೇಳೆ ಮೆಗ್ ಲ್ಯಾನಿಂಗ್ ಆಸ್ಟ್ರೇಲಿಯ ತಂಡ ವನ್ನು ಮುನ್ನಡೆಸುವ ಸಾಧ್ಯತೆ ಇಲ್ಲ. ಆಸೀಸ್ ತಂಡ ಡಿಸೆಂಬರ್‌ನಲ್ಲಿ ಭಾರತಕ್ಕೆ ಆಗಮಿಸಿ 5 ಪಂದ್ಯಗಳ ಟಿ20 ಸರಣಿಯಲ್ಲಿ ಪಾಲ್ಗೊಳ್ಳಲಿದೆ.
“ಕಳೆದ ಒಂದೆರಡು ವರ್ಷಗಳಿಂದ ನಾನು ಬಿಡುವಿಲ್ಲದಷ್ಟು ಕ್ರಿಕೆಟ್ ಪಂದ್ಯಗಳನ್ನು ಆಡುತ್ತ ಬಂದಿದ್ದೇನೆ. ಹೀಗಾಗಿ ನನ್ನ ಮೇಲೆಯೇ ನಾನು ಗಮನವನ್ನು ಕೇಂದ್ರೀಕರಿಸಬೇಕಿದೆ. ನನ್ನ ಈ ಖಾಸಗಿತನವನ್ನು ಗೌರವಿ ಸಿದ ಕ್ರಿಕೆಟ್ ಆಸ್ಟ್ರೇಲಿಯಕ್ಕೆ, ಸಹ ಆಟಗಾರ್ತಿಯ ರಿಗೆ, ಕ್ರಿಕೆಟ್ ಪ್ರೇಮಿಗಳಿಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳು’ ಎಂಬು ದಾಗಿ ಮೆಗ್ ಲ್ಯಾನಿಂಗ್ ಹೇಳಿದರು.
ಕ್ರಿಕೆಟ್ ಆಸ್ಟ್ರೇಲಿಯ ಕೂಡ ಮೆಗ್ ಲ್ಯಾನಿಂಗ್ ಅವರ ಈ ನಿರ್ಧಾರವನ್ನು ಸಮ್ಮತಿಸಿದೆ. “ಆಸ್ಟ್ರೇಲಿಯದ ಕ್ರಿಕೆಟಿಗೆ ಮೆಗ್ ಲ್ಯಾನಿಂಗ್ ನೀಡಿದ ಕೊಡುಗೆ ಅಸಾಮಾನ್ಯ. ಯುವ ಆಟಗಾರ್ತಿ ಯರ ಪಾಲಿಗೆ ಅವರೊಂದು ರೋಲ್ ಮಾಡೆಲ್ ಆಗಿದ್ದಾರೆ’ ಎಂದು ಆಸ್ಟ್ರೇಲಿಯನ್ ಕ್ರಿಕೆಟ್ ಮಂಡಳಿಯ ಅಧಿಕಾರಿ ಶಾನ್ ಫ್ಲೆಗ್ಲರ್ ಹೇಳಿದರು.
ಲ್ಯಾನಿಂಗ್ ಹೆಗ್ಗಳಿಕೆ
30 ವರ್ಷದ ಮೆಗ್ ಲ್ಯಾನಿಂಗ್ 2010 ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪದಾರ್ಪಣೆ ಮಾಡಿದ್ದರು. 2014ರಲ್ಲಿ ನಾಯಕತ್ವ ಒಲಿದು ಬಂದು. 171 ಅಂತಾ ರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಆಸ್ಟ್ರೇಲಿಯವನ್ನು ಮುನ್ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ಟಿ20 ವಿಶ್ವಕಪ್, ಏಕದಿನ ವಿಶ್ವಕಪ್ ಜತೆಗೆ ಆ್ಯಶಸ್ ಗೆದ್ದಿರುವುದು ಲ್ಯಾನಿಂಗ್ ನಾಯಕತ್ವದ ಮಹತ್ಸಾಧನೆ.