ದುಬಾೖ: ಮುಂದಿನ ವರ್ಷಾರಂಭದಲ್ಲಿ ನ್ಯೂಜಿಲ್ಯಾಂಡ್ ಆತಿಥ್ಯದಲ್ಲಿ ನಡೆಯುವ 11ನೇ ಅಂಡರ್-19 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ವೇಳಾ ಪಟ್ಟಿಯನ್ನು ಐಸಿಸಿ ಗುರುವಾರ ಪ್ರಕಟಿಸಿದೆ. ಹಾಲಿ ಚಾಂಪಿಯನ್ ವೆಸ್ಟ್ ಇಂಡೀಸ್ ಹಾಗೂ ಆತಿಥೇಯ ನ್ಯೂಜಿಲ್ಯಾಂಡ್ ನಡುವೆ ಜ. 13ರಂದು ನಡೆಯುವ ಪಂದ್ಯದೊಂದಿಗೆ ಕಿರಿಯರ ವರ್ಲ್ಡ್ಕಪ್ ಕಾವೇರಿಸಿಕೊಳ್ಳಲಿದೆ.
3 ಬಾರಿಯ ಚಾಂಪಿಯನ್ ಹಾಗೂ 2016ರ ರನ್ನರ್ ಅಪ್ ತಂಡವಾಗಿರುವ ಭಾರತ ತನ್ನ ಮೊದಲ ಪಂದ್ಯ ವನ್ನು ಆಸ್ಟ್ರೇಲಿಯ ವಿರುದ್ಧ ಆಡಲಿದೆ. ಕಳೆದ ಸಲ ಭದ್ರತಾ ಭೀತಿಯಿಂದಾಗಿ ಬಾಂಗ್ಲಾದೇಶದಲ್ಲಿ ನಡೆದ ಪಂದ್ಯಾವಳಿ ಯಿಂದ ಆಸ್ಟ್ರೇಲಿಯ ಹಿಂದೆ ಸರಿದಿತ್ತು. ಈ ಪಂದ್ಯಾವಳಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳ ಲಿದ್ದು, ಇವುಗಳನ್ನು 4 ಗುಂಪುಗಳಾಗಿ ವಿಭಜಿಸಲಾಗಿದೆ. ಭಾರತ “ಬಿ’ ವಿಭಾಗದಲ್ಲಿದೆ. ಆಸ್ಟ್ರೇಲಿಯ, ಜಿಂಬಾಬ್ವೆ ಮತ್ತು ಪಪುವಾ ನ್ಯೂ ಗಿನಿ ಈ ವಿಭಾಗದ ಉಳಿದ ಮೂರು ತಂಡಗಳು.
11 ತಂಡಗಳಿಗೆ ನೇರ ಪ್ರವೇಶ: ಟೆಸ್ಟ್ ಮಾನ್ಯತೆ ಹೊಂದಿ ರುವ ದೇಶಗಳ 10 ತಂಡಗಳು ಹಾಗೂ ಕಳೆದ ವಿಶ್ವಕಪ್ ಪಂದ್ಯಾವಳಿಯ ಅತ್ಯುತ್ತಮ ಸಾಧನೆಗೈದ ಅಸೋಸಿಯೇಟ್ ತಂಡವಾದ ನಮೀಬಿಯಾ ನೇರವಾಗಿ ಆಯ್ಕೆಯಾಗಿವೆ.ಉಳಿದ 5 ತಂಡಗಳು ಅರ್ಹತಾ ಪಂದ್ಯಾವಳಿಯಲ್ಲಿ ಆಡಿ ಅವಕಾಶ ಪಡೆದಿವೆ. ಇವುಗಳೆಂದರೆ ಕೀನ್ಯಾ, ಪಪುವಾ ನ್ಯೂ ಗಿನಿ, ಕೆನಡಾ, ಅಫ್ಘಾನಿಸ್ಥಾನ, ಅಯರ್‌ಲ್ಯಾಂಡ್. ಇವು ಗಳಲ್ಲಿ ಅಫ್ಘಾನಿಸ್ಥಾನ ಮತ್ತು ಅಯರ್‌ಲ್ಯಾಂಡ್‌ಗೆ ವಿಶ್ವಕಪ್ ಅರ್ಹತಾ ಪಂದ್ಯಾವಳಿಯ ವೇಳೆ ಟೆಸ್ಟ್ ಮಾನ್ಯತೆ ಲಭಿಸಿರಲಿಲ್ಲ. ಪ್ರತಿಯೊಂದು ವಿಭಾಗದ ಅಗ್ರ 2 ತಂಡಗಳು “ಸೂಪರ್ ಲೀಗ್’ನಲ್ಲಿ ಸೆಣಸಲಿವೆ. ಇವು ಕ್ವಾರ್ಟರ್ ಫೈನಲ್ ಮಾದರಿಯ ಪಂದ್ಯಗಳಾಗಿರುತ್ತವೆ. ಉಳಿದ 8 ತಂಡಗಳು “ಪ್ಲೇಟ್’ ವಿಭಾಗದಲ್ಲಿ ಆಡಲಿವೆ. ಸೂಪರ್ ಲೀಗ್ ಕ್ವಾರ್ಟರ್ ಫೈನಲ್ಸ್, ಸೆಮಿಫೈನಲ್ಸ್ ಹಾಗೂ ಫೈನಲ್ ಸಹಿತ 20 ಪಂದ್ಯಗಳು ನೇರ ಪ್ರಸಾರಗೊಳ್ಳಲಿವೆ.
ಕಿವೀಸ್‌ಗೆ 3ನೇ ಆತಿಥ್ಯ: ಇದು ನ್ಯೂಜಿಲ್ಯಾಂಡಿಗೆ ಲಭಿಸುತ್ತಿರುವ 3ನೇ ಅಂಡರ್-19 ವಿಶ್ವಕಪ್ ಆತಿಥ್ಯ. ಇದಕ್ಕೂ ಮುನ್ನ 2002, 2010ರಲ್ಲಿ ನ್ಯೂಜಿಲ್ಯಾಂಡ್ ಯಶಸ್ವಿಯಾಗಿ ಪಂದ್ಯಾವಳಿಯನ್ನು ನಡೆಸಿತ್ತು.