ಮೆಲ್ಬರ್ನ್: ಮುಂಬರುವ ಐಸಿಸಿ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯ ಹಿನ್ನೆಲೆಯಲ್ಲಿ ಆಸ್ಟ್ರೇಲಿಯದ ಕ್ರಿಕೆಟಿಗರಿಗೆ ಐಪಿಎಲ್ ಅಗತ್ಯ ಎಂದಿಗಿಂತ ಹೆಚ್ಚಿದೆ ಮತ್ತು ಇದನ್ನು ಅವರು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ ಎಂದು ಮಾಜಿ ನಾಯಕ ರಿಕಿ ಪಾಂಟಿಂಗ್ ಸಲಹೆ ನೀಡಿದ್ದಾರೆ.
ಕಳೆದ ಬಾಂಗ್ಲಾದೇಶ ಪ್ರವಾಸದ ವೇಳೆ ಆಸ್ಟ್ರೇಲಿಯ 4-1 ಅಂತರದ ಹೀನಾಯ ಸೋಲನುಭವಿಸಿ, ತನ್ನ ಟಿ20 ಚರಿತ್ರೆಯಲ್ಲೇ ಕನಿಷ್ಠ 62 ರನ್ನಿಗೆ ಆಲೌಟಾದುದನ್ನು ಕಂಡ ಬಳಿಕ ಪಾಂಟಿಂಗ್ ಈ ಹೇಳಿಕೆ ನೀಡಿದ್ದಾರೆ.
ಆಸೀಸ್ ಸವಾಲು ಸುಲಭದ್ದಲ್ಲ:
ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿ ಹೆಚ್ಚು ದೂರದಲ್ಲೇನೂ ಇಲ್ಲ. ಎಲ್ಲರೂ ಉತ್ತಮ ಸಿದ್ಧತೆ, ಅಭ್ಯಾಸ ಮಾಡುತ್ತಿದ್ದಾರೆ. ಆದರೆ ಆಸ್ಟ್ರೇಲಿಯದ ಸವಾಲು ಸುಲಭದ್ದಲ್ಲ. ಚಾಂಪಿಯನ್ ಆಗಬೇಕಾದರೆ ಕಠಿಣ ದುಡಿಮೆ ಅಗತ್ಯ. ಇದಕ್ಕೆ ಐಪಿಎಲ್ ಉತ್ತಮ ವೇದಿಕೆಯಾಗಬೇಕಿದೆ. ಎರಡೂ ಕೂಟಗಳು ಯುಎಇಯಲ್ಲೇ ನಡೆಯಲಿರುವ ಕಾರಣ ಭಾರತೀಯ ಕ್ರಿಕೆಟ್ ಲೀಗ್ ಅನ್ನು ಆಸ್ಟ್ರೇಲಿಯನ್ನರು ಹೆಚ್ಚು ಗಂಭೀರವಾಗಿ ತೆಗೆದುಕೊಳ್ಳಬೇಕಿದೆ’ ಎಂದು ಪಾಂಟಿಂಗ್ ಹೇಳಿದರು.
ಕಳೆದ ವೆಸ್ಟ್ ಇಂಡೀಸ್ ಹಾಗೂ ಬಾಂಗ್ಲಾದೇಶ ಪ್ರವಾಸಗೈದ ಆಸ್ಟ್ರೇಲಿಯ ತಂಡದಲ್ಲಿ ರಿಲೀ ಮೆರೆಡಿತ್, ಡೇನಿಯಲ್ ಕ್ರಿಸ್ಟಿಯನ್, ಮೊಸಸ್ ಹೆನ್ರಿಕ್ಸ್, ಮಿಚೆಲ್ ಮಾರ್ಷ್, ಆ್ಯಡಂ ಝಂಪ, ಆ್ಯಂಡ್ರೂ ಟೈ, ಜೋಶ್ ಫಿಲಿಪ್ಸ್ ಮೊದಲಾದ ಆಟಗಾರರಿದ್ದರು. ಐಪಿಎಲ್ ಒಡಂಬಡಿಕೆ ಹೊಂದಿರುವ ಇವರೆಲ್ಲ ಶ್ರೇಷ್ಠ ಪ್ರದರ್ಶನ ನೀಡಿ ವಿಶ್ವಕಪ್‌ಗೆ ಅಣಿಯಾಗಬೇಕಿದೆ ಎಂದು ಸಲಹೆ ನೀಡಿದ್ದಾರೆ.