Advertisement
ನ್ಯೂಜಿಲ್ಯಾಂಡ್ ಸರಕಾರ ರೂಪಿಸಿದ ನೂತನ ನಿಯಮಾನುಸಾರ, ಆಸ್ಟ್ರೇಲಿಯ ಪ್ರವಾಸದಲ್ಲಿರುವ ಕ್ರಿಕೆಟಿಗರು ಕೂಡಲೇ ತವರಿಗೆ ಮರಳಬೇಕಿದೆ ಎಂಬುದಾಗಿ “ಕ್ರಿಕೆಟ್ ಆಸ್ಟ್ರೇಲಿಯ’ ತನ್ನ ಪ್ರಕಟನೆಯಲ್ಲಿ ತಿಳಿಸಿದೆ. ಹಾಗೆಯೇ ಕ್ರಿಕೆಟ್ ಆಸ್ಟ್ರೇಲಿಯ ಮತ್ತು ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿಗಳು ಸೇರಿ ಈ ಸರಣಿಯನ್ನು ಯಾವಾಗ ಮುಂದುವರಿಸಬೇಕೆಂದು ತೀರ್ಮಾನಿಸಲಿವೆ ಎಂದೂ ಹೇಳಿದೆ.
ನ್ಯೂಜಿಲ್ಯಾಂಡ್ ಸರಕಾರ ರೂಪಿಸಿದ ನೂತನ ನಿಯಮದಂತೆ, ಆಸ್ಟ್ರೇಲಿಯದಿಂದ ನೆರೆಯ ನ್ಯೂಜಿಲ್ಯಾಂಡಿಗೆ ಬರುವವರೆಲ್ಲ 14 ದಿನಗಳ ಕಾಲ ವೈದ್ಯಕೀಯ ನಿಗಾದಲ್ಲಿ ಇರಬೇಕಾಗುತ್ತದೆ. ಈ ನಿಯಮ ರವಿವಾರ ಮಧ್ಯರಾತ್ರಿಯಿಂದ ಜಾರಿಗೆ ಬರಲಿದೆ. ಈ ಕಾರಣಕ್ಕಾಗಿ ನ್ಯೂಜಿಲ್ಯಾಂಡ್ ಕ್ರಿಕೆಟಿಗರು ಸರಣಿಯನ್ನು ಮೊಟಕುಗೊಳಿಸಿ ಕೂಡಲೇ ತವರಿಗೆ ವಾಪಸಾಗುವ ಯೋಜನೆ ಹಾಕಿಕೊಂಡರು. “ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ಸರಕಾರದ ನಿಯಮವನ್ನು ಪಾಲಿಸಲಿದೆ. ಯಾವುದೇ ಕಾರಣಕ್ಕೂ ಅನಗತ್ಯ ರಿಸ್ಕ್ ತೆಗೆದುಕೊಳ್ಳಲು ಬಯಸುವುದಿಲ್ಲ. ಆಟಗಾರರ ಆರೋಗ್ಯ ನಮಗೆ ಬಹಳ ಮುಖ್ಯ’ ಎಂಬುದಾಗಿ ನ್ಯೂಜಿಲ್ಯಾಂಡ್ ಕ್ರಿಕೆಟ್ ಮಂಡಳಿ ತಿಳಿಸಿದೆ.
Related Articles
ಇದರೊಂದಿಗೆ ಪ್ರಸ್ತುತ ಜಾಗತಿಕ ಕ್ರಿಕೆಟ್‌ನಲ್ಲಿ ನಡೆಯಬೇಕಿರುವ ಎಲ್ಲ ಕ್ರಿಕೆಟ್ ಸರಣಿಗಳೂ ರದ್ದುಗೊಂಡಂತಾಗಿದೆ. ಕೆಲವನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗಿದೆ.
Advertisement
ಶುಕ್ರವಾರ “ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ಪ್ರೇಕ್ಷಕರಿಗೆ ನಿರ್ಬಂಧ ವಿಧಿಸಿ ನಡೆಸಲಾದ ಆಸ್ಟ್ರೇಲಿಯ-ನ್ಯೂಜಿಲ್ಯಾಂಡ್ ನಡುವಿನ “ಚಾಪೆಲ್-ಹ್ಯಾಡ್ಲಿ ಸರಣಿಯ’ ಮೊದಲ ಏಕದಿನ ಪಂದ್ಯವೇ ಸದ್ಯದ ಸ್ಥಿತಿಯಲ್ಲಿ ಕೊನೆಯ ಅಂತಾರಾಷ್ಟ್ರೀಯ ಪಂದ್ಯವೆನಿಸಿತು.
ಈ ಪಂದ್ಯವನ್ನು ಆಸ್ಟ್ರೇಲಿಯ 71 ರನ್ನುಗಳಿಂದ ಜಯಿಸಿತ್ತು. ಸರಣಿಯ ಮುಂದಿನೆರಡು ಪಂದ್ಯ ಮಾ. 15 (ಸಿಡ್ನಿ) ಮತ್ತು ಮಾ. 20ರಂದು (ಹೋಬರ್ಟ್) ನಡೆಯಬೇಕಿತ್ತು.
ಇದಕ್ಕೂ ಮೊದಲು ಭಾರತ-ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯನ್ನೂ ರದ್ದುಗೊಳಿಸಲಾಗಿತ್ತು. ಇಂಗ್ಲೆಂಡ್ ಕ್ರಿಕೆಟ್ ತಂಡ ಶ್ರೀಲಂಕಾ ಪ್ರವಾಸದಿಂದಲೂ ಹಿಂದೆ ಸರಿದಿತ್ತು.