Advertisement

ಹೀಲಿ – ಮೂನಿ ಬ್ಯಾಟಿಂಗ್ ಅಬ್ಬರ ; ಭಾರತ ವನಿತೆಯರಿಗೆ 185 ರನ್ ಗುರಿ

10:09 AM Mar 09, 2020 | Hari Prasad |

ಮೆಲ್ಬರ್ನ್: ಇಲ್ಲಿನ ಎಂ.ಸಿ.ಜಿ. ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ಮಹಿಳೆಯರ ಅಂತರಾಷ್ಟ್ರೀಯ ಟಿ20 ವಿಶ್ವಕಪ್ ಕ್ರಿಕೆಟ್ ನ ಫೈನಲ್ ಕಾದಾಟದಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆಲ್ಲಲು ಭಾರತದ ವನಿತೆಯರಿಗೆ ಕಠಿಣ ಗುರಿ ನಿಗದಿಯಾಗಿದೆ.

Advertisement

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಿಗದಿತ 20 ಓವರುಗಳಲ್ಲಿ 4 ವಿಕೆಟ್ ನಷ್ಟದಲ್ಲಿ 184 ರನ್ ಪೇರಿಸಿ ಭಾರತೀಯ ವನಿತೆಯರ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿಗೆ 185 ರನ್ ಗಳ ಕಠಿಣ ಗುರಿಯನ್ನು ನಿಗದಿಪಡಿಸಿದೆ.

ಫೈನಲ್ ಕಾದಾಟದಲ್ಲಿ ಟಾಸ್ ಗೆಲ್ಲುವ ಅದೃಷ್ಟ ಆಸೀಸ್ ವನಿತಾ ತಂಡದ ನಾಯಕಿ ಮೆಗ್ ಲ್ಯಾನಿಂಗ್ ಅವರದ್ದಾಯಿತು. ನಾಯಕಿಯ ತೀರ್ಮಾನವನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಲಾರಂಭಿಸಿದ ಆರಂಭಿಕ ಆಟಗಾರರಾದ ಅಲಿಸ್ಸಾ ಹೀಲಿ (39 ಎಸೆತೆಗಳಲ್ಲಿ 75) ಮತ್ತು ಬೆತ್ ಮೂನಿ (54 ಎಸೆತೆಗಳಲ್ಲಿ ಅಜೇಯ 78) ಭಾರತೀಯ ಬೌಲರ್ ಗಳನ್ನು ದಂಡಿಸಲಾರಂಭಿಸಿದರು.


ಇವರಿಬ್ಬರು ಮೊದಲ ವಿಕೆಟಿಗೆ 115 ರನ್ ಪೇರಿಸಿದರು. ಇದರಲ್ಲಿ ಅಲಿಸ್ಸಾ ಹೀಲಿ ಆಟವೇ ಅಬ್ಬರದಿಂದ ಕೂಡಿತ್ತು. ಹೀಲಿ ಕೇವಲ 39 ಎಸೆತೆಗಳಲ್ಲಿ 75 ರನ್ ಬಾರಿಸಿ ಭಾರತೀಯ ವನಿತೆಯರನ್ನು ಕಾಡಿದರು. ಇವರ ಈ ಸ್ಪೋಟಕ ಇನ್ನಿಂಗ್ಸ್ ನಲ್ಲಿ 5 ಭರ್ಜರಿ ಸಿಕ್ಸರ್ ಮತ್ತು 7 ಬೌಂಡರಿ ಸೇರಿತ್ತು.


ಶತಕದ ಕಡೆಗೆ ಮುನ್ನುಗ್ಗುತ್ತಿದ್ದ ಹೀಲಿ ರಾಧಾ ಯಾದವ್ ಬೌಲಿಂಗ್ ನಲ್ಲಿ ಔಟಾದ ನಂತರ ಆಸೀಸ್ ರನ್ ವೇಗಕ್ಕೆ ಸ್ವಲ್ಪ ಬ್ರೇಕ್ ಬಿತ್ತು. ಆದರೆ ಇನ್ನೊಂದು ತುದಿಯಲ್ಲಿ ಉತ್ತಮವಾಗಿ ಆಡುತ್ತಿದ್ದ ಬೆತ್ ಮೂನಿ ಮಾತ್ರ ಭಾರತಕ್ಕೆ ಅಪಾಯಕಾರಿಯಾಗಿಯೇ ಇದ್ದರು. ಹೀಲಿ ಔಟಾದ ನಂತರ ತನ್ನ ನೈಜ ಆಟಕ್ಕೆ ಮನ ಮಾಡಿದ ಈ ಎಡಗೈ ಆಟಗಾರ್ತಿ ಬೌಲರ್ ಗಳನ್ನು ದಂಡಿಸತೊಡಗಿದರು. ಒಂದು ಕಡೆ ನಿಗದಿತವಾಗಿ ವಿಕೆಟ್ ಬೀಳುತ್ತಿದ್ದರೂ ಮೂನಿ ಬ್ಯಾಟಿಂಗ್ ವೇಗವೇನೂ ಕಡಿಮೆಯಾಗಲಿಲ್ಲ.

ತನ್ನ ಅಜೇಯ ಆಟದಲ್ಲಿ ಬೆತ್ ಮೂನಿ ಅವರು 54 ಎಸೆತೆಗಳಲ್ಲಿ 10 ಬೌಂಡರಿ ಸಹಿತ 78 ರನ್ ಬಾರಿಸಿದರು. ತಂಡದ ಮೊತ್ತದಲ್ಲಿ 153 ರನ್ ಹೀಲಿ-ಮೂನಿ ಬ್ಯಾಟ್ ನಿಂದಲೇ ಹರಿದು ಬಂದಿದ್ದು ವಿಶೇಷ.

ದೀಪ್ತಿ ಶರ್ಮಾ 2 ವಿಕೆಟ್ ಪಡೆದರೆ ಪೂನಮ್ ಯಾದವ್ ಹಾಗೂ ರಾಧಾ ಯಾದವ್ ತಲಾ 1 ವಿಕೆಟ್ ಪಡೆದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next