Advertisement
ಬ್ಯಾಟಿಂಗ್ ಆಯ್ದುಕೊಂಡ ಭಾರತ 44.1 ಓವರ್‌ಗಳಲ್ಲಿ 180ಕ್ಕೆ ಕುಸಿಯಿತು. ಇದು ಪರ್ತ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ಮೊತ್ತಕ್ಕಿಂತ 30 ರನ್ ಹೆಚ್ಚು. ಆಸ್ಟ್ರೇಲಿಯ ಒಂದು ವಿಕೆಟಿಗೆ 86 ರನ್ ಗಳಿಸಿದ್ದು, ಮೆಕ್‌ಸ್ವೀನಿ-ಲಬುಶೇನ್ ಕ್ರೀಸ್ ಕಚ್ಚಿಕೊಂಡು ನಿಂತಿದ್ದಾರೆ. ಕಾಂಗರೂ ಪಡೆ ದೊಡ್ಡದೊಂದು ಮುನ್ನಡೆಗೆ ಸ್ಕೆಚ್ ಹಾಕಿದಂತಿದೆ. ಪರ್ತ್‌ನಲ್ಲಿ ಭಾರತ 67ಕ್ಕೆ 7 ವಿಕೆಟ್ ಉಡಾಯಿಸಿ ಮೊದಲ ದಿನವೇ ತಿರುಗಿ ಬಿದ್ದಿತ್ತು. ಆದರೆ ಇಲ್ಲಿ ಅಂಥ ಯಾವುದೇ ಬೌಲಿಂಗ್ ಮ್ಯಾಜಿಕ್ ನಡೆದಿಲ್ಲ. ಶನಿವಾರದ ಆಟದಲ್ಲಿ ಪಂದ್ಯದ ಸ್ಪಷ್ಟ ಚಿತ್ರಣ ಸಿಗಲಿದೆ.
“ನೀನು ಬಹಳ ನಿಧಾನ ಗತಿಯಲ್ಲಿ ಬೌಲಿಂಗ್ ಮಾಡುತ್ತಿ’ ಎಂದು ಪರ್ತ್‌ನಲ್ಲಿ ಅಣಕಿಸಿದ್ದ ಯಶಸ್ವಿ ಜೈಸ್ವಾಲ್ ಅವರನ್ನು ಪಂದ್ಯದ ಮೊದಲ ಎಸೆತದಲ್ಲೇ ಔಟ್ ಮಾಡುವ ಮೂಲಕ ಮಿಚೆಲ್ ಸ್ಟಾರ್ಕ್ ಭಾರತದ ಮೇಲೆ ಸವಾರಿ ಮಾಡಲಾರಂಭಿಸಿದರು. ಸ್ಟಾರ್ಕ್ ಸಾಧನೆ 48ಕ್ಕೆ 6 ವಿಕೆಟ್. ಆರಂಭಿಕನ ಸ್ಥಾನವನ್ನು ಉಳಿಸಿಕೊಂಡ ಕೆ.ಎಲ್. ರಾಹುಲ್, ಭಾರತದ ಸರದಿಯಲ್ಲೇ ಸರ್ವಾಧಿಕ 64 ಎಸೆತ ಎದುರಿಸಿ ನಿಂತರು. ಇವರ ಗಳಿಕೆ 37 ರನ್ (6 ಬೌಂಡರಿ). ಶುಭಮನ್ ಗಿಲ್ 31 ರನ್ ಮಾಡಿದರು. ಇವರಿಬ್ಬರು 69 ರನ್ ಜತೆಯಾಟ ನಡೆಸಿದಾಗ ಭಾರತದ ಬ್ಯಾಟಿಂಗ್ ಬಗ್ಗೆ ಉತ್ತಮ ಆಶಾವಾದವಿತ್ತು. ಆದರೆ ಈ ಜೋಡಿ ಬೇರ್ಪಟ್ಟ ಬೆನ್ನಲ್ಲೇ ಪಟಪಟನೆ ವಿಕೆಟ್‌ಗಳು ಉರುಳತೊಡಗಿದವು.
Related Articles
Advertisement
ಭಾರತಕ್ಕೆ ಒಂದೇ ಯಶಸ್ಸುಆಸ್ಟ್ರೇಲಿಯದ ಮೊತ್ತ 24 ರನ್ ಆದಾಗ ಉಸ್ಮಾನ್ ಖ್ವಾಜಾ (13) ಅವರಿಗೆ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದರು. ಭಾರತಕ್ಕೆ ದಕ್ಕಿದ್ದು ಇದೊಂದೇ ಯಶಸ್ಸು. ನಥನ್ ಮೆಕ್‌ಸ್ವೀನಿ 97 ಎಸೆತಗಳಿಂದ 38, ಮಾರ್ನಸ್ ಲಬುಶೇನ್ 67 ಎಸೆತಗಳಿಂದ 20 ರನ್ ಗಳಿಸಿ ಆಡುತ್ತಿದ್ದಾರೆ. ಭಾರತ ತಂಡದಲ್ಲಿ 3 ಬದಲಾವಣೆ
ಭಾರತ ತಂಡದಲ್ಲಿ 3 ಬದಲಾವಣೆ ಮಾಡಿಕೊಳ್ಳಲಾಯಿತು. ನಾಯಕ ರೋಹಿತ್ ಶರ್ಮ, ಶುಭಮನ್ ಗಿಲ್ ಮತ್ತು ಆರ್. ಅಶ್ವಿನ್ ಹನ್ನೊಂದರ ಬಳಗಕ್ಕೆ ಬಂದರು. ಪರ್ತ್‌ನಲ್ಲಿ ಆಡಿದ್ದ ದೇವದತ್ತ ಪಡಿಕ್ಕಲ್, ಧ್ರುವ ಜುರೆಲ್ ಮತ್ತು ವಾಷಿಂಗ್ಟನ್ ಸುಂದರ್ ಹೊರಗುಳಿದರು. ಆಸ್ಟ್ರೇಲಿಯ ತಂಡದಲ್ಲಿ ಒಂದು ಪರಿವರ್ತನೆ ಕಂಡುಬಂತು. ಗಾಯಾಳು ವೇಗಿ ಜೋಶ್ ಹೇಝಲ್‌ವುಡ್ ಬದಲು ಸ್ಕಾಟ್ ಬೋಲ್ಯಾಂಡ್ ಆಡಲಿಳಿದರು. ಕಪ್ಪು ಪಟ್ಟಿ ಧರಿಸಿದ ಕ್ರಿಕೆಟಿಗರು
ಫಿಲಿಪ್ ಹ್ಯೂಸ್ ಹಾಗೂ ಇಯಾನ್ ರೆಡ್‌ಪಾತ್ ಅವರ ಸ್ಮರಣಾರ್ಥ ಆಸ್ಟ್ರೇಲಿಯ ತಂಡದ ಆಟಗಾರರು ಕಪ್ಪು ಪಟ್ಟಿ ಧರಿಸಿ ಆಡಲಿಳಿದರು. ಹ್ಯೂಸ್ ಅವರ ದುರಂತ ಅಗಲಿಕೆಗೆ ಭರ್ತಿ 10 ವರ್ಷ ತುಂಬಿತು. ಪಂದ್ಯದ ಆರಂಭಕ್ಕೂ ಮುನ್ನ ಹ್ಯೂಸ್ ಅವರ ಬದುಕಿನ ಹಾದಿಯ ಸಾಕ್ಷ್ಯಚಿತ್ರವೊಂದನ್ನು ಪ್ರದರ್ಶಿಸಲಾಯಿತು. 1960-70ರ ದಶಕದ ಶ್ರೇಷ್ಠ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದ ಇಯಾನ್ ರೆಡ್‌ಪಾತ್ (83) ಕಳೆದ ರವಿವಾರ ನಿಧನ ಹೊಂದಿದ್ದರು. 66 ಟೆಸ್ಟ್ ಆಡಿದ್ದ ರೆಡ್‌ಪಾತ್ 4,737 ರನ್ ಬಾರಿಸಿದ್ದರು (8 ಶತಕ). ಎಕ್ಸ್‌ಟ್ರಾ ಇನ್ನಿಂಗ್ಸ್
* ಮಿಚೆಲ್ ಸ್ಟಾರ್ಕ್ ಟೆಸ್ಟ್ ಪಂದ್ಯವೊಂದರ ಮೊದಲ ಎಸೆತದಲ್ಲೇ ಅತ್ಯಧಿಕ 3 ಸಲ ವಿಕೆಟ್ ಉರುಳಿಸಿ ಪೆಡ್ರೊ ಕಾಲಿನ್ಸ್ ಅವರ ದಾಖಲೆಯನ್ನು ಸರಿದೂಗಿಸಿದರು. ರಿಚರ್ಡ್ ಹ್ಯಾಡ್ಲಿ, ಜೆಫ್ ಅರ್ನಾಲ್ಡ್ ಮತ್ತು ಸುರಂಗ ಲಕ್ಮಲ್ 2 ಸಲ ಈ ಸಾಧನೆಗೈದಿದ್ದಾರೆ. * ಮಿಚೆಲ್ ಸ್ಟಾರ್ಕ್ ಜೀವನಶ್ರೇಷ್ಠ ಬೌಲಿಂಗ್ ಪ್ರದರ್ಶಿಸಿದರು (48ಕ್ಕೆ 6). ಈವರೆಗೆ ಅವರು ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ 5 ಸಲ 6 ವಿಕೆಟ್ ಉರುಳಿಸಿದ್ದಾರೆ. ಶ್ರೀಲಂಕಾ ಎದುರಿನ 2016ರ ಗಾಲೆ ಪಂದ್ಯದಲ್ಲಿ 50ಕ್ಕೆ 6 ವಿಕೆಟ್ ಕೆಡವಿದ್ದು ಈವರೆಗಿನ ಅತ್ಯುತ್ತಮ ಬೌಲಿಂಗ್ ಆಗಿತ್ತು. * ಸ್ಟಾರ್ಕ್ ಭಾರತದ ವಿರುದ್ಧ ಮೊದಲ ಸಲ 5 ಪ್ಲಸ್ ವಿಕೆಟ್ ಉರುಳಿಸಿದರು. ಹಾಗೆಯೇ ಡೇ-ನೈಟ್ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ ಅತ್ಯಧಿಕ 4ನೇ ಸಲ 5 ಪ್ಲಸ್ ವಿಕೆಟ್ ಕೆಡವಿದ ಸಾಧನೆಗೈದರು. * ಸ್ಟಾರ್ಕ್ ಅಹರ್ನಿಶಿ ಟೆಸ್ಟ್‌ಗಳಲ್ಲಿ ಅತೀ ಹೆಚ್ಚು 72 ವಿಕೆಟ್ ಉರುಳಿಸಿದರು. * ಸ್ಟಾರ್ಕ್ ಈ ಸರಣಿಯ ಮೂರೂ ಇನ್ನಿಂಗ್ಸ್‌ಗಳಲ್ಲಿ ಕೆ.ಎಲ್. ರಾಹುಲ್ ಅವರನ್ನು ಔಟ್ ಮಾಡಿದರು. * ಅಡಿಲೇಡ್ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಮೊದಲ ಇನ್ನಿಂಗ್ಸ್ ನಲ್ಲಿ ಕನಿಷ್ಠ ಮೊತ್ತ ಗಳಿಸಿದ ದಾಖಲೆ ಭಾರತದ್ದಾಯಿತು (180). * ಅಡಿಲೇಡ್ ಟೆಸ್ಟ್ ಪಂದ್ಯದ ಮೊದಲ ದಿನ ಅತ್ಯಧಿಕ 36,225 ವೀಕ್ಷಕರು ಹಾಜರಿದ್ದರು. ಹಿಂದಿನ ದಾಖಲೆ 35,081 ಆಗಿತ್ತು. 2011-12ರ ಭಾರತ-ಆಸ್ಟ್ರೇಲಿಯ ನಡುವಿನ ಟೆಸ್ಟ್ ನಲ್ಲೇ ಇದು ದಾಖಲಾಗಿತ್ತು. * ಜಸ್‌ಪ್ರೀತ್ ಬುಮ್ರಾ ಕ್ಯಾಲೆಂಡರ್ ವರ್ಷವೊಂದರಲ್ಲಿ 50 ಪ್ಲಸ್ ವಿಕೆಟ್ ಉರುಳಿಸಿದ ಭಾರತದ 3ನೇ ವೇಗದ ಬೌಲರ್. ಕಪಿಲ್‌ದೇವ್ 2 ಸಲ ಈ ಸಾಧನೆ ಮಾಡಿದ್ದಾರೆ (1979ರಲ್ಲಿ 74 ವಿಕೆಟ್, 1983ರಲ್ಲಿ 75 ವಿಕೆಟ್). ಇನ್ನೋರ್ವ ವೇಗಿ ಜಹೀರ್ ಖಾನ್ (2002ರಲ್ಲಿ 51 ವಿಕೆಟ್).