ನಾಸಿಕ್: ಮೊಘಲ್ ಚಕ್ರವರ್ತಿ ಔರಂಗಜೇಬನ ಆತ್ಮವು ಕಾಂಗ್ರೆಸ್ ಪಕ್ಷದಲ್ಲಿ ಸೇರಿಕೊಂಡಿದೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ಪಟ್ಟಣದಲ್ಲಿ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಸಿಎಂ ಯೋಗಿ, ಪಿತ್ರಾರ್ಜಿತ ತೆರಿಗೆ ಪರಿಚಯಿಸುವ ಕಾಂಗ್ರೆಸ್ ಪ್ರಸ್ತಾಪದ ಬಗ್ಗೆ ಕಿಡಿ ಕಾರಿದರು. ಪಿತ್ರಾರ್ಜಿತ ತೆರಿಗೆಯು ಔರಂಗಜೇಬ್ ಮುಸ್ಲಿಮೇತರ ನಾಗರಿಕರ ಮೇಲೆ ವಿಧಿಸಿದ ಜಿಜ್ಯಾ ತೆರಿಗೆಯಂತೆ’ ಎಂದರು.
ಬಿಜೆಪಿ ಕೇವಲ ಅಧಿಕಾರಕ್ಕಾಗಿ ಚುನಾವಣೆಗೆ ಸ್ಪರ್ಧಿಸುತ್ತಿಲ್ಲ ಬದಲಾಗಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಚುನಾವಣೆಗಳನ್ನು ಎದುರಿಸುತ್ತಿದೆ.ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನ ಬೇಡ” ಎಂದರು.
‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ಭಾರತದ 140 ಕೋಟಿ ಜನರ ಭಾವನೆಗಳನ್ನು ಸಂಕೇತಿಸುತ್ತದೆ. ತನ್ನ ಮಂದಿರವನ್ನು ಧ್ವಂಸ ಮಾಡುವ ವಿಪಕ್ಷವು ಅಧಿಕಾರಕ್ಕೆ ಬರದಂತೆ ಭಗವಾನ್ ರಾಮ ನೋಡಿಕೊಳ್ಳುತ್ತಾನೆ. 2014ರ ಮೊದಲು ಪ್ರತಿ ಹಿಂದೂ ಹಬ್ಬಕ್ಕೂ ಮುನ್ನ ಗಲಭೆ ನಡೆಯುತ್ತಿತ್ತು, ಈಗ ಕಾಲ ಬದಲಾಗಿದೆ’ಎಂದರು.
“ಪಾಕಿಸ್ಥಾನದ ಪರ ಇರುವವರು ಅಲ್ಲಿಗೆ ಹೋಗಿ ಭಿಕ್ಷೆ ಬೇಡುವಂತೆ ನಾನು ಕೇಳುತ್ತೇನೆ. ಆ ರಾಷ್ಟ್ರದ ಮೇಲೆ ಹೊಗಳಿಕೆಯ ಸುರಿಮಳೆಗೈದವರಿಗೆ ಭಾರತದಲ್ಲಿ ಜಾಗವಿಲ್ಲ ಎಂದರು.