ಬೆಂಗಳೂರು:ಪೊಲೀಸರ ವೇತನ ಪರಿಷ್ಕರಣೆ ಸಂಬಂಧ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ರಾಘವೇಂದ್ರ ಔರಾದ್‌ಕರ್ ನೇತೃತ್ವದ ಸಮಿತಿ ಸಲ್ಲಿಸಿರುವ ವರದಿ ಶೀಘ್ರದಲ್ಲಿಯೇ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ.
ನಗರದ ಕೋರಮಂಗಲದ ಕೆಎಸ್‌ಆರ್‌ಪಿ 3ನೇ ಪಡೆ ಕವಾಯತು ಮೈದಾನದಲ್ಲಿ ಭಾನುವಾರ ನಡೆದ ” ಪೊಲೀಸ್ ಸಂಸ್ಮರಣೆ’ ದಿನಾಚರಣೆಯಲ್ಲಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಔರಾದ್‌ಕರ್ ವರದಿ ಕುರಿತು ಪ್ರಸ್ತಾಪಿಸಿದಾಗ, ಪೊಲೀಸರ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಿದ್ದು, ಔರಾದ್‌ಕರ್ ವರದಿ ಜಾರಿ ಸೇರಿ ಇನ್ನಿತರೆ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ಹೇಳಿದರು.
ಡಾ.ಜಿ.ಪರಮೇಶ್ವರ್ ಅವರು ಗೃಹ ಸಚಿವರಾಗಿದ್ದಾಗ ಸಮಿತಿ ರಚಿಸಿ ವರದಿ ಪಡೆದಿರುವ ಬಗ್ಗೆ ಹಾಗೂ ವೇತನ ಹೆಚ್ಚಳ ಸಂಬಂಧ ಕ್ರಮ ಕೈಗೊಳ್ಳುವಂತೆ ಹಲವಾರು ಬಾರಿ ನನ್ನೊಡನೆ ಚರ್ಚಿಸಿದ್ದಾರೆ. ಪೊಲೀಸರ ಕುಟುಂಬಗಳಿಗೆ ವಸತಿ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲು ಮನವಿ ಮಾಡಿದ್ದಾರೆ. ಹೀಗಾಗಿ, ಸರ್ಕಾರ ಪೊಲೀಸರ ಬೇಡಿಕೆಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು.
ಸಾಮಾಜಿಕ ಸಾಮರಸ್ಯ ಕದಡುವ,ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗುವವರನ್ನು ಯಾವುದೇ ಮುಲಾಜಿಲ್ಲದೆ ಪೊಲೀಸರು ಮಟ್ಟಹಾಕಬೇಕು. ಜಾತಿ, ಧರ್ಮಗಳ ಹೆಸರಿನಲ್ಲಿ ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲು ಸರ್ಕಾರ ಮುಕ್ತ ಅವಕಾಶ ನೀಡಲಿದೆ.ರಾಜ್ಯದಲ್ಲಿ ಮಾದಕ ವಸ್ತು ಮಾರಾಟಕ್ಕೆ ಕಡಿವಾಣ ಹಾಕುವ ಮಹತ್ತರ ಜವಾಬ್ದಾರಿ ಇಲಾಖೆ ಮೇಲಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸುಂತೆ ಮುಖ್ಯಮಂತ್ರಿಯವರು ಸೂಚಿಸಿದರು.
ದೇಶದಲ್ಲೇ ರಾಜ್ಯ ಪೊಲೀಸ್ ಕರ್ತವ್ಯನಿಷ್ಠೆ ಮತ್ತು ಪ್ರಾಮಾಣಿಕ ಸೇವೆಯಲ್ಲಿ ಹೆಸರು ಪಡೆದಿದೆ.ನಾಡನ್ನು ರಕ್ಷಣೆ ಮಾಡುತ್ತಿರುವ ನಿಮಗೆ ರಾಜ್ಯದ ಪರವಾಗಿ ಗೌರವ ಸಲ್ಲಿಸುತ್ತೇನೆ. ಮತ್ತಷ್ಟು ಜನಸ್ನೇಹಿಯಾಗಿ ಇಲಾಖೆ ಕಾರ್ಯನಿರ್ವಹಿಸಲಿ ಎಂದು ಸಲಹೆ ನೀಡಿದರು.
ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಸರಕಾರ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಗೃಹ ಇಲಾಖೆ ಕಾರ್ಯದರ್ಶಿ ರಜನೀಶ್, ನಟ ಸುದೀಪ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕಿ ನೀಲಮಣಿ ಎನ್.ರಾಜು, ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಉಪಸ್ಥಿತರಿದ್ದರು.