ಬೆಂಗಳೂರು: ಪೊಲಿಸ್ ಸಿಬ್ಬಂದಿ ವೇತನ ಹೆಚ್ಚಳ ಕುರಿತಂತೆ ಎಡಿಜಿಪಿ ರಾಘವೇಂದ್ರ ಔರಾದ್ಕರ್ ನೀಡಿರುವ ವರದಿಯನ್ನು ಪ್ರತ್ಯೇಕವಾಗಿ ಜಾರಿಗೊಳಿಸುವುದು ಅಸಾಧ್ಯ ಎಂದು ಗೃಹ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಗೃಹ ಇಲಾಖೆ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವ ಭಾವಿ ಸಭೆ ನಡೆಸಿ ನಂತರ ಮಾತನಾಡಿದ ಅವರು, ರಾಘವೇಂದ್ರ ಔರಾದ್ಕರ್ ವರದಿಯ ಶಿಫಾರಸ್ಸುಗಳನ್ನು 6ನೇ ವೇತನ ಆಯೋಗದ ಜೊತೆಗೆ ಸೇರ್ಪಡೆ ಮಾಡುತ್ತೇವೆ. ಹೀಗಾಗಿ ಪ್ರತ್ಯೇಕವಾಗಿ ಜಾರಿಗೊಳಿಸಲು ಆಗುವುದಿಲ್ಲ ಎಂದು ತಿಳಿಸಿದರು.
ಗೃಹ ಇಲಾಖೆಯಲ್ಲಿ ಹೈದರಬಾದ್ ಕರ್ನಾಟಕದ ಮೀಸಲಾತಿ ದುರುಪಯೋಗ ಆಗಿದೆ ಎನ್ನುವ ಆರೋಪ ಸತ್ಯಕ್ಕೆ ದೂರವಾಗಿದ್ದು, 371 ಜೆ ಮೀಸಲಾತಿ ದುರ್ಬಳಕೆಯಾಗಿಲ್ಲ. ಈ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದೇನೆ ಎಂದರು.
ಬೆಂಗಳೂರಿನ ಕಸ, ವಿದ್ಯುತ್, ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು, ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ದೊರೆಯುವ ನಿರೀಕ್ಷೆ ಇದೆ ಎಂದು ಹೇಳಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಬದಲಾಯಿಸುವಂತೆ ರಾಹುಲ್ ಗಾಂಧಿಗೆ ದೂರು ಕೊಟ್ಟಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ.
– ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ