Advertisement

ಒಂದೇ ಸೂರಿನಡಿ ಬರಲಿ ಕಚೇರಿ

01:12 PM Sep 13, 2019 | Naveen |

ರವೀಂದ್ರ ಮುಕ್ತೇದಾರ
ಔರಾದ:
ತಾಲೂಕು ಕೇಂದ್ರವಾಗಿ ದಶಕಗಳು ಕಳೆದರೂ ತಾಲೂಕು ಮಟ್ಟದಲ್ಲಿ ಇರಬೇಕಾದ ಕಚೇರಿಗಳು ಇಲ್ಲದೇ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಸಾರ್ವಜನಿಕರು ಪ್ರತಿನಿತ್ಯ ತಾಲೂಕಿನಲ್ಲಿಯೇ ಇಲ್ಲದ ಕಚೇರಿಗಾಗಿ ಅಲೆಯುವ ಸ್ಥಿತಿ ಬಂದಿದೆ.

Advertisement

ಔರಾದ ತಾಲೂಕು ವ್ಯಾಪ್ತಿಯ ಪ್ರತಿಯೊಂದು ಗ್ರಾಮ ಹಾಗೂ ತಾಂಡಾ ನಿವಾಸಿಗಳು ಸರ್ಕಾರಿ ಯೋಜನೆಯ ಲಾಭ ಪಡೆಯಲು ಹಾಗೂ ಅಗತ್ಯ ಮಾಹಿತಿಗಾಗಿ ದಶಕದಿಂದ ದೂರ ದೂರ ಓಡಾಡುವಂತಾಗುತ್ತಿದೆ. ಮೂರು ರಾಜ್ಯಗಳಿಗೆ ಅಂಟಿಕೊಂಡಿರುವ ಗಡಿ ತಾಲೂಕಿನ ಜನರಿಗೆ ಮಾತೃ ಭಾಷೆ ಜ್ಞಾನದ ಕೊರತೆಯಿಂದ ಸರ್ಕಾರಿ ಯೋಜನೆಗಳಿಂದ ವಂಚಿತರಾಗುತ್ತಿರುವುದು ಒಂದಡೆಯಾದರೆ, ಇನ್ನೆಂದಡೆ ತಾಲೂಕು ಕೇಂದ್ರದಲ್ಲಿ ಸರ್ಕಾರಿ ಕಚೇರಿಗಳು ಇಲ್ಲದೆ ಸೌಲಭ್ಯದಿಂದ ಜನರು ವಂಚಿತರಾಗುತ್ತಿದ್ದಾರೆ.

1951ರಿಂದ 1977ನೇ ವರ್ಷದ ತನಕ ಸಂತಪೂರ ತಾಲೂಕು ಕೇಂದ್ರವಾಗಿತ್ತು. 15-6-1977ರಲ್ಲಿ ಸರ್ಕಾರದ ಅಧಿನ ಕಾರ್ಯದರ್ಶಿ ಎಂ.ಎಸ್‌. ಬಸವರಾಜಯ್ಯ ಔರಾದ ತಾಲೂಕು ಕೇಂದ್ರವಾಗಿ ಆದೇಶ ಮಾಡಿದರು. ಹೀಗಾಗಿ ತಾಲೂಕು ಅಭಿವೃದ್ಧಿ ಮಂಡಳಿ ಇಂದಿನ (ತಾಲೂಕು ಪಂಚಾಯತ ಕಚೇರಿ) ಶಿಕ್ಷಣಾಧಿಕಾರಿಗಳ ಕಚೇರಿಗಳು ಸಂತಪೂರದಿಂದ ಔರಾದಗೆ ಸ್ಥಳಾಂತರ ಮಾಡಲಾಗಿತ್ತು. ಅಂದಿನಿಂದ ಇಂದಿನವರೆಗೂ ಸಾರ್ವಜನಿಕರು ಸರ್ಕಾರಿ ಕೆಲಸಕ್ಕಾಗಿ ಔರಾದ, ಸಂತಪೂರ ಮತ್ತು ಬೀದರನಲ್ಲಿರುವ ಕಚೇರಿಗಾಗಿಯೇ ಅಲೆಯುವಂತಾಗಿದೆ.

ತಾಲೂಕಿನಲ್ಲಿಲ್ಲದ ಕಚೇರಿಗಳು: ಲೋಕೋಪಯೋಗಿ ಇಲಾಖೆ, ಶಿಸು ಅಭಿವೃದ್ಧಿ ಅಧಿಕಾರಿಗಳ ಕಚೇರಿ, ಕೈಗಾರಿಗೆ ವಿಸ್ತೀರ್ಣ ಅಧಿಕಾರಿಗಳ ಕಚೇರಿ, ಮೀನುಗಾರಿಕೆ ಇಲಾಖೆ ಕಚೇರಿ, ವಲಯ ಅರಣ್ಯ ಅಧಿಕಾರಿಗಳ ಕಚೇರಿ ಸಂತಪೂರನಲ್ಲಿವೆ. ಇದು ಔರಾದ ತಾಲೂಕು ಕೇಂದ್ರದಿಂದ ಹತ್ತು ಕಿ.ಮೀ. ಅಂತರದಲ್ಲಿದೆ. ಅದರಂತೆ ಸಣ್ಣ ನೀರಾವರಿ ಇಲಾಖೆ, ಭೂಸೇನೆ ನಿಗಮ ಸೇರಿದಂತೆ ಇನ್ನಿತರ ಕಚೇರಿಗಳು ಬೀದರ ಜಿಲ್ಲಾ ಕೇಂದ್ರದಲ್ಲಿವೆ.

ಸರ್ಕಾರ ಪ್ರತಿವರ್ಷ ಸಾರ್ವಜನಿಕ ಕಲ್ಯಾಣಕ್ಕಾಗಿ ನೂರಾರು ಯೋಜನೆಯನ್ನು ಜಾರಿಗೆ ತರುತ್ತಿದೆ. ಔರಾದ ತಾಲೂಕು ವ್ಯಾಪ್ತಿಯ ಸಾರ್ವಜನಿಕರು ಸಂತಪೂರ ಹಾಗೂ ತಾಲೂಕಿನಿಂದ ನಲ್ವತ್ತು ಕಿ.ಮೀ. ಅಂತರದಲ್ಲಿರುವ ಬೀದರ ಜಿಲ್ಲಾ ಕೇಂದ್ರಕ್ಕೆ ತೆರಳಿ ಅಗತ್ಯ ಸೌಕರ್ಯ ಪಡೆದುಕೊಳ್ಳುವ ಅನಿವಾರ್ಯತೆ ಬಂದಿದೆ.

Advertisement

ಸರ್ಕಾರ ಹಾಗೂ ಸಚಿವರು ಕೂಡಲೇ ಸಾರ್ವಜನಿಕರ ಅನುಕೂಲಕ್ಕಾಗಿ ಜಿಲ್ಲಾ ಕೇಂದ್ರದಲ್ಲಿರುವ ಕಚೇರಿಗಳನ್ನು ತಾಲೂಕಿಗೆ ತರಲು ಮುಂದಾಗಬೇಕು. ಆಗ ಮಾತ್ರ ಸರ್ಕಾರದ ವಿವಿಧ ಯೋಜನೆಗಳನ್ನು ಲಾಭ ಜನರು ಪಡೆದುಕೊಳ್ಳಲು ಅನುಕೂಲವಾಗುತ್ತದೆ.

ಯಾರೂ ಧ್ವನಿ ಎತ್ತುತ್ತಿಲ್ಲ: ಸಾರ್ವಜನಿಕರು ಸರ್ಕಾರದ ಯೋಜನೆಗಳ ಲಾಭ ಪಡೆಯಲು ಹಾಗೂ ಮೂರು ಕಡೆ ಇರುವ ಇಲಾಖೆಯಲ್ಲಿನ ವಿವಿಧ ಮಾಹಿತಿಗಳನ್ನು ಪಡೆದುಕೊಳ್ಳಲು ದಶಕಗಳಿಂದ ಅಲೆಯುತ್ತಿದ್ದಾರೆ. ಆದರೆ ನಮ್ಮನಾಳುವ ನಾಯಕರು, ಸಂಘ ಸಂಸ್ಥೆಯ ಮುಖಂಡರು ಹಾಗೂ ಸಾರ್ವಜನಿಕರು ಈ ಬಗ್ಗೆ ಧ್ವನಿ ಎತ್ತದೆ ಇರುವುದು ದುರಾದೃಷ್ಟದ ಸಂಗತಿಯಾಗಿದೆ.

ಔರಾದ ತಾಲೂಕು ಕೇಂದ್ರಸ್ಥಾನದಲ್ಲಿ ತಾಲೂಕಿನಲ್ಲಿರುವ ಎಲ್ಲ ಇಲಾಖೆಯ ಕಚೇರಿಗಳು ಒಂದೇ ಸೂರಿನಡಿ ಇರಬೇಕೆಂಬ ಉದ್ದೇಶದಿಂದ ಸರ್ಕಾರ ಪಟ್ಟಣದಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಮಿನಿವಿಧಾನ ಸೌಧ ನಿರ್ಮಾಣ ಮಾಡಿದೆ. ಆದರೆ ತಾಲೂಕಿನಲ್ಲಿ ಇರಬೇಕಾದ ಕಚೇರಿಗಳು ಇಲ್ಲದೇ ಜನರು ಅಲ್ಲಿ ಇಲ್ಲಿ ಸುತ್ತುವಂತಾಗಿದೆ.

ಸಂತಪೂರ ಔರಾದ ತಾಲೂಕು ಕೆಂದ್ರಸ್ಥಾನದಿಂದ ಕೇವಲ ಕಿ.ಮೀ. ಅಂತರದಲ್ಲಿದೆ. ಬೀದರ ಜಿಲ್ಲಾ ಕೇಂದ್ರ ದಲ್ಲಿರುವ ಸಣ್ಣ ನಿರಾವರಿ ಇಲಾಖೆ ಸೇರಿದಂತೆ ಇನ್ನುಳಿದ ಕಚೇರಿಗಳ ಸಂಪೂರ್ಣ ಮಾಹಿತಿ ಪಡೆದು ಔರಾದ ತಾಲೂಕು ಕೇಂದ್ರ ಸ್ಥಾನಕ್ಕೆ ಸ್ಥಳಾಂತರಿಸಲು ಪ್ರಯತ್ನ ಮಾಡುತ್ತೇನೆ.
ಡಾ| ಎಚ್.ಆರ್‌. ಮಹಾದೇವ,
ಜಿಲ್ಲಾಧಿಕಾರಿಗಳು ಬೀದರ

ತಾಲೂಕಿನಲ್ಲಿ ಇರಬೇಕಾದ ಕಚೇರಿಗಳು ಇಲ್ಲದಿರುವುದರಿಂದ ಸರ್ಕಾರ ನಮಗಾಗಿ ಜಾರಿಗೆ ತಂದಿರುವ ಯೋಜನೆಗಳ ಬಗ್ಗೆ ನಮಗೆ ಪೂರ್ಣ ಮಾಹಿತಿ ಸಿಗುತ್ತಿಲ್ಲ. ಇದರಿಂದ ಸರ್ಕಾರದ ಯೋಜನೆಯ ಲಾಭದಿಂದ ವಂಚಿತರಾಗುತ್ತಿದ್ದೇವೆ. ಜಿಲ್ಲೆಯಲ್ಲಿರುವ ಕಚೇರಿಗಳನ್ನು ತಾಲೂಕಿಗೆ ಸ್ಥಳಾಂತರ ಮಾಡಿ.
ರಾಜೇಶ ಪಾಟೀಲ,
ತಾಲೂಕಿನ ನಿವಾಸಿ

Advertisement

Udayavani is now on Telegram. Click here to join our channel and stay updated with the latest news.

Next