Advertisement

ಪಿಎಂ ಆವಾಸ್‌ ಮನೆಗಳಿಗೆ ಆಗಸ್ಟ್‌ ಗಡುವು

12:33 PM Jun 25, 2019 | Suhan S |

ಹುಬ್ಬಳ್ಳಿ: ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳ ಕಾಮಗಾರಿಯನ್ನು ಆಗಸ್ಟ್‌ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಗುತ್ತಿಗೆದಾರರಿಗೆ ಸೂಚಿಸಿದರು.

Advertisement

ಚಾಮುಂಡೇಶ್ವರಿ ನಗರದಲ್ಲಿ ಪ್ರಧಾನಮಂತ್ರಿ ಆವಾಸ್‌ ಯೋಜನೆಯಡಿ ನಿರ್ಮಿಸಲಾಗುತ್ತಿರುವ 63 ಮನೆಗಳ ಕಾಮಗಾರಿ ವೀಕ್ಷಿಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ನಗರದಲ್ಲಿ ಬೆಂಗಳೂರಿನ ಗೌರಿ ಇನ್‌ಫ್ರಾ ಎಂಜಿನಿಯರ್ ವತಿಯಿಂದ ಮನೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಗುತ್ತಿಗೆದಾರರ ನಿಧಾನಗತಿ ಕಾಮಗಾರಿ ಹಾಗೂ ಕೊಳಚೆ ಮಂಡಳಿ ಎಂಜಿನಿಯರ್‌ ನಿರಾಸಕ್ತಿಯಿಂದಾಗಿ ಕಾಮಗಾರಿ ವಿಳಂಬವಾಗಿದೆ. 18 ತಿಂಗಳ ಅವಧಿ ಮುಗಿದಿದ್ದು, ಕಾಮಗಾರಿ ತ್ವರಿತಗೊಳಿಸಬೇಕು ಹಾಗೂ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಇಲ್ಲದಿದ್ದರೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಸೂಚಿಸಲಾಗಿದೆ ಎಂದರು.

ಇಲ್ಲಿ ಮನೆ ನಿರ್ಮಾಣಕ್ಕೆ ಜಾಗ ನೀಡಿದವರು ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ. ಕಾಮಗಾರಿ ವಿಳಂಬವಾದಂತೆಲ್ಲ ಅವರು ಅನಗತ್ಯವಾಗಿ ಮನೆಗಳಿಗೆ ಬಾಡಿಗೆ ನೀಡಬೇಕಾಗುತ್ತದೆ. ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಲಾಗಿದೆ ಎಂದು ಹೇಳಿದರು.

ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಲ್ಲಿ 525 ಮನೆಗಳು ಮಂಜೂರಾಗಿದ್ದು, ಅವುಗಳಲ್ಲಿ 200 ಮನೆಗಳ ಕಾಮಗಾರಿ ನಡೆಯುತ್ತಿದೆ. ಚಾಮುಂಡೇಶ್ವರಿ ನಗರದಲ್ಲಿ 80 ಮನೆಗಳನ್ನು ನಿರ್ಮಿಸಬೇಕಿದ್ದು, ಅವುಗಳಲ್ಲಿ 63 ಮನೆಗಳ ನಿರ್ಮಾಣ ನಡೆದಿದೆ. ಜಾಗ ಹಸ್ತಾಂತರವಾದ ನಂತರ ಉಳಿದ 17 ಮನೆಗಳನ್ನು ನಿರ್ಮಿಸಲಾಗುತ್ತದೆ. ಕೆಲವು ಛಾವಣಿಗಳಲ್ಲಿ ನೀರು ಸೋರಿಕೆಯಾಗುತ್ತಿರುವುದು ಕಂಡು ಬಂದಿದೆ ಎಂದರು.

ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಸಾಮಾನ್ಯರು 58,000 ರೂ. ಹಾಗೂ ಎಸ್‌ಸಿ/ಎಸ್‌ಟಿ ಜನಾಂಗದವರು 48,000 ರೂ. ನೀಡಿದರೆ 5 ಲಕ್ಷ ರೂ. ಮೊತ್ತದ ಮನೆ ನಿರ್ಮಿಸಲಾಗುತ್ತದೆ ಎಂದರು.

Advertisement

ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದಾಗಿ ಮಳೆ ನೀರು ಮನೆಗೆ ನುಗ್ಗುವಂತಾಗಿದೆ. ಕೇಂದ್ರ ರಸ್ತೆ ಅನುದಾನದಡಿ ನಿರ್ಮಿಸಲಾದ ರಸ್ತೆಗಳ ಸುತ್ತಮುತ್ತ ಯಾವುದೇ ಸಮಸ್ಯೆಯಾಗಿಲ್ಲ. ಇತರೆಡೆ ಸರಾಗವಾಗಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡದ್ದರಿಂದ ಸಮಸ್ಯೆಯಾಗಿದೆ. ಜನರು ತೊಂದರೆ ಅನುಭವಿಸುವಂತಾಗಿದೆ ಎಂದು ಹೇಳಿದರು.

ಪಾಲಿಕೆ ಆಯುಕ್ತರು ಪ್ರತಿದಿನ ಬೆಳಗ್ಗೆ ವಾರ್ಡ್‌ಗಳಿಗೆ ಭೇಟಿ ನೀಡುವ ಪರಿಪಾಠ ಬೆಳೆಸಿಕೊಳ್ಳಬೇಕು. ಇದರಿಂದ ಜನರ ಸಮಸ್ಯೆಗಳನ್ನು ಅರಿತುಕೊಳ್ಳಲು ಸಹಾಯವಾಗುತ್ತದೆ ಎಂದು ಸಲಹೆ ನೀಡಿದರು.

ಕೊಳಚೆ ಮಂಡಳಿ ಅಧಿಕಾರಿಗಳು, ಮುಖಂಡರಾದ ರವಿ ನಾಯಕ, ಸಿದ್ದು ಮೊಗಲಿ ಶೆಟ್ಟರ, ಚಳ್ಳಮರದಶೇಖ ಮೊದಲಾದವರಿದ್ದರು. ನಂತರ ಜಗದೀಶ ಶೆಟ್ಟರ ಲೋಕಪ್ಪನ ಹಕ್ಕಲ, ಗಿರಣಿ ಚಾಳಕ್ಕೆ ಭೇಟಿ ನೀಡಿ ಅಲ್ಲಿ ನಿರ್ಮಿಸಲಾಗುತ್ತಿರುವ ಮನೆಗಳ ಕಾಮಗಾರಿ ಪರಿಶೀಲಿಸಿದರು.

ಹು-ಧಾ ಸೆಂಟ್ರಲ್ ಕ್ಷೇತ್ರಕ್ಕೆ 525 ಮನೆ ಮಂಜೂರು

ಅದರಲ್ಲಿ ಪ್ರಸ್ತುತ 200 ಮನೆಗಳ ಕಾಮಗಾರಿ ಚಾಲ್ತಿ

ಚಾಮುಂಡೇಶ್ವರಿ ನಗರದಲ್ಲಿ 80 ಮನೆಗಳ ನಿರ್ಮಾಣ

Advertisement

Udayavani is now on Telegram. Click here to join our channel and stay updated with the latest news.

Next