Advertisement

ಆ. 18: ಯಕ್ಷಗಾನ ಮತ್ತು ಸಮ್ಮಾನ, ಶೈಕ್ಷಣಿಕ ನೆರವು ವಿತರಣೆ

01:35 PM Aug 16, 2019 | Suhan S |

ಮುಂಬಯಿ, ಆ. 15: ಜಗಜ್ಯೋತಿ ಕಲಾವೃಂದ ಕಳೆದ 33 ವರ್ಷಗಳಿಂದ ಸಾಮಾಜಿಕ, ಶೈಕ್ಷಣಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನೆರವೇರಿಸುತ್ತಿದ್ದು, ಅಖೀಲ ಭಾರತ ಮಟ್ಟದಲ್ಲಿ ಮಹಿಳೆಯರಿಗಾಗಿ ಕಥಾ ಹಾಗೂ ಕಾವ್ಯ ಪ್ರಶಸ್ತಿಯನ್ನು ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿಯವರ ಸ್ಮರಣಾರ್ಥ ನೆರವೇರಿಸುತ್ತಾ ಬಂದಿದೆ. ಆ. 18ರಂದು ಸಂಸ್ಥೆಯ ವತಿಯಿಂದ ಯಕ್ಷಗಾನ ಪ್ರದರ್ಶನ, ಸಮ್ಮಾನ ಹಾಗೂ ಶೈಕ್ಷಣಿಕ ನೆರವು ವಿತರಣೆ ಕಾರ್ಯಕ್ರಮವು ಸಂಜೆ 4.30ರಿಂದ ಡೊಂಬಿವಲಿ ಪೂರ್ವದ ಠಾಕೂರ್‌ ಸಭಾಗೃಹದಲ್ಲಿ ನಡೆಯಲಿದೆ.

Advertisement

ಸಿರಿಕಲಾ ಮೇಳ, ಬೆಂಗಳೂರು ಇವರಿಂದ ಅಂಬಾ ಶಪಥ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಯಕ್ಷನಾಟ್ಯ ಗುರುಗಳಾದ ಹೆಜ್ಮಾಡಿ ಮನೋಜ್‌ ಕುಮಾರ್‌ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಗುವುದು. ಅತಿಥಿಗಳಾಗಿ ಬಂಟರ ಸಂಘ ಮುಂಬಯಿ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ, ಬಂಟರ ಸಂಘ ಭಿವಂಡಿ-ಬದ್ಲಾಪುರ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸತೀಶ್‌ ಎನ್‌. ಶೆಟ್ಟಿ, ಡೊಂಬಿವಲಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ ಸುಕುಮಾರ್‌ ಶೆಟ್ಟಿ, ಡೊಂಬಿವಲಿ ಕರ್ನಾಟಕ ಸಂಘದ ಅಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ, ಯಕ್ಷ ಮಾನಸ ಮುಲುಂಡ್‌ ಅಧ್ಯಕ್ಷ ಶೇಖರ ಆರ್‌. ಶೆಟ್ಟಿ, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ್‌ ಶೆಟ್ಟಿ, ಯಕ್ಷಕಲಾ ಸಂಸ್ಥೆ ಜಗದಂಬಾ ಮಂದಿರ ಅಧ್ಯಕ್ಷ ಹರೀಶ್‌ ಶೆಟ್ಟಿ, ಶ್ರೀ ರಾಧಾಕೃಷ್ಣ ಶನೀಶ್ವರ ದೇವಸ್ಥಾನ ಡೊಂಬಿವಲಿ ಪ್ರಧಾನ ಅರ್ಚಕ ಪ್ರಕಾಶ ಭಟ್ ಕಾನಂಗಿ, ಯಕ್ಷಕಲಾ ಸಂಸ್ಥೆ ಜಗದಂಬಾ ಮಂದಿರ ಡೊಂಬಿವಲಿ ಗೌರವ ಪ್ರಧಾನ ಕಾರ್ಯದರ್ಶಿ ರಾಜೇಶ್‌ ಕೋಟ್ಯಾನ್‌, ಬಂಟರ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿ ಸಂಚಾಲಕ ರಾಜೀವ ಭಂಡಾರಿ ಇವರು ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯಕ್ಷಗಾನ ಕಲಾಭಿಮಾನಿಗಳು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸುವಂತೆ ವೃಂದದ ಅಧ್ಯಕ್ಷ ರಮೇಶ ಎ. ಶೆಟ್ಟಿ, ಉಪಾಧ್ಯಕ್ಷ ಜಯಕರ್‌ ಜಿ. ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಬಾಬು ಮೊಗವೀರ, ಕೋಶಾಧಿಕಾರಿ ಚಂದ್ರಾ ಎನ್‌. ನಾಯ್ಕ ಹಾಗೂ ಸಂಘಟನಾ ಕಾರ್ಯದರ್ಶಿ ಸಂತೋಷ್‌ ಪಿ. ಶೆಟ್ಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಜ್ಮಾಡಿ ಮನೋಜ್‌ ಕುಮಾರ್‌:

ಹೆಜ್ಮಾಡಿ ಮನೋಜ್‌ಕುಮಾರ್‌ ಅವರು ಮುಂಬಯಿಯ ಯಕ್ಷಗಾನ ರಂಗದ ಅನುಭವಿ ಕಲಾವಿದ, ಯಕ್ಷಗಾನದ ಗುರುವಾಗಿ, ಮೇಕಪ್‌ ಕಲಾವಿದರಾಗಿ ಯಕ್ಷಗಾನ ವೇಷಭೂಷಣವನ್ನು ಒದಗಿಸುವ ಪ್ರಸಾದನ ಕಲಾವಿದ ಮೂಲ್ಕಿ ಸಮೀಪದ ಹೆಜ್ಮಾಡಿ ಲಕ್ಷ್ಮಣ ಕೋಟ್ಯಾನ್‌ ಮತ್ತು ಪದ್ಮಾವತಿ ಕೋಟ್ಯಾನ್‌ ದಂಪತಿ ಪುತ್ರ. ಇವರು ತನ್ನ ಪ್ರಾಥಮಿಕ ವಿದ್ಯಾಭ್ಯಾಸವನ್ನು ಘಾಟ್ಕೋಪರ್‌ ಅಸಲ್ಫಾ ವಿಲೇಜಿನ ಕನ್ನಡ ಮುನ್ಸಿಪಾಲ್ ಶಾಲೆಯ ಮತ್ತು ಕರ್ನಾಟಕ ಫ್ರೀ ರಾತ್ರಿ ಶಾಲೆಯಲ್ಲಿ ಎಸ್‌ಎಸ್‌ಸಿ ಪೂರೈಸಿ ಜೀವನೋಪಾಯಕ್ಕಾಗಿ ತಂದೆಯ ಟೈಲರ್‌ ವೃತ್ತಿಯನ್ನು ಆರಿಸಿಕೊಂಡರು. ಶಾಲಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರದರ್ಶಿಸಲ್ಪಟ್ಟ ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸಿ ಆ ಶ‌ಕ್ತಿಯೇ ಮುಂದುವರಿದು ನಂತರ ಶ್ರೀ ಗೀತಾಂಬಿಕ ಯಕ್ಷಗಾನ ಮಂಡಳಿಯ ಚೆಂಡೆಯ ನಿನಾದ ಇವರನ್ನು ಅತ್ತ ಸೆಳೆಯಿತು.

ಯಕ್ಷಗಾನದ ಪ್ರಾಥಮಿಕ ಹೆಜ್ಜೆಗಾರಿಕೆಯನ್ನು ಯಕ್ಷಗಾನ ಕಲಾವಿದ ನರೇಂದ್ರ ತೋಳಾರ್‌ರವರಿಂದ ಕಲಿತು ಹೆಚ್ಚಿನ ತರಬೇತಿಯನ್ನು ಯಕ್ಷಗಾನ ಸವ್ಯಸಾಚಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಂದ ಪಡೆದು ಗುರುಗಳ ಆಶೀರ್ವಾದಗಳೊಂದಿಗೆ ತನ್ನ 13ನೇ ಹರೆಯದಲ್ಲಿ ಗೀತಾಂಬಿಕ ಮೇಳದಲ್ಲಿ ಪ್ರಥಮ ಬಾರಿ ಗೆಜ್ಜೆ ಕಟ್ಟಿದರು. ಮುಂದೆ ಪುಂಡು ವೇಷದಾರಿಯಾಗಿ ಚಂಡ-ಮುಂಡ, ಕೋಟಿ-ಚೆನ್ನಯ ಕಾಂತಾಬಾರೆ-ಬುದಬಾರೆ, ಮಹಿಷಾಸುರ ಮೊದಲಾದ ಪಾತ್ರಗಳ ಮೂಲಕ ಜನಮನ ಗೆದ್ದರು. ಇವರು ತವರೂರಿನ ಯಕ್ಷಗಾನ ಮೇಳದ ಕರೆಗೆ ಓಗೊಟ್ಟು ಸುಬ್ರಹ್ಮಣ್ಯ ಮೇಳ, ತಳಕಳ ಮೇಳ, ರಾಜರಾಜೇಶ್ವರಿ ಮೇಳ, ಪೊಳಲಿ, ಮಧೂರು ಮೇಳಗಳಲ್ಲಿ ಸೇವೆ ಸಲ್ಲಿಸಿ ಅಪಾರ ಅನುಭವ ಪಡೆದು ಮರಳಿ ಮುಂಬಯಿ ಸೇರಿದರು. ಗುರು ನಾರಾಯಣ ಮಂಡಳಿ, ದುರ್ಗಾಪರಮೇಶ್ವರಿ ಮೇಳ ಮತ್ತು ಜನಪ್ರಿಯ ಯಕ್ಷಗಾನ ಮಂಡಳಿ ಸೇರಿದಂತೆ ನಗರದ ವಿವಿಧ ಮಂಡಳಿಗಳಲ್ಲಿ ಕಲಾವಿದರಾಗಿ ಸೇವೆ ಸಲ್ಲಿಸಿದ್ದಾರೆ. ಪ್ರಥಮವಾಗಿ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯಲ್ಲಿ ನಾಟ್ಯ ಶಿಕ್ಷಕರಾಗಿ ಅನಂತರ ಭ್ರಾಮರಿ ಯಕ್ಷಕಲಾ ನಿಲಯದಲ್ಲಿ 5 ವರ್ಷ ಯಕ್ಷ ನಾಟ್ಯ ತರಬೇತಿ ಕೊಟ್ಟಿದ್ದಾರೆ.

Advertisement

ಪ್ರಸ್ತುತ ಡೊಂಬಿವಲಿಯ ಯಕ್ಷಕಲಾ ಸಂಸ್ಥೆಯ ಜಗದಂಬಾ ಮಂದಿರದಲ್ಲಿ ಪ್ರತಿ ರವಿವಾರ ಯಕ್ಷಗಾನ ತರಬೇತಿ ಶಿಬಿರದಲ್ಲಿ ಗುರುಗಳಾಗಿ ತರಬೇತಿ ನೀಡುತ್ತಿದ್ದಾರೆ. ಆ ಮಕ್ಕಳಿಂದ 2 ಪ್ರಯೋಗವನ್ನು ಅತಿ ಉತ್ತಮ ರೀತಿಯಲ್ಲಿ ಪ್ರದರ್ಶಿಸಿ ಜನಮನ ಗೆದ್ದಿದ್ದಾರೆ. ತನ್ನ ಗುರುಗಳು ತನ್ನಿಂದ ಯಾವುದೇ ರೀತಿಯ ಹಣವನ್ನು ಪಡೆಯದೇ ನಾಟ್ಯ ಕಲಿಸಿದ್ದಾರೆ, ದೇವರು ಕೊಟ್ಟ ಕಲೆಯನ್ನು ಇತರರಿಗೆ ತಾನೂ ಕೂಡ ಉಚಿತವಾಗಿ ನೀಡಿ ಆ ಕಲೆಯನ್ನು ಉಳಿಸಿ ಬೆಳೆಸಬೇಕೆಂಬ ಆಸೆ ಇವರದ್ದಾಗಿದೆ. ಜಗದಂಬಾ ಮಂದಿರದ ಶಿಬಿರದಲ್ಲಿ ಕಲಿಯುತ್ತಿರುವ ಮಕ್ಕಳಿಂದ ಶೀಘ್ರದಲ್ಲಿ 5 ಯಕ್ಷಗಾನ ಪ್ರದರ್ಶನ ನೀಡಲಿದ್ದಾರೆ.

ಮುಂಬಯಿ ಸಂಘ ಸಂಸ್ಥೆಗಳಿಗೆ ಮತ್ತು ಶಾಲಾ ಕಾಲೇಜುಗಳಿಗೆ ಉಪಯುಕ್ತವಾಗುವಂತೆ ಮಂಗಳೂರಿನ ಕದ್ರಿಯಿಂದ ಯಕ್ಷಗಾನ ಪರಿಕರವನ್ನು ಮುಂಬಯಿಗೆ ತರಿಸಿ ಈಗ ನಂದಿನಿ ಆರ್ಟ್ಸ್ನಲ್ಲಿ ಮೂರು ದೇವಿ ಮಹಾತ್ಮೆ ಯಕ್ಷಗಾನ ಏಕಕಾಲದಲ್ಲಿ ನಡೆದರೆ ಅದಕ್ಕೆ ಬೇಕಾಗುವ ವೇಷ ಭೂಷಣಗಳು ಇವರಲ್ಲಿದೆ. ಅವರ ಕಲಾ ಸೇವೆಯನ್ನು ಪರಿಗಣಿಸಿ ಜಗಜ್ಯೋತಿ ಕಲಾವೃಂದವು ಅವರನ್ನು ಸಮ್ಮಾನಿಸಲು ನಿರ್ಧರಿಸಿದ್ದು ಅವರ ಸಾಧನೆಗೆ ಸಂದ ಪ್ರತಿಫಲವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next